ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ: ಅಭಿವೃದ್ಧಿ ಕಾಣದ ತೂಗುಣಸಿ ಗ್ರಾಮ

ಎಚ್‌.ಎಸ್‌. ಘಂಟಿ
Published 17 ಜನವರಿ 2024, 6:11 IST
Last Updated 17 ಜನವರಿ 2024, 6:11 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನ ತೂಗುಣಸಿ ಗ್ರಾಮ ಗುಳೇದಗುಡ್ಡ ಪಟ್ಟಣದಿಂದ 8 ಕಿ.ಮೀ. ಅಂತರದಲ್ಲಿದೆ. ಗ್ರಾಮದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ.

ಗ್ರಾಮದಲ್ಲಿ 600ಕ್ಕೂ ಅಧಿಕ ಮನೆಗಳಿದ್ದು, 2,600 ಜನಸಂಖ್ಯೆ ಹೊಂದಿದ ಗ್ರಾಮವಾಗಿದೆ. ಸಮೀಪದ ಕೋಟೆಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮವಾಗಿದ್ದು, ಗ್ರಾಮದಲ್ಲಿ ಒಟ್ಟು ಐವರು  ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಆದರೂ, ಯಾವುದೇ ಮಹತ್ವವಾದ ಕೆಲಸಗಳಾಗಿರುವುದಿಲ್ಲ. ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸೇರಿದಂತೆ ಹಲವು ಸಮಸ್ಯೆಗಳನ್ನು ಕಾಣಬಹುದಾಗಿದೆ.

ಹದಗೆಟ್ಟ ಗ್ರಾಮಗಳ ರಸ್ತೆ: ಪೂರ್ಣ ಪ್ರಮಾಣದ ಕಾಂಕ್ರೀಟ್ ರಸ್ತೆಗಳಿಲ್ಲ. ಗುಳೇದಗುಡ್ಡ ಪಟ್ಟಣದಿಂದ ಬಾಗಲಕೋಟೆಗೆ ಹೋಗುವ ಮುಖ್ಯ ರಸ್ತೆಯಿಂದ ಒಂದು ಕಿ.ಮೀ. ಅಂತರದಲ್ಲಿರುವ ಗ್ರಾಮ ಇದಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮೂರು ಬಾರಿ ಡಾಂಬರೀಕರಣ ಮಾಡಿದರೂ ಪ್ರಯೋಜನವಾಗಿಲ್ಲಾ ಅಲ್ಲಿ ಕಡಿಗಳು ಎದ್ದಿದ್ದು, ವಾಹನ ಸವಾರರು ಹೋಗಲು ಪರದಾಡುವಂತಾಗಿದೆ.

ಬಯಲು ಬಹಿರ್ದೆಸೆ: ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಆದ್ದರಿಂದ ಸಂಜೆ ವೇಳೆ ರಸ್ತೆ ಬದಿ ಶೌಚ ಮಾಡುವುದು ಕಂಡು ಬರುತ್ತದೆ. ಗ್ರಾಮ ಪಂಚಾಯಿತಿಯಿಂದ ಅನುದಾನ ಪಡೆದು ಕೆಲವರು ಕಟ್ಟಿಕೊಂಡರೂ ಬಳಸಲು ಸಾಧ್ಯವಾಗದಂತೆ ಕಟ್ಟಿಕೊಂಡಿದ್ದಾರೆ. ಬಯಲು ಬಹಿರ್ದೆಸೆಗೆ ಈಗಲೂ ಹೋಗುತ್ನಾರೆ. ಸ್ಮಶಾನ ಇಲ್ಲದಿರುವುದರಿಂದ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರು ತಮ್ಮ ಹೊಲಗಳ ಬದುವಿನಲ್ಲಿ ಮಾಡುತ್ತಾರೆ.

ಗಬ್ಬು ನಾರುವ ಚರಂಡಿಗಳು: ಗ್ರಾಮದಲ್ಲಿ ಎರಡು- ಮೂರು ಓಣಿಗಳಲ್ಲಿ ಚರಂಡಿ ನಿರ್ಮಿಸಿದ್ದಾರೆ. ಆದರೆ, ಚರಂಡಿ ನೀರು ಸುಸೂತ್ರವಾಗಿ ಹೋಗಲು ವ್ಯವಸ್ಥೆ ಮಾಡದ್ದರಿಂದ ನೀರು ಚರಂಡಿಯಲ್ಲಿಯೇ ನಿಂತು ಗಬ್ಬು ವಾಸನೆ ಬರುತ್ತಿದೆ.

ಅಭಿವೃದ್ಧಿ ಕಾಣದ ಎಸ್.ಸಿ.ಕಾಲೊನಿ: ಗ್ರಾಮದಲ್ಲಿನ ಎಸ್.ಸಿ.ಕಾಲೊನಿ ಇದ್ದು, ಮೂಲ ಸೌಲಭ್ಯಗಳು ಇಲ್ಲವಾಗಿವೆ. ಸರ್ಕಾರದಿಂದ ಅಶ್ರಯ, ಅಂಬೇಡ್ಕರ್ ಯೋಜನೆಯಲ್ಲಿ ವಸತಿಗಾಗಿ ಮನೆಗಳು ಬಂದರೂ, ಇಲ್ಲಿ ನಿವೇಶನ ಇಲ್ಲದಿರುವುದರಿಂದ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ ಎಂದು ನಿವಾಸಿ ಪರಶು ಮಾದರ ಹೇಳಿದರು.

ಎಲ್ಲೆಂದರಲ್ಲಿ ಕಸ: ಗ್ರಾಮದ ರಸ್ತೆ ಪಕ್ಕ, ರಸ್ತೆ ಮಧ್ಯೆ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸೆಯುತ್ತಾರೆ. ಅದನ್ನು ನಿರ್ವಹಣೆ ಮಾಡಲು ಕೆಲಸಗಾರರು ಇಲ್ಲದ್ದರಿಂದ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇದೆ.

ಅವ್ಯವಸ್ಥೆಯ ಕುಡಿಯುವ ನೀರಿನ ನಿರ್ವಹಣೆ: ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಕೆಲವೆಡೆ ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ, ಅವುಗಳನ್ನು ಸರಿಯಾಗಿ ಮುಚ್ಚದ್ದರಿಂದ ಹೊಲಸು, ದೂಳು, ಕಸಕಟ್ಟಿ ಬೀಳುವುದು ಸಾಮಾನ್ಯವಾಗಿದೆ. ಜಲಜೀವನ್ ಯೋಜನೆ ಅಡಿ ಮನೆ, ಮನೆಗೆ ನಳ ಜೋಡಿಸಲಾಗಿದ್ದರೂ, ನೀರು ಬಂದಾಗ ರಸ್ತೆ ತುಂಬಿ ಹರಿಯುತ್ತದೆ.  ಇದರಿಂದ ಗಲೀಜು ವಾತಾವರಣವಾಗಿ ಸೊಳ್ಳೆ ಉತ್ಪತ್ತಿಯಾಗಿ ರೋಗ ಹರಡುವಂತಹ ವಾತಾವರಣವಿದೆ.

ಪರಂಪರೆಯ ಅಮರೇಶ್ವರ ಮಠ: ಗ್ರಾಮದಲ್ಲಿ ಅಮರೇಶ್ವರ ಮಠವಿದ್ದು, ಪ್ರತಿ ವರ್ಷ ಶಿವರಾತ್ರಿಗೆ 15 ದಿನಗಳ ಕಾಲ ಪುರಾಣ ಹೇಳಲಾಗುತ್ತದೆ. 

ರಸ್ತೆ ಪಕ್ಕ ಚರಂಡಿ ಇಲ್ಲದ್ದರಿಂದ ರಸ್ತೆ ಮೇಲೆ ನೀರು ನಿಂತಿರುವುದು
ರಸ್ತೆ ಪಕ್ಕ ಚರಂಡಿ ಇಲ್ಲದ್ದರಿಂದ ರಸ್ತೆ ಮೇಲೆ ನೀರು ನಿಂತಿರುವುದು
ರಸ್ತೆ ಪಕ್ಕ ಚರಂಡಿ ಇಲ್ಲದೆ ರಸ್ತೆ ಮೇಲೆ ಕಸ ಹಾಕಿರುವುದು.
ರಸ್ತೆ ಪಕ್ಕ ಚರಂಡಿ ಇಲ್ಲದೆ ರಸ್ತೆ ಮೇಲೆ ಕಸ ಹಾಕಿರುವುದು.
   ಕುಡಿಯುವ ನೀರಿನ ಟ್ಯಾಂಕ್‌ ಮೇಲೆ ಮುಚ್ಚಿಲ್ಲ
   ಕುಡಿಯುವ ನೀರಿನ ಟ್ಯಾಂಕ್‌ ಮೇಲೆ ಮುಚ್ಚಿಲ್ಲ
ಗ್ರಾಮದಲ್ಲಿ ಸಮಸ್ಸೆಗಳಿವೆ. ಗ್ರಾಮದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಯಿಂದ ಚರಂಡಿ ನಿರ್ಮಾಣ ರಸ್ತೆ ಮುಂತಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.
–ಶಿವಾನಂದ ವಾಲೀಕಾರ, ಸದಸ್ಯರು ಗ್ರಾಮ ಪಂಚಾಯಿತಿ
ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮಸಭೆ ಮಾಡಲಾಗಿದೆ. ಅಲ್ಲಿನ ಸಮಸ್ಸೆಗಳಿಗೆ ಪರಿಹಾರ ಒದಗಿಸಲಾಗುವುದು.
–ಆರತಿ ಕ್ಷತ್ರಿ, ಪಿಡಿಒ ಗ್ರಾಮ ಪಂಚಾಯತಿ ಕೋಟೆಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT