ಸೋಮವಾರ, ಏಪ್ರಿಲ್ 6, 2020
19 °C
ಕೊರೊನಾ ವೈರಸ್ ಹರಡುವಿಕೆ ಬಿಸಿ

ಸ್ತಬ್ಧವಾದ ಇಳಕಲ್ ಗ್ರಾನೈಟ್ ಉದ್ಯಮ, ಚೀನಾದಿಂದ ಆಮದು ನಿರ್ಬಂಧ

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೊರೊನಾ ವೈರಸ್ ಹರಡುವಿಕೆಯ ಬಿಸಿ ಇಲ್ಲಿನ ಇಳಕಲ್‌ನ ವಿಶ್ವಪ್ರಸಿದ್ಧ ಕೆಂಪು ಶಿಲೆ (ಗ್ರಾನೈಟ್) ಗಣಿಗಾರಿಕೆಗೆ ತಟ್ಟಿದೆ. ಕಳೆದ ಎರಡೂವರೆ ತಿಂಗಳಿನಿಂದ ಗ್ರಾನೈಟ್ ಉದ್ಯಮದಲ್ಲಿ ಅಕ್ಷರಶಃ ಹಾಹಾಕಾರ ಉಂಟಾಗಿದೆ.

’ಇಳಕಲ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಿಗುವ ಕೆಂಪು ಶಿಲೆಯ ಬಹುದೊಡ್ಡ ಗ್ರಾಹಕ ಚೀನಾ ದೇಶ. ಇಲ್ಲಿ ತೆಗೆಯುವ ಶೇ 90ರಷ್ಟು ಭಾಗ ಅಲ್ಲಿಗೆ ರಫ್ತಾಗುತ್ತದೆ. ಆದರೆ ಚೀನಾದಲ್ಲಿ ಕೊರೊನಾ ಸೋಂಕಿನ ಕಾರಣ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತಿದ್ದಂತೆಯೇ ರಫ್ತು ಸಂಪೂರ್ಣ ನಿಂತಿದೆ‘ ಎಂದು ಇಳಕಲ್ ಗ್ರಾನೈಟ್ ಕ್ವಾರಿಗಳ ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ ಗುಡಗುಂಟಿ ಹೇಳುತ್ತಾರೆ.

ಮಾರ್ಕರ್‌ಗಳು ಬರುತ್ತಿಲ್ಲ

ಗಣಿಗಾರಿಕೆ ವೇಳೆ ಇಲ್ಲಿನ ಕ್ವಾರಿಗಳಲ್ಲಿ ರಫ್ತು ದರ್ಜೆಯ ಗ್ರಾನೈಟ್‌ ದಿಮ್ಮಿಗಳನ್ನು ಗುರುತಿಸುವ ಕೆಲಸ ಚೀನಾದ ಕಂಪೆನಿಗಳ ತಂತ್ರಜ್ಞರೇ (ಮಾರ್ಕರ್‌ಗಳು) ಮಾಡುತ್ತಾರೆ. ಹೀಗಾಗಿ ಅವರು ವರ್ಷಗಟ್ಟಲೇ ಇಳಕಲ್‌ನಲ್ಲಿ ಉಳಿಯುತ್ತಾರೆ. ಡಿಸೆಂಬರ್ ಅಂತ್ಯದಲ್ಲಿ ಹೊಸ ವರ್ಷಾಚರಣೆಗೆಂದು ತಾಯ್ನಾಡಿಗೆ ತೆರಳಿದ್ದ ಅವರು, ಕೊರೊನಾ ತುರ್ತು ಪರಿಸ್ಥಿತಿಗೆ ಸಿಲುಕಿ ಮರಳಿ ಭಾರತಕ್ಕೆ ಬಂದಿಲ್ಲ. 

ಇಳಕಲ್ ಭಾಗದಲ್ಲಿ 11 ಪ್ರಮುಖ ಕ್ವಾರಿಗಳು ಇದ್ದು, 200ಕ್ಕೂ ಹೆಚ್ಚು ಗ್ರಾನೈಟ್ ಕಟ್ಟಿಂಗ್ ಹಾಗೂ ಪಾಲಿಶಿಂಗ್ ಫ್ಯಾಕ್ಟರಿಗಳು ಇವೆ. ಅವುಗಳು ಬಹುತೇಕ ಕೆಲಸ ನಿಲ್ಲಿಸಿವೆ. ಅಲ್ಲಿ ಕೆಲಸ ಮಾಡುವ ಕಾರ್ಮಿಕರು, ಜೆಸಿಬಿ, ಟಿಪ್ಪರ್, ಲಾರಿ, ಟ್ರಕ್‌ಗಳ ಚಾಲಕರು–ಸಹಾಯಕರಿಗೆ ಕೆಲಸವಿಲ್ಲದಾಗಿದೆ. ಇಡೀ ಉದ್ಯಮವೇ ಸ್ತಬ್ಧವಾಗಿದೆ ಎನ್ನುತ್ತಾರೆ.

’ಚೀನಾದಲ್ಲಿ ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಇನ್ನು ರಫ್ತು ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಈಗ ನಮ್ಮಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಗ್ರಾನೈಟ್ ಉದ್ಯಮದ ಸಂಕಷ್ಟ ಇನ್ನೆಷ್ಟು ಕಾಲ ಮುಂದುವರೆಯಲಿದೆಯೋ‘ ಎಂದು ಗುಡಗುಂಟಿ ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು