ಸೋಮವಾರ, ಸೆಪ್ಟೆಂಬರ್ 28, 2020
28 °C
ಜಮಖಂಡಿ: ಇಂದು ಕೃಷ್ಣೆಯ ಒಳಹರಿವು ಇನ್ನಷ್ಟು ಹೆಚ್ಚಳ ಸಾಧ್ಯತೆ

ಜನ–ಜಾನುವಾರು ರಕ್ಷಣೆಗೆ ಯೋಧರ ನೆರವು

ಆರ್.ಎಸ್.ಹೊನಗೌಡ Updated:

ಅಕ್ಷರ ಗಾತ್ರ : | |

ಜಮಖಂಡಿ: ಕೃಷ್ಣೆಯ ಮುನಿಸು ತಾಲ್ಲೂಕಿನಲ್ಲಿ ತೀವ್ರಗೊಂಡಿದೆ. ತಾಲ್ಲೂಕಿನ ಪ್ರಮುಖ ರಸ್ತೆಗಳು ಸಂಪರ್ಕ ಕಳೆದುಕೊಂಡಿದ್ದು. ಪ್ರವಾಹ ಬಾಧಿತರ ನೆರವಿಗೆ ಮಂಗಳವಾರ ಅರೆಸೇನಾಪಡೆ ಧಾವಿಸಿದೆ.

ತಾಲ್ಲೂಕಿನ 27 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಅದರಲ್ಲಿ ಮುತ್ತೂರು, ಆಲಗೂರು, ಮೈಗೂರು, ಟಕ್ಕಳಕಿ, ಟಕ್ಕೋಡ, ಚಿಕ್ಕಪಡಸಲಗಿ, ಹಿರೇಪಡಸಲಗಿ, ಜಂಬಗಿ ಬಿ.ಕೆ, ಹಿಪ್ಪರಗಿ, ಬಿದರಿ, ಕಂಕನವಾಡಿ, ತುಬಚಿ, ಕಡಕೋಳ, ಶೂರ್ಪಾಲಿ ಗ್ರಾಮಗಳು ಕೃಷ್ಣೆಯ ಆರ್ಭಟಕ್ಕೆ ನಲುಗಿವೆ.

ರಾತ್ರಿ ನೀರು ಹಾಯಿಸಿದಂತೆ ಕಾಣುವ ಹೊಲ– ಗದ್ದೆಗಳಲ್ಲಿ ಮುಂಜಾನೆ ಎದ್ದಾಗ ಬೆಳೆಗಳು ತೇಲುತ್ತಿವೆ. ಇದು ರೈತರನ್ನು ಕಂಗೆಡೆಸಿದೆ. ಜಮಖಂಡಿ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಕಬ್ಬು, ಹೆಸರು, ಮೆಕ್ಕೆಜೋಳದ ಹೊಲಗಳು, ದ್ರಾಕ್ಷಿ, ಬಾಳೆ ತೋಟಗಳು ಜಲಾವೃತವಾಗಿವೆ.

ನಿಷೇಧಾಜ್ಞೆ ಜಾರಿ: ಚಿಕ್ಕಪಡಸಲಗಿ ಬ್ಯಾರೇಜ್ ಸಮೀಪದ ಸೇತುವೆ ಬಳಿ ಕೃಷ್ಣಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿಯಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರುತ್ತಿರುದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ನೀರು ಸೇತುವೆ ಮೇಲೆ ಬರಬಹುದು ಎಂಬ ಕಾರಣಕ್ಕೆ ಧಾರವಾಡ–ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಸೇತುವೆ ಮೇಲೆ ಹಾಗೂ ಸಮೀಪ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ನದಿಯ ಹರಿವಿನ ಪ್ರಮಾಣದ ವೀಕ್ಷಣೆಗೆ ಜನರು ಗುಂಪು ಗುಂಪಾಗಿ ಸೇತುವೆ ಬಳಿ ಬರುತ್ತಿದ್ದಾರೆ. ಹೀಗಾಗಿ ಯಾವುದೇ ಅವಘಡಗಳು ಆಗದಂತೆ ತಡೆಯಲು ತಾಲ್ಲೂಕು ಆಡಳಿತ ನಿಷೇಧಾಜ್ಞೆಯ ಮೊರೆ ಹೋಗಿದೆ. 

ತಾತ್ಕಾಲಿಕ ಚಿಕಿತ್ಸಾ ಕೇಂದ್ರ: ಜಮಖಂಡಿ ಹಾಗೂ ಮುಧೋಳ ತಾಲ್ಲೂಕುಗಳ ಪ್ರವಾಹ ಬಾಧಿತ ಗ್ರಾಮಗಳಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ. ಮೂರು ಆಂಬುಲೆನ್ಸ್‌ಗಳನ್ನು ಸನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಜೀವ ರಕ್ಷಕ ಔಷಧಿಗಳ ಜೊತೆ ಹಾವು, ವಿಷಕಾರಿ ಜಂತುಗಳ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಹೇಳುತ್ತಾರೆ.

ಗಂಜಿ ಕೇಂದ್ರ ವ್ಯವಸ್ಥೆ: ಆಲಗೂರು, ಚಿಕ್ಕಪಡಸಲಗಿ, ಹಿರೇಪಡಸಲಗಿ, ಹಿಪ್ಪರಗಿ, ನಾಕೂರು ಗ್ರಾಮಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

‘ಆಲಗೂರು ಗ್ರಾಮದಲ್ಲಿ ಎರಡು ಟನ್, ಮುತ್ತೂರು ಹಾಗೂ ಹಿರೇಪಡಸಲಗಿಯಲ್ಲಿ ತಲಾ ಮೂರು ಟನ್, ಕಂಕಣವಾಡಿ- ಒಂದು ಟನ್, ಶಿರಗುಪ್ಪಿ ಹಾಗೂ ಹಿಪ್ಪರಗಿಯಲ್ಲಿ ತಲಾ ಆರು ಟನ್ ಮೇವು ಸಂಗ್ರಹಿಸಲಾಗಿದೆ. ಶೀಘ್ರ ಪ್ರವಾಹಪಿಡಿತ ಗ್ರಾಮಗಳಿಗೆ ವಿತರಿಸುವ ಕೆಲಸ ಮಾಡುತ್ತೇವೆ. ಸಂರಕ್ಷಣಾ ಕಾರ್ಯಕ್ಕೆ 13 ತಾಂತ್ರಿಕ ಬೋಟ್‌ಗಳನ್ನು ಬಳಸಿಕೊಳ್ಳಲಾಗಿದ್ದು, ಬಾದಾಮಿ ತಾಲ್ಲೂಕಿನಿಂದ ಇನ್ನೂ ಮೂರು ಬೋಟ್ ತರಿಸಲಾಗುವುದು‘ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಅಶೋಕ ತೇಲಿ ತಿಳಿಸಿದ್ದಾರೆ.

‘ನದಿಯಲ್ಲಿ ನೀರಿನ ಮಟ್ಟ ಇನ್ನೂ ಹೆಚ್ಚಲಿದೆ. ಬುಧವಾರ 3.5 ಲಕ್ಷ ಕ್ಯೂಸೆಕ್ಸ್ ಒಳಹರಿವು ಇರಲಿದೆ. ಅಪಾಯದ ಸ್ಥಳದಲ್ಲಿರುವವರು ಬೇರೆಡೆಗೆ ಸ್ಥಳಾಂತರವಾಗಬೇಕು. ಇಲ್ಲದಿದ್ದರೆ ಸೈನಿಕರ ತಂಡ ಒತ್ತಾಯವಾಗಿ ಖಾಲಿ ಮಾಡಿಸಲಿದೆ‘ ಎಂದು ತಹಶೀಲ್ದಾರ ಪ್ರಶಾಂತ ಚನಗೊಂಡ ಹೇಳುತ್ತಾರೆ.

100 ಯೋಧರು
ಕೃಷ್ಣಾ ನದಿ ಪ್ರವಾಹದಿಂದ ಬಾಧಿತರ ನೆರವಿಗೆ 100 ಜನರ ಮಂದಿ ಯೋಧರ ತಂಡವನ್ನು ತಾಲ್ಲೂಕಿಗೆ ನಿಯೋಜಿಸಲಾಗಿದೆ. ಮರಾಠ ಲೈಟ್‌ಇನ್‌ಫ್ರೆಂಟಿಯ ಯೋಧರು ಮಂಗಳವಾರದಿಂದ ಕೆಲಸ ಆರಂಭಿಸಿದ್ದಾರೆ.

ಒಟ್ಟು ಆರು ತಂಡಗಳಲ್ಲಿ ಯೋಧರು ಕಾರ್ಯಾಚರಣೆ ನಡೆಸಿದ್ದು. ಹಿಪ್ಪರಗಿಯಲ್ಲಿ 18 ಮಂದಿ ಸೈನಿಕರ ತಂಡ 100 ಕುಟುಂಬಗಳನ್ನು ಸ್ಥಳಾಂತರ ಮಾಡಿದೆ. ಟಕ್ಕಳಕಿಯ ಮೂರು ನಡುಗಡ್ಡೆಗಳಲಿದ್ದ 433 ಜನರು ಹಾಗೂ 300 ಜಾನುವಾರುಗಳನ್ನು ರಕ್ಷಿಸಿ ನಾಕೂರು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.


ಜಮಖಂಡಿ ತಾಲ್ಲೂಕಿನ ಶೂರಪಾಲಿಯ ಇತಿಹಾಸ ಪ್ರಸಿದ್ಧ ಲಕ್ಷ್ಮೀನರಸಿಂಹ ದೇವಸ್ಥಾನ ಕೃಷ್ಣೆಯ ಹಿನ್ನೀರಿನಲ್ಲಿ ಜಲಾವೃತವಾಗಿದೆ.  ಚಿತ್ರ: ಮಂಜುನಾಥ ಗೋಡೆಪ್ಪನವರ

ಪೊಲೀಸ್ ಕಾವಲು
ಜಮಖಂಡಿ ತಾಲ್ಲೂಕಿನ ಟಕ್ಕಳಕಿ ಕ್ರಾಸ್‌ನಿಂದ ಜಂಬಗಿ ಸಂಪರ್ಕಿಸುವ ಹೊಸ ರಸ್ತೆ ಕೃಷ್ಣೆಯ ಸೆಳೆತಕ್ಕೆ ಸಿಲುಕಿದೆ. ಸೋಮವಾರ ರಾತ್ರಿಯಿಂದಲೇ ನದಿ ನೀರು ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿದೆ. ಒಂದೆಡೆ ರಸ್ತೆಯನ್ನೂ ಸೀಳಿದೆ. ಹೀಗಾಗಿ ಸಾವಳಗಿ ಪೊಲೀಸರು ಅಲ್ಲಿ ಹಗಲು–ರಾತ್ರಿ ಕಾವಲು ಕಾಯುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ನೀರಿನಮಟ್ಟ ಹೆಚ್ಚುತ್ತಿದ್ದು, ರಸ್ತೆ ಸಂಚಾರಕ್ಕೆ ಬಂದ್ ಮಾಡಲಾಗಿದೆ ಎಂದು ಸಾವಳಗಿ ಸರ್ಕಲ್ ಇನ್‌ಸ್ಪೆಕ್ಟರ್ ವೈ.ಆರ್.ದ್ರಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 14 ಸೇತುವೆಗಳು ಜಲಾವೃತಾಗಿವೆ. ಮಹಾಲಿಂಗಪುರ ಭಾಗದಲ್ಲಿ ಮೂರು, ರಬಕವಿ–ಬನಹಟ್ಟಿ ಎರಡು, ಜಮಖಂಡಿ ತಾಲ್ಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಒಂಬತ್ತು ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಹೀಗಾಗಿ ಅಖಂಡ ಜಮಖಂಡಿ ತಾಲ್ಲೂಕಿನ 23 ಹಳ್ಳಿಗಳಿಗೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಳಿಸಿದೆ.

ಸುರಕ್ಷಿತ ಸ್ಥಳಗಳಿಗೆ ತೆರಳಿ; ಕಾರಜೋಳ ಮನವಿ
ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಪ್ರವಾಹ ಉಲ್ಬಣಗೊಳ್ಳಲಿದೆ. ನದಿ ತೀರದ ಜನರು ಜೀವ ಹಾನಿಗೆ ಅವಕಾಶ ನೀಡದೇ ದನಕರು–ಸರಂಜಾಮುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಮುಧೋಳ ಶಾಸಕ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.

‘ನೆರೆ ಬಾಧಿತರಿಗೆ ಗಂಜಿ ಕೇಂದ್ರ, ಆಶ್ರಯ ನೀಡಲು, ವೈದ್ಯಕೀಯ ನೆರವು ನೀಡಲು ತಾಲ್ಲೂಕು ಆಡಳಿತ ಬದ್ಧವಾಗಿದೆ. ಆದರೂ ಸುರಕ್ಷತೆಯ ನಿಟ್ಟಿನಲ್ಲಿ ಮುಂಜಾಗೂಕತೆ ವಹಿಸಬೇಕಿರುವುದು ಎಲ್ಲರ ಕರ್ತವ್ಯ. ಯಾವುದೇ ಅವಘಡ‌ಗಳಿಗೆ ಅವಕಾಶ ಮಾಡಿಕೊಡಬೇಡಿ’ ಎಂದು ಕೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು