ಶುಕ್ರವಾರ, ಫೆಬ್ರವರಿ 26, 2021
26 °C
ವೈದ್ಯ ಡಾ. ಪದ್ಮನಾಭ ಕಾಮತ್‌ರಿಂದ ಸದ್ದಿಲ್ಲದೇ ಸಮಾಜ ಸೇವೆ

ಸರ್ಕಾರಿ ಆಸ್ಪತ್ರೆಗೆ ಉಚಿತ ಇ.ಸಿ.ಜಿ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಮಂಗಳೂರಿನ ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್, ದಾನಿಗಳಿಂದ ಸಂಗ್ರಹಿಸಿದ ಇ.ಸಿ.ಜಿ (ಎಲೆಕ್ಟ್ರೋಕಾರ್ಡಿಯೊಗ್ರಾಂ) ಯಂತ್ರಗಳನ್ನು ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.

ಕಳೆದ ವರ್ಷದಿಂದ ಈ ಕಾರ್ಯ ಆರಂಭಿಸಿರುವ ಡಾ. ಕಾಮತ್, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ಸುತ್ತಲಿನ 11 ಜಿಲ್ಲೆಗಳಲ್ಲಿನ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಇಲ್ಲಿಯವರೆಗೆ ಒಟ್ಟು 175 ಇ.ಸಿ.ಜಿ ಯಂತ್ರಗಳನ್ನು ವಿತರಿಸಿದ್ದಾರೆ. ಸದ್ಯ ಉತ್ತರ ಕರ್ನಾಟಕದ ಕಡೆಗೂ ಗಮನಹರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ನೆರವಿನ ಹಸ್ತ ಚಾಚುವ ಯೋಜನೆ ಹೊಂದಿದ್ದಾರೆ.

‘ಬಾಗಲಕೋಟೆ ಜಿಲ್ಲೆಯ 10 ಪ್ರಾಥಮಿಕ ಕೇಂದ್ರಗಳಿಗೆ (ಮಳಲಿ, ಶಿರೋಳ, ಲೋಕಾಪುರ, ಕುಂದರಗಿ, ಕಲಾದಗಿ, ಸುತಗುಂಡಾರ, ಕಟಗೇರಿ, ಬೇಲೂರ, ಸಾವಳಗಿ, ಧನ್ನೂರ) ಇ.ಸಿ.ಜಿ ಯಂತ್ರಗಳನ್ನು ಇದೇ ತಿಂಗಳ ಎರಡನೇ ವಾರದಲ್ಲಿ ವಿತರಿಸಲಾಗುವುದು. ಮಂಗಳೂರಿನ ರೋಟರಿ ಕ್ಲಬ್ ಹಿಲ್‌ಸೈಡ್‌ ಸಂಸ್ಥೆ ಯಂತ್ರಗಳ ಖರ್ಚು ಭರಿಸಿದೆ’ ಎಂದರು.

ಸ್ಥಳೀಯ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಲು ಇಲ್ಲಿಗೆ ಬಂದಿದ್ದ ಡಾ.ಕಾಮತ್  ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದ ಆಟೊ ಚಾಲಕರೊಬ್ಬರಿಗೆ ಹೃದಯಾಘಾತವಾಗಿದ್ದು ತಡವಾಗಿ ಗೊತ್ತಾಗಿದೆ. ಆ ವೇಳೆಗೆ ಕಾಲಮಿಂಚಿತ್ತು. ಅವರನ್ನು ಆಸ್ಪತ್ರೆಗೆ ಕರೆತಂದರೂ ಉಳಿಸಿಕೊಳ್ಳಲು ಆಗಲಿಲ್ಲ. ಇದು ಗ್ರಾಮೀಣರಿಗೆ ಇ.ಸಿ.ಜಿಯ ನೆರವು ಒದಗಿಸಲು ಪ್ರೇರಣೆಯಾಯಿತು. ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ನೀಡುತ್ತಿರುವ ಆಸ್ಪತ್ರೆಗಳನ್ನು ಗುರುತಿಸಿ, ಈ ರೀತಿಯ ಯಂತ್ರಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಬ್ಯಾಂಕ್, ಖಾಸಗಿ ಸಂಸ್ಥೆಗಳು, ಐಟಿ– ಬಿಟಿ, ಸಾರ್ವಜನಿಕ ಉದ್ದಿಮೆಗಳ ನೆರವು ಪಡೆಯುತ್ತಿದ್ದೇನೆ’ ಎಂದರು.

ನಿರಂತರ ಸಲಹೆ

ಹೃದ್ರೋಗ ಸಮಸ್ಯೆ ಇರುವವರಿಗೆ ದಿನದ 24 ಗಂಟೆಯೂ ಸಲಹೆ ನೀಡುವ ವ್ಯವಸ್ಥೆ ಮಾಡಲಾಗಿದೆ. ತಮ್ಮ ಇ.ಸಿ.ಜಿ ವರದಿಯನ್ನು 97432– 87599 ಮೊಬೈಲ್‌ ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಿದರೆ, ಅದನ್ನು ನೋಡಿ ಸಲಹೆ ನೀಡಲಾಗುವುದು ಎಂದು ಡಾ. ಕಾಮತ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.