ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ದೂರದೃಷ್ಟಿಯ ಕೊರತೆ: ಕುಡಿಯುವ ನೀರಿನ ಸಮಸ್ಯೆ

Published 9 ಫೆಬ್ರುವರಿ 2024, 4:28 IST
Last Updated 9 ಫೆಬ್ರುವರಿ 2024, 4:28 IST
ಅಕ್ಷರ ಗಾತ್ರ

ಬಾಗಲಕೋಟೆ: ಪೂರ್ಣ ಪ್ರಮಾಣದ ಬೇಸಿಗೆ ಆರಂಭಕ್ಕೆ ಮುನ್ನವೇ ನವನಗರ ಹಾಗೂ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ವಾರಕ್ಕೆ ಎರಡು ಬಾರಿ ಪೂರೈಕೆಯಾಗುತ್ತಿದ್ದ ನೀರು, ಮುಂದಿನ ದಿನಗಳಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ಪೂರೈಕೆಯಾಗಲಿದೆ.

ಬನ್ನಿದಿನ್ನಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ 513 ಮೀಟರ್ ಇದ್ದು, 509 ಮೀಟರ್‌ಗೆ ಇಳಿದರೆ ಡೆಡ್‌ ಸ್ಟೋರೇಜ್‌ ತಲುಪಲಿದೆ. ಇನ್ನೂ 60 ರಿಂದ 65 ದಿನಗಳಿಗಾಗುವಷ್ಟು ಕುಡಿಯುವ ನೀರು ಇರುವುದರಿಂದ, ಮಿತ ಬಳಕೆಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಕುಡಿಯುವ ನೀರಿಗಾಗಿ ಘಟಪ್ರಭಾ ನದಿಗೆ ನೀರು ಹರಿಸಿದರೆ ಒಂದಷ್ಟು ನೆಮ್ಮದಿ ದೊರೆಯಲಿದೆ.

2001ರಲ್ಲಿ 1.25 ಲಕ್ಷ ಜನರನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಯೋಜನೆ ರೂಪಿಸಲಾಗಿತ್ತು. 2021ರ ವೇಳೆಗೆ 1.75 ಲಕ್ಷ ಜನರಿಗೆ ಹೆಚ್ಚಿಸಲಾಗಿತ್ತು. ನವನಗರದ ಎರಡು ಯುನಿಟ್‌, ಸೀಮಿಕೇರಿ, ಗದ್ದನಕೇರಿ, ಗದ್ದನಕೇರಿ ತಾಂಡಾ ಸೇರಿದಂತೆ ಐದು ಗ್ರಾಮ ಹಾಗೂ ಐದು ಪುನರ್‌ವಸತಿ ಕೇಂದ್ರಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಬನ್ನಿದಿನ್ನಿ ಬ್ಯಾರೇಜ್‌ನಿಂದ ನಿತ್ಯ 27 ಎಂಎಲ್‌ಡಿ ನೀರು ಲಿಫ್ಟ್‌ ಮಾಡಬಹುದಾಗಿದೆ. 22 ಗಂಟೆಗಳ ಕಾಲ ಪಂಪ್‌ಸೆಟ್‌ಗಳಿಂದ ನೀರು ಎತ್ತಲಾಗುತ್ತಿದ್ದು, 22 ಎಂಎಲ್‌ಡಿ ಯಷ್ಟು ಲಿಫ್ಟ್ ಆಗುತ್ತಿದೆ. ಇದು ಈಗ ಹೆಚ್ಚಾಗಿರುವ ಜನರಿಗೆ ಸಾಕಾಗುತ್ತಿಲ್ಲ.

ಕುಡಿಯುವ ನೀರಿನ ಪೂರೈಕೆ ಪ್ರಮಾಣ ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಹಾಗೂ ನದಿ ಸೇತುವೆ ಮೇಲಿನಿಂದ ಪೈಪ್‌ಲೈನ್‌ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಹೆದ್ದಾರಿ ಹಾಗೂ ಸೇತುವೆ ಮೇಲೆ ಪೈ‍ಪ್‌ಲೈನ್‌ ನಿರ್ಮಾಣಕ್ಕೆ ಅನುಮತಿ ದೊರೆಯದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದ್ದು, ಸಮಸ್ಯೆ ಉಲ್ಬಣಕ್ಕೆ ಕಾರಣಗಳಲ್ಲೊಂದಾಗಿದೆ.

ಹೆರಕಲ್‌ ಬ್ಯಾರೇಜ್‌ ಅನ್ನು 517 ಮೀಟರ್‌ಗೆ ಹೆಚ್ಚಿಸಿರುವುದರಿಂದ ಅಲ್ಲಿ ಐದು ಮೀಟರ್‌ನಷ್ಟು ಡೆಡ್‌ ಸ್ಟೋರೇಜ್‌ ನೀರು ದೊರೆಯಲಿದೆ. ಅಲ್ಲಿಂದ ನೀರು ಲಿಫ್ಟ್‌ ಮಾಡಲು ವ್ಯವಸ್ಥೆ ಇದೆ. ಅದಕ್ಕೆ ಹೆಚ್ಚುವರಿಯಾಗಿ ವಿದ್ಯುತ್ ಬಿಲ್‌ ಪಾವತಿಸಬೇಕಾಗುತ್ತದೆ. ಹಾಗಾದರೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ ಬಿಟಿಡಿಎ ಅಧಿಕಾರಿಗಳು.

ರಾಜ್ಯ ಸರ್ಕಾರ ಕಾರ್ಪಸ್‌ ಫಂಡ್ ವಾಪಸ್‌ ಪಡೆದ ಮೇಲೆ ನವನಗರ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ. ನವನಗರ ಹಸ್ತಾಂತರಕ್ಕೆ ನಗರನಸಭೆ ಒಪ್ಪುತ್ತಿಲ್ಲ. ಪರಿಣಾಮ ಕಸ ನಿರ್ವಹಣೆ, ಬೀದಿ ದೀಪ ನಿರ್ವಹಣೆಗೆ ತೊಂದರೆ ಎದುರಾಗಿತ್ತು. ಶಾಸಕ ಎಚ್.ವೈ. ಮೇಟಿ ಅವರ ಮುತುವರ್ಜಿಯಿಂದ ನಿರ್ವಹಣೆಗೆ ಅನುದಾನ ದೊರೆತಿದೆ. ಅದರ ನಡುವೆ ಈಗ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಲಕ್ಷಣಗಳು ಕಾಣತೊಡಗಿವೆ.

ಹೆರಕಲ್‌ ಬಳಿ ಜಾಕ್‌ವೆಲ್‌ ನಿರ್ಮಿಸುವ ಪ್ರಸ್ತಾವ ಸಲ್ಲಿಸಲಾಗಿದೆ. ಜಾಕ್‌ವೆಲ್‌ ನಿರ್ಮಾಣವಾದರೆ, 65 ಎಂಎಲ್‌ಡಿ ನೀರು ದೊರೆಯಲಿದೆ. 2051ರವರೆಗೆ 5.51 ಲಕ್ಷ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಲಿದೆ. ಜತೆಗೆ ನಿತ್ಯವೂ ನೀರು ಪೂರೈಸಬೇಕಾಗಿದೆ. ₹41 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ಒಪ್ಪಿಗೆ ಸಿಗಬೇಕಿದೆ. ಅಲ್ಲಿಯವರೆಗೆ ಕುಡಿಯುವ ನೀರಿಗೆ ತೊಂದರೆ ಎದುರಾಗುತ್ತಲೇ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT