ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ವಚನ ಸಾಹಿತ್ಯ: ಶಿವಾನಂದ ಪೂಜಾರಿ

ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ
Published 30 ಜೂನ್ 2024, 13:29 IST
Last Updated 30 ಜೂನ್ 2024, 13:29 IST
ಅಕ್ಷರ ಗಾತ್ರ

ಬಾಗಲಕೋಟೆ: ಸಮ,‌ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯದ ಕೊಡುಗೆ ದೊಡ್ಡದಾಗಿದೆ ಎಂದು ಸಾಹಿತಿ ಶಿವಾನಂದ ಪೂಜಾರಿ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದಿರುವ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ‘ಕನ್ನಡ ಸಾಹಿತ್ಯ ಪರಂಪರೆ: ಜನಪರ‌ ನಿಲುವುಗಳು’ ಗೋಷ್ಠಿಯಲ್ಲಿ ‘ವಚನ ಸಾಹಿತ್ಯ’ ಕುರಿತು ಅವರು ಮಾತನಾಡಿದರು. ವಚನಕಾರರ ಕ್ರಾಂತಿಯು ವರ್ಗ, ವರ್ಣ ರಹಿತ ಚಳವಳಿಯಾಗಿತ್ತು ಎಂದರು.

ತುಳಿತಕ್ಕೆ ಒಳಗಾದವರ, ಎಲ್ಲ ವೃತ್ತಿಯವರ ಧ್ವನಿಯಾಗಿತ್ತು. ಕಾಯಕವೇ ಕೈಲಾಸ ಎನ್ನುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟರೆ, ದಾಸೋಹದ ಮೂಲಕ ಎಲ್ಲರ ಹಸಿವನ್ನು ನೀಗಿಸುವ ಕೆಲಸವನ್ನು ಮಾಡಿತು. ಬಸವಾದಿ ಶರಣರು ಸುಂದರ, ಸ್ವಾಭಿಮಾನದ ಬದುಕಿಗೆ ಮಾರ್ಗ ತೋರಿದರು ಎಂದು ಹೇಳಿದರು.

‘ತತ್ವ ಪದ ಹಾಗೂ ಕೀರ್ತನೆಗಳು’ ಕುರಿತು ಮಾತನಾಡಿದ ಸಾಹಿತಿ ಎಂ.ಜಿ. ದಾಸರ, ಕೀರ್ತನೆಗಳು ಭಕ್ತಿ, ಭಾವದ ಪರಾಕಾಷ್ಠೆಯಾಗಿದ್ದವು. ತತ್ವಪದಗಳು ಜೀವನಕ್ಕೆ ದಾರಿದೀಪಗಳಾಗಿವೆ ಎಂದರು.

ಅಂತರಂಗದ ಆತ್ಮವನ್ನು ಬಯಲುಗೊಳಿಸುವ, ಜಾಗೃತಗೊಳಿಸುವ ಕೆಲಸವನ್ನು ತತ್ವಪದಗಳು, ಕೀರ್ತನೆಗಳು ಮಾಡುತ್ತವೆ. ಕನಕದಾಸ, ಪುರಂದರದಾಸರು ಸೇರಿದಂತೆ ವಿವಿಧ ದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

‘ಜನಪದ ಸಾಹಿತ್ಯ’ ಕುರಿತು ಮಾತನಾಡಿದ ಸಾಹಿತಿ ಮಲ್ಲಿಕಾರ್ಜುನ ಸಜ್ಜನ, ‘ಜನಪದ ಸಾಹಿತ್ಯ ಎಲ್ಲ ಸಾಹಿತ್ಯದ ಬೇರು ಆಗಿದೆ. ಜನಪದ ಸಾಹಿತ್ಯವು ಜೀವನದ‌ ವೈಭವ, ಸಂಸ್ಕೃತಿ ಪರಿಚಯಿಸುವ, ಎತ್ತಿ ಹಿಡಿಯುವ ಕೆಲಸ ಮಾಡಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಬಿ. ಮಾಟೊಳ್ಳಿ ಮಾತನಾಡಿ, ‘ಜೀವನದ‌ ಮಾರ್ಗ ತೋರಿಸುವ ಕೆಲಸವನ್ನು ಎಲ್ಲ ಸಾಹಿತ್ಯ ಪ್ರಕಾರಗಳು ಮಾಡಿವೆ’ ಎಂದರು.

ಸಾಹಿತಿ ಸಿ.ಎನ್. ಬಾಳಕ್ಕನವರ, ಬಸವರಾಜ ಕುಂಬಾರ, ವಿ.ಬಿ. ಗೋವಿಂದಪ್ಪನವರ, ಅರ್ಜುನ ರಡ್ಡಿ ಹಂಚಿನಾಳ ಇದ್ದರು

ರಾಜಕಾರಣಿಗಳನ್ನು ಕರೆಯಬೇಡಿ

ಬಾಗಲಕೋಟೆ: ಸಾಹಿತ್ಯ ಸಮ್ಮೇಳನಗಳಿಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದ ರಾಜಕಾರಣಿಗಳನ್ನು ಕರೆಯಬಾರದು. ಅನಿವಾರ್ಯತೆಗೆ ಬಿದ್ದು ಕರಿಯುತ್ತೀರಿ. ಸಾಹಿತ್ಯವನ್ನು ಪೋಷಿಸಬೇಕಾದ ಎಲ್ಲ ಕೆಲಸ ಎಲ್ಲರಿಂದ ಆಗಬೇಕಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು. ಒಳ್ಳೆಯ ಸಾಹಿತಿಗಳಿದ್ದಾರೆ. ಆದರೆ ಓದುವವರಿಲ್ಲ. ಓದುಗರನ್ನು ತಲುಪದಿದ್ದರೆ ಸಾಹಿತ್ಯಕ್ಕೆ ಬೆಲೆ ಬರುವುದಿಲ್ಲ. ಜನ ಸಾಮಾನ್ಯನ್ನು ತಲುಪಬೇಕು. ಆ ನಿಟ್ಟಿನಲ್ಲಿ ಚಿಂತನೆ ಮಾಡಿರಿ ಎಂದರು. ಪ್ರಸ್ತುತ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭವಾದಾಗ ₹230 ಕೋಟಿಯ ಯೋಜನೆಯಾಗಿತ್ತು. ಈಗಾಗಲೇ ಲಕ್ಷಾಂತರ ಕೋಟಿ ಖರ್ಚಾಗಿದ್ದರೂ ಇನ್ನೂ ಲಕ್ಷಕ್ಕೂ ಹೆಚ್ಚು ಕೋಟಿ ಬೇಕಿದೆ. ಹೀಗೆ ಹೋದರೆ ಯೋಜನೆ ಪೂರ್ಣಗೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT