ಸೋಮವಾರ, ಜನವರಿ 20, 2020
24 °C

ಗ್ರಾಮೀಣ ಭಾರತ ತಲುಪದ ಐಐಟಿ: ಡಾ. ಹರೀಶ್‌ ಹಂದೆ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ’ಐಐಟಿಯಲ್ಲಿ ಓದಿದವರು ನಾವು ಕಟ್ಟುವ ತೆರಿಗೆಯಲ್ಲಿ ಶಿಕ್ಷಣ ಪಡೆದು ಅಮೆರಿಕದಂತಹ ದೊಡ್ಡ ದೇಶಗಳ ಉದ್ಧಾರ ಮಾಡುತ್ತಾರೆ. ಇಲ್ಲಿಯವರೆಗೂ ದೇಶದ ಗ್ರಾಮೀಣ ಭಾಗಕ್ಕೆ ಅವರ ಕೊಡುಗೆ ಶೂನ್ಯ‘ ಎಂದು ಸೆಲ್ಕೋ ಫೌಂಡೇಷನ್‌ ಮುಖ್ಯಸ್ಥ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಡಾ. ಹರೀಶ ಹಂದೆ ಬೇಸರ ವ್ಯಕ್ತಪಡಿಸಿದರು. 

ಇಲ್ಲಿನ ಬಿವಿವಿ ಸಂಘದ ಬಸವೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ’ಸೌರ ತಂತ್ರಜ್ಞಾನ ಹಾಗೂ ನಾವೀನ್ಯ ತರಬೇತಿ’ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದ ಅವರು, ಐಐಟಿಯಂತಹ ಉನ್ನತ ತಂತ್ರಜ್ಞಾನ ಸಂಸ್ಥೆಗಳಿಂದ ಗ್ರಾಮೀಣ ಭಾರತಕ್ಕೆ ಯಾವುದೇ ಕೊಡುಗೆ ದೊರತಿಲ್ಲ. ಇಲ್ಲಿಯವರೆಗೂ ಸ್ಥಳೀಯ ಡಿಪ್ಲೊಮಾ, ಐಟಿಐನಂತಹ ತರಬೇತಿ ಸಂಸ್ಥೆಗಳೇ ಗ್ರಾಮೀಣಾಭಿವೃದ್ಧಿಗೆ ಒಂದಷ್ಟು ಕೊಡುಗೆ ನೀಡಿವೆ’ ಎಂದು ಹೇಳಿದರು. 

‘ಗ್ರಾಮೀಣರಿಗೆ ನೆರವಾಗದ ಐಐಟಿಗಳು ದೇಶದಲ್ಲಿ ಉತ್ತುಂಗ ಸ್ಥಾನದಲ್ಲಿವೆ. ಆದರೆ ಐಟಿಐ ಹಾಗೂ ಡಿಪ್ಲೊಮಾ ಪದವಿ ಕಾಲೇಜುಗಳು ಸೌಕರ್ಯಗಳಿಂದ ವಂಚಿತವಾಗಿವೆ. ದೇಶದ ಸಮಗ್ರ ಅಭಿವೃದ್ಧಿಗೆ ಇಂತಹ ವ್ಯವಸ್ಥೆ ತಲೆಕೆಳಗಾಗಬೇಕಿದೆ. ಆಗ ಗ್ರಾಮೀಣ ಭಾರತವೂ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತದೆ’ ಎಂದರು. 

‘2040ರಲ್ಲಿನ ಗ್ರಾಮೀಣ ಭಾರತದ ಮುನ್ನೋಟ ಇಟ್ಟುಕೊಂಡು ನಾವು ಇಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸುತ್ತಿದ್ದೇವೆ. ನಮ್ಮಲ್ಲಿ ತರಬೇತಿ ಪಡೆದ ಯುವಜನತೆ ಹಾಗೂ ಮಹಿಳೆಯರು ಹೊಸ ಉದ್ಯಮ ಪ್ರಾರಂಭಿಸಲು ನೆರವಾಗಲಿದ್ದೇವೆ’ ಎಂದರು. 

ಸೆಲ್ಕೋ ಫೌಂಡೇಷನ್‌ನ ಸಿಇಒ ಮೋಹನ ಹೆಗಡೆ ಮಾತನಾಡಿ, ‘ಪಟ್ಟಣಕ್ಕೆ ಹೋಗಿ ಕೆಲಸ ಮಾಡುವವರನ್ನು ಪುನಃ ಗ್ರಾಮಕ್ಕೆ ಕರೆದುಕೊಂಡು ಬರಲು ಬೇಕಾಗುವ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಫೌಂಡೇಷನ್‌ ಗುರಿಯಾಗಿದೆ. ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದರು. 

‘ಇಲ್ಲಿಯವರೆಗೆ ಐದು ಲಕ್ಷ ಮನೆಗಳಿಗೆ ವಿದ್ಯುತ್ ನೀಡಿದ್ದೇವೆ. ಸರ್ಕಾರದಿಂದ ಯಾವುದೆ ಸೌಲಭ್ಯವನ್ನು ಪಡೆಯದೇ ಯುವಕ, ಯುವತಿಯರಿಗೆ ಹಾಗೂ ಮಹಿಳೆಯರಿಗೆ ತಂತ್ರಜ್ಞಾನ ವ್ಯವಸ್ಥೆ ಮಾಡುವುದು ನಮ್ಮ ಜವಾಬ್ದಾರಿ. ಜಗತ್ತಿನಲ್ಲಿರುವ ಅತೀ ಶ್ರೇಷ್ಠ ತಂತ್ರಜ್ಞಾನ ತ್ವರಿತಗತಿಯಲ್ಲಿ ಯುವಕರಿಗೆ ಮುಟ್ಟಿಸುವುದೇ ಫೌಂಡೇಷನ್‌ ಧೈಯ’ ಎಂದರು. 

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ಗ್ರಾಮೀಣ ಭಾಗ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ತಂತ್ರಜ್ಞಾನ ಬಗ್ಗೆ ತರಬೇತಿ ನೀಡುವುದು ಅವಶ್ಯಕ. ಸೌರ ಶಕ್ತಿಯನ್ನು ಬಳಸಿ ಕಬ್ಬಿನ ರಸ ತೆಗೆಯುವುದು ಯಂತ್ರ, ರೊಟ್ಟಿ ಮಾಡುವ ಯಂತ್ರ ಸೌರಶಕ್ತಿಯಿಂದ ಉಪಯೋಗಿಸಬಹುದಾಗಿದೆ’ ಎಂದರು. 

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ.  ಉದ್ಯಮ ಸ್ಥಾಪಿಸುವವರಿಗೆ ಬ್ಯಾಂಕ್‌ಗಳು,  ಹಣಕಾಸು ಸಂಸ್ಥೆಗಳು ಸಾಲ ನೀಡಲು ಮುಂದೆ ಬರಬೇಕಿದೆ. ನಗರದಲ್ಲಿರುವ ಡಿಸಿಸಿ ಬ್ಯಾಂಕ್‌ ಇಂತಹ ಕೆಲಸಕ್ಕೆ ಮುಂದಾಗಬೇಕು. ಈ ಬಗ್ಗೆ ಬ್ಯಾಂಕ್ ಅಧ್ಯಕ್ಷರೊಂದಿಗೆ ಸಹ ಮಾತನಾಡುವುದಾಗಿ’ ಹೇಳಿದರು. 

ಈ ಸಂಧರ್ಭದಲ್ಲಿ ಸೆಲ್ಕೋ ಫೌಂಡೇಷನ್‌ ಮುಖ್ಯಸ್ಥ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಡಾ. ಹರೀಶ ಹಂದೆ ಅವರನ್ನು ಸಂಘದ ಪರವಾಗಿ ಶಾಸಕ ವೀರಣ್ಣ ಚರಂತಿಮಠ ಸತ್ಕರಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ರಾಜ್ಯ ಸರ್ಕಾರದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಎಚ್.ಯು.ತಳವಾರ ಮಾತನಾಡಿದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಬಿವಿವಿ ಸಂಘದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಜಿ.ಬಿ.ದಾನಶೆಟ್ಟಿ, ಸೆಲ್ಕೋ ಫೌಂಡೇಷನ್‌ದ ಕೌಶಲ್ಯ ಅಭಿವೃದ್ಧಿ ವಿಭಾಗದ ಎಜಿಎಂ ಸುಧೀರ ಕುಲಕರ್ಣಿ ಸೇರಿದಂತೆ ಪಾಲಿಟೆಕ್ನಿಕ್ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು