ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನೂ ಹಸಿದವಳು; ಹಸಿದವರಿಗಾಗಿಯೇ ದುಡಿಯುವೆ...’

Last Updated 11 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಬಾಗಲಕೋಟೆ: ’ಹೊಟ್ಟೆ ತುಂಬಿದವರಿಗೆ ಹಸಿದವರ ಕಷ್ಟ ಗೊತ್ತಾಗೊಲ್ಲ. ಅದೇನಿದ್ದರೂ ಸುಂಕದವರ ಮುಂದೆ ಕಷ್ಟ ತೋಡಿಕೊಂಡಂತೆ.. ನಾನೂ ಹಸಿದವಳು; ಇಲ್ಲಿರುವವರೂ ಹಸಿದವರೇ. ಹೀಗಾಗಿ ಖಂಡಿತವಾಗಿಯೂ ಬಡ ಕಲಾವಿದರ ಸಂಕಷ್ಟಕ್ಕೆ ಮಿಡಿಯುವೆ‘ ಎನ್ನುತ್ತಲೇ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು.

ಜೋಗಪ್ಪ ನೃತ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟವರು ಮಂಜಮ್ಮ. ಮೂಲತಃ ದಾವಣಗೆರೆ ಜಿಲ್ಲೆಯ ಕುಕ್ಕುವಾಡದವರು. ಈಗ ಬಳ್ಳಾರಿ ಜಿಲ್ಲೆ ಮರಿಯಮ್ಮನಹಳ್ಳಿಯಲ್ಲಿ ನೆಲೆಸಿದ್ದಾರೆ.

ಪಡಲಿಗೆ ಹೊತ್ತು 15ನೇ ವರ್ಷಕ್ಕೆ ಮನೆ ಬಿಟ್ಟ ಮಂಜಮ್ಮನಿಗೆ ತನ್ನ ಗುರುವಿನಿಂದ ಬಳುವಳಿಯಾಗಿ ಬಂದ್ದದ್ದುಜೋಗಪ್ಪ ನೃತ್ಯ. ಅಂದು ಹಸಿದ ಹೊಟ್ಟೆಯಲ್ಲಿ ಊರೂರು ತಿರುಗಿ ಕುಣಿಯುತ್ತಿದ್ದರು. ಈ ಹಾದಿಯಲ್ಲಿಯೇ ಅವರು ಮುಂದೆ ಆ ನೃತ್ಯಕ್ಕೆ ಬೇರೆ ಬೇರೆ ಪಟ್ಟುಗಳನ್ನು ಪರಿಚಯಿಸಿದರು. ಬೇವಿನಸೊಪ್ಪು, ಭಂಡಾರದ ಮಳೆಯ ನಡುವೆ ತಲೆಯ ಮೇಲೆ ಬಿಂದಿಗೆ ಗಿರಗಿರನೇ ತಿರುಗಿಸುತ್ತಿದ್ದ ಮಂಜಮ್ಮ ನೋಡುಗರನ್ನು ಮಂತ್ರಮುಗ್ಧವಾಗಿಸುತ್ತಿದ್ದರು. ಅವರಿಂದಲೇ ನೃತ್ಯ ಕಲಿತ ಹವ್ಯಾಸಿ ಕಲಾವಿದರು ಇಂದು ಅದನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶಿಸಿದ್ದಾರೆ.

ಈ ಹಿಂದೆ ಜಾನಪದ ಅಕಾಡೆಮಿ ಸದಸ್ಯರಾಗಿದ್ದ ಅವರನ್ನು, ಬಿಜೆಪಿ ಸರ್ಕಾರ ಅಧ್ಯಕ್ಷೆ ಸ್ಥಾನ ನೀಡಿ ಗೌರವಿಸಿದೆ. ಮಾಸಾಶನ ಕೊಡಲು ಜಾನಪದ ಕಲಾವಿದರ ಸಂದರ್ಶನ ಮಾಡಲೆಂದೇ ಮಂಜಮ್ಮ ಬುಧವಾರ ಬಾಗಲಕೋಟೆಗೆ ಬಂದಿದ್ದರು.

* ಅರ್ಜಿ ಹಾಕಿದ ಎಲ್ಲರಿಗೂ ಮಾಸಾಶನ ಕೊಡುತ್ತಿದ್ದೀರಾ?

ಇಲ್ಲ. ಜಾನಪದ ಸೇರಿದಂತೆ ರಾಜ್ಯದ ಎಲ್ಲ ಅಕಾಡೆಮಿಗಳಿಂದಲೂ ಒಂದು ಸಾವಿರ ಮಂದಿಯನ್ನು ಮಾತ್ರ ಮಾಸಾಶನಕ್ಕೆ ಆಯ್ಕೆ ಮಾಡಬೇಕಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಜಾನಪದ ಕಲಾವಿದರೇ 376 ಮಂದಿ ಅರ್ಜಿ ಹಾಕಿದ್ದಾರೆ. ಹೀಗಾಗಿ ಮೂಲ ಕಲಾವಿದರನ್ನು ಗುರುತಿಸಿ ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ.

* ಜಾನಪದ ಇಂದು ಗ್ರಾಮೀಣ ಭಾಗದಲ್ಲಿಯೇ ಕೇಂದ್ರೀಕೃತವಾಗಿದೆ ಎಂಬ ಆರೋಪಗಳಿವೆ. ಅದನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಅಕಾಡೆಮಿ ಮಾಡಲಿದೆಯೇ?

ಮಕ್ಕಳು, ಯುವಜನರಿಂದ ಮಾತ್ರ ಜನಪದ ಉಳಿಯಲು ಸಾಧ್ಯ. ಹೀಗಾಗಿ ಶಾಲಾ–ಕಾಲೇಜುಗಳಲ್ಲಿ ಪಠ್ಯಕ್ರಮದ ಭಾಗವಾಗಿ ಜಾನಪದ ಕಲಿಸಬೇಕಿದೆ. ಅದನ್ನು ಪಠ್ಯಕ್ರಮಕ್ಕೆ ಸೇರಿಸುವ ಪ್ರಯತ್ನ ಅಕಾಡೆಮಿ ನಡೆಸುತ್ತಿದೆ. ಜಾನಪದ ವಿಶ್ವವಿದ್ಯಾಲಯದೊಂದಿಗೆ ಸೇರಿ ಸೂಕ್ತ ಪಠ್ಯಕ್ರಮ ರೂಪಿಸಲಾಗುವುದು.

* ಜಾನಪದ ಕೇವಲ ಮನರಂಜನೆ ಮಾತ್ರ. ಅದು ಹೊಟ್ಟೆ ತುಂಬಿಸೊಲ್ಲ ಎಂಬುದು ಮೊದಲಿನಿಂದಲೂ ಇರುವ ಆರೋಪ?

ಹೌದು. ಆ ನಂಬಿಕೆ ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ ಅಕಾಡೆಮಿ ಮಾಡಲಿದೆ. ಸಂಗೀತ, ರಂಗ ಶಿಕ್ಷಕರ ರೀತಿ ಜಾನಪದ ಶಿಕ್ಷಕರನ್ನೂ ಶಾಲೆಗಳಿಗೆ ನೇಮಕ ಮಾಡಿ ಅವರಿಗೊಂದಷ್ಟು ನಿಶ್ಚಿತ ಪಗಾರ ಸಿಗುವಂತೆ ಮಾಡಬೇಕಿದೆ. ಅದಕ್ಕೆ ಪೂರಕವಾಗಿ ಅಕಾಡೆಮಿಯಿಂದಲೇ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಮಕ್ಕಳಿಗೆ ಜಾನಪದ ಪ್ರಕಾರಗಳ ಕಲಿಕೆಗೆ ಶಿಕ್ಷಕರು ಹಾಗೂ ಸಹಾಯಕರನ್ನು ಗೌರವ ಸಂಭಾವನೆ ಆಧಾರದ ಮೇಲೆ ನೇಮಕ ಮಾಡುತ್ತಿದ್ದೇವೆ. ಚರ್ಮ ವಾದ್ಯ ಕಲಿಸಲು ಧಾರವಾಡ ಜಿಲ್ಲೆಯ ಶಾಲೆಗಳಲ್ಲಿ ಈಗಾಗಲೇ ಈ ಕಾರ್ಯ ಆರಂಭಿಸಿದ್ದೇವೆ.

* ಸರ್ಕಾರದ ಸಾಂಸ್ಕೃತಿಕ ನೀತಿಯಲ್ಲಿ ಮೂಲ ಕಲಾವಿದರು ನಿರ್ಲಕ್ಷ್ಯಕ್ಕೀಡಾಗುತ್ತಿದ್ದಾರೆ. ಹೊರಗಿನ ಹವ್ಯಾಸಿಗಳೇ ಪ್ರಾಬಲ್ಯ ಮೆರೆಯುತ್ತಿದ್ದಾರೆ ಎಂಬ ದೂರುಗಳಿವೆ..

ನಿಜ. ಇದೊಂದು ರೀತಿ ಹಿತ್ತಲಗಿಡ ಮದ್ದಲ್ಲ ಎಂಬಂತಹ ಭಾವನೆ. ನಾವು ದಸರಾ ಉತ್ಸವಕ್ಕೆ ಸರ್ಕಾರದ ಅತಿಥಿಗಳಾಗಿ ಹೋದಾಗ ಇಂತಹ ಅಪಮಾನಗಳ ಎದುರಿಸಿದ್ದೇವೆ. ಹೊರಗಿನಿಂದ ಕಲಾವಿದರ ಕರೆಸಿ ಲಕ್ಷಾಂತರ ರೂಪಾಯಿ ಸಂಭಾವನೆ ಕೊಟ್ಟು, ಸ್ಟಾರ್ ಹೋಟೆಲ್‌ಗಳಲ್ಲಿ ಉಳಿಸಿ ನೀಡುವ ರಾಜ ಮರ್ಯಾದೆಯ ಅಲ್ಪ ಭಾಗವೂ ನಮ್ಮ ನಡುವಿನ ಕಲಾವಿದರಿಗೆ ಸಿಗುತ್ತಿಲ್ಲ. ಮೂಲ ಕಲಾವಿದರಿಗೆ ಗೌರವ ತಂದುಕೊಂಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಕಾಡೆಮಿ ಕೆಲಸ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT