ಭಾನುವಾರ, ಜುಲೈ 25, 2021
25 °C
ಹಳೆ ಬಾಗಲಕೋಟೆ: ದಟ್ಟಣೆ ಬದಲಿಗೆ ಸುಗಮ ಸಂಚಾರಕ್ಕೆ ಮುಕ್ತ

ಅತಿಕ್ರಮಣ ತೆರವು: ಬಾಗಲಕೋಟೆಯ ಚಿತ್ರಣ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಸುಗಮ ಸಂಚಾರ ವ್ಯವಸ್ಥೆಗೆ ನೆರವಾಗಲು ಹಾಗೂ ಫುಟ್‌ಪಾತ್‌ಗಳ ಅತಿಕ್ರಮಣ ತಪ್ಪಿಸಲು ಇಲ್ಲಿನ ನಗರಸಭೆ ಅಧಿಕಾರಿಗಳು ಕೈಗೊಂಡಿರುವ ತೆರವು ಕಾರ್ಯಾಚರಣೆ ಎರಡನೇ ದಿನವಾದ ಮಂಗಳವಾರ ಬಿರುಸಿನಿಂದ ನಡೆಯಿತು.

ಬಾಗಲಕೋಟೆಯ ಬಸವೇಶ್ವರ ವೃತ್ತ, ಎಂ.ಜಿ.ರಸ್ತೆ, ಹಳೆ ಮಾರುಕಟ್ಟೆ, ಪಂಕಾ ಮಸೀದಿ ಪ್ರದೇಶದಲ್ಲಿ ಅತಿಕ್ರಮಣ ತೆರವಿಗೆ ಇಡೀ ದಿನ ಜೆಸಿಬಿ ಯಂತ್ರ ಸುದ್ದು ಮಾಡಿತು. ಪೊಲೀಸರ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಾಚರಣೆ ನೇತೃತ್ವವನ್ನು ಸ್ವತಃ ನಗರಸಭೆ ಆಯುಕ್ತ ಮುನಿಸ್ವಾಮಪ್ಪ ವಹಿಸಿದ್ದರು.

ತೆರವು ಕಾರ್ಯಾಚರಣೆಯ ಭಾಗವಾಗಿ ರಸ್ತೆ ಪಕ್ಕ, ಮಾರುಕಟ್ಟೆ ಜಾಗ, ನಗರಸಭೆಯ ಆಸ್ತಿಯಲ್ಲಿ ಅಕ್ರಮವಾಗಿ ಇಡಲಾಗಿದ್ದ ಡಬ್ಬಿ ಅಂಗಡಿ ಹಾಗೂ ಶೆಡ್‌ಗಳನ್ನು ತೆರವುಗೊಳಿಸಲಾಯಿತು. ದಶಕಗಳಿಂದ ಅಕ್ರಮವಾಗಿ ತಲೆ ಎತ್ತಿದ್ದ ಪುಟ್ಟ ಹೂವಿನ ಮಾರುಕಟ್ಟೆಯೂ ತನ್ನ ಅಸ್ತಿತ್ವ ಕಳೆದುಕೊಂಡಿತು.

ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಎಂ.ಜಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಬ್ಯಾರಿಕೇಡ್ ಹಾಕಿ ವಾಹನಗಳ ಮಾರ್ಗ ಬದಲಾಯಿಸಲಾಗಿತ್ತು. ಈ ವೇಳೆ ಯಾವುದೇ ಪ್ರತಿರೋಧ ಬಾರದಂತೆ ತಡೆಯಲು ಪೊಲೀಸರು ಬಂದೋಬಸ್ತ್ ಮಾಡಿದ್ದರು.

ಪರ್ಯಾಯ ವ್ಯವಸ್ಥೆ: ‘ಕೃಷ್ಣಾ ಥಿಯೇಟರ್ ರಸ್ತೆಯಲ್ಲಿ ಹಣ್ಣು–ತರಕಾರಿ ವ್ಯಾಪಾರಸ್ಥರ ಜೊತೆಗೆ ಹೂವು ಮಾರಾಟಕ್ಕೂ ವ್ಯವಸ್ಥೆ
ಮಾಡಲಾಗಿದೆ. ಸುರಕ್ಷಿತ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಲು ಮಾರ್ಕಿಂಗ್ ಮಾಡಿ ಅಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹೀಗಿದ್ದರೂ ಅತಿಕ್ರಮಿಸಿಕೊಂಡಿರುವ ಜಾಗ ಬಿಟ್ಟುಕೊಡಲು ಸಂಬಂಧಿಸಿದವರು ಸಿದ್ಧರಿರಲಿಲ್ಲ. ಹೀಗಾಗಿ ನಾವೇ ತೆರವುಗೊಳಿಸಿ ನಮ್ಮ ಜಾಗ ಮರಳಿ ಪಡೆದಿದ್ದೇವೆ’ ಎಂದು ನಗರಸಭೆ ಆಯುಕ್ತ ಮುನಿಸ್ವಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಯಂಪ್ರೇರಿತವಾಗಿ ತೆರವು ಗೊಳಿಸಿದರು: ನಗರಸಭೆ ಸಿಬ್ಬಂದಿ ಬರುವ ಮುನ್ನವೇ ಕೆಲವು ವ್ಯಾಪಾರಸ್ಥರು ಅತಿಕ್ರಮಿಸಿಕೊಂಡಿದ್ದ ಜಾಗವನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿದರು. ಅಂಗಡಿಕಾರರು ಅಕ್ರಮವಾಗಿ ಹಾಕಿಕೊಂಡಿದ್ದ ಶೆಡ್‌ಗಳನ್ನು ತೆಗೆದರು. ಹೂವಿನ ಮಾರುಕಟ್ಟೆಯ ಅತಿಕ್ರಮಣ ತೆರವಿನ ನಂತರ ಅಲ್ಲಿನ ದುರ್ಗಾದೇವಿ ಗುಡಿಗೆ ಸುಗಮ ಸಂಚಾರಕ್ಕೆ ಅವಕಾಶವಾಯಿತು.

ಎಂ.ಜಿ.ರಸ್ತೆಯ ಅಗಲ ಹಿಗ್ಗಿತು. ಆದರೆ ಅಲ್ಲಿ ರಸ್ತೆಯ ಬಹುಪಾಲು ಆಕ್ರಮಿಸಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿದರೆ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ವಾಹನ ಸವಾರ ಯಾಸೀನ್ ಮುಜಾವರ್ ಹೇಳಿದರು.

ಸೋಂಕು ಹೆಚ್ಚಾದರೆ ಯಾರು ಹೊಣೆ?: ‘ಹಳೇ ಬಾಗಲಕೋಟೆಯ
ಮಾರುಕಟ್ಟೆ ಪ್ರದೇಶದಲ್ಲಿ ದ್ವಿಚಕ್ರ ವಾಹನ ಇರಲಿ, ಸುಮ್ಮನೆ ನಡೆದುಕೊಂಡು ಓಡಾಡಲು ಸಾಧ್ಯವಾಗದಷ್ಟು ಜನದಟ್ಟಣೆ ಇದೆ. ಅಂಗಡಿಕಾರರ ನಡುವೆಯೇ ಸುರಕ್ಷಿತ ಅಂತರವಿಲ್ಲ. ಇಂತಹ ಸ್ಥಳದಲ್ಲಿ ಕೊರೊನಾ ಸೋಂಕು ಸ್ಫೋಟವಾದರೆ ಮುಂದೆ ಊಹಿಸಲು ಸಾಧ್ಯವಾಗದಷ್ಟು ಅಪಾಯ ಎದುರಾಗಲಿದೆ. ನಾಳೆ ಜೀವಗಳು ಹಾನಿಯಾದರೆ ಯಾರು ಹೊಣೆ? ಹೀಗಾಗಿ ತೆರವು ಕಾರ್ಯಾಚರಣೆ ನಡೆಸಿ ಜನದಟ್ಟಣೆ ತಪ್ಪಿಸಿದ್ದೇವೆ. ಇದು ಜನರ ಸುರಕ್ಷತೆಗೆ ಕೈಗೊಂಡ ಕಾರ್ಯ’ ಎಂದು ನಗರಸಭೆ ಆಯುಕ್ತ ಮುನಿಸ್ವಾಮಪ್ಪ ಹೇಳಿದರು.

‘2013ರಿಂದ ಇಲ್ಲಿಯವರೆಗೆ ಮೂರು ಬಾರಿ ತೆರವು ಕಾರ್ಯಾಚರಣೆ ನಡೆಸಿದ್ದೇವೆ. ಆಗ ವಿರೋಧಿಸದವರು ಈಗೇಕೆ ಮಾತಾಡುತ್ತಿದ್ದಾರೆ. ಸಮುದಾಯದ ಹಿತಕ್ಕಾಗಿ ನಗರಸಭೆ ತನ್ನ ಕೆಲಸ ಮಾಡಿದೆ’ ಎಂದರು.

ಕಾಲಿಡಲು ಸಾಧ್ಯವಾಗದಷ್ಟು ದಟ್ಟಣೆ ಇದ್ದ ಹೂವಿನ ಮಾರುಕಟ್ಟೆ ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸಿದ ನಂತರ ಸಿಟಿ ಬಸ್‌ ತಿರುಗಿಸಬಹುದಾಷ್ಟು ಜಾಗ ದೊರೆತಿದೆ. ಇದಕ್ಕೂ ಮುನ್ನ ವಿದ್ಯಾಗಿರಿ, ರೂಪ್‌ಲ್ಯಾಂಡ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದೇವೆ. ಅಲ್ಲಿನ ಜನರು ಸಹಕರಿಸಿದರು. ಇಲ್ಲೇಕೆ ವಿರೋಧ? ಇದರಲ್ಲಿ ರಾಜಕೀಯ ಸಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.