ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಾಪುರ: ಪಟ್ಟಣವಾದರೂ ಅಭಿವೃದ್ದಿ ಗಗನಕುಸುಮ, ಕಾಡುತ್ತಿದೆ ಮೂಲಸೌಲಭ್ಯದ ಕೊರತೆ

ಮಹೇಶ ಬೋಳಿಶೆಟ್ಟಿ
Published 26 ಫೆಬ್ರುವರಿ 2024, 6:16 IST
Last Updated 26 ಫೆಬ್ರುವರಿ 2024, 6:16 IST
ಅಕ್ಷರ ಗಾತ್ರ

ಲೋಕಾಪುರ: 18 ಸಾವಿರ ಜನಸಂಖ್ಯೆ ಹೊಂದಿರುವ ಲೋಕಾಪುರ ವಾಣಿಜ್ಯ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಪಟ್ಟಣ ಹಲವಾರು ಪ್ರಮುಖ ನಗರಗಳನ್ನು ಸಂಪರ್ಕಿಸುವ ಕೇಂದ್ರ ಸ್ದಳವಾಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದರೂ ಇಲ್ಲಿ ಅಭಿವೃದ್ಧಿ ಮಾತ್ರ ಗಗನಕುಸುಮವಾಗಿದೆ.

ಇಲ್ಲಿಂದ ಪ್ರತಿದಿನ ನೂರಾರು ಲಾರಿಗಳು ಸುಣ್ಣದ ಕಲ್ಲನ್ನು ರವಾನೆ ಮಾಡುವ ಮೂಲಕ ರಾಜ್ಯ ಮತ್ತು ಪರರಾಜ್ಯಗಳ ಜನರು ಈ ಪಟ್ಟಣಕ್ಕೆ ಬರುತ್ತಾರೆ. 44 ಹಳ್ಳಿಗಳನ್ನು ಒಳಗೊಂಡ ಹೋಬಳಿಯಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿವೃದ್ದಿಗೆ ಮುಂದಾಗದಿರುವುದು ಸೋಜಿಗವೇ ಸರಿ.

ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಗೆ ಬಡ್ತಿ ಹೊಂದಿ ಎರಡು ವರ್ಷ ಕಳೆದರು ಅಭಿವೃದ್ದಿ ಮಾತ್ರ ಶೂನ್ಯ. ಪಟ್ಟಣದಲ್ಲಿ ಒಂದೇಒಂದು ಸಾರ್ವಜನಿಲ ಮೂತ್ರಾಲಯ ಇರದೇ ಇರುವುದು ಇಲ್ಲಿನ ಅವ್ಯವಸ್ದೆಗೆ ಕನ್ನಡಿಯಾಗಿದೆ. ಪುರುಷರು ಎಲ್ಲಿ ಬೇಕೇಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದರೆ ಮಹಿಳೆಯರು ಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ.

‘ಪಟ್ಟಣ ಪಂಚಾಯ್ತಿಗೆ ಇಲ್ಲಿರುವ ವಾಣಿಜ್ಯ ಮಳಿಗೆ, ಸಂತೆ ಹರಾಜು, ವಿವಿಧ ಮೂಲಗಳಿಂದ ಆದಾಯಕ್ಕೆ ಕಡಿಮೆ ಇಲ್ಲ. ಆದರೆ ಅವುಗಳನ್ನು ಸಮರ್ಪಕವಾಗಿ ನಿಭಾಯಿಸುವ ಕಾರ್ಯಯೋಜನೆ ಇಲ್ಲ. ಪಾರದರ್ಶಕ ಆಡಳಿತ ಕೊರತೆ ಎದ್ದು ಕಾಣುತ್ತದೆ. ತರಕಾರಿ ಮಾರುಕಟ್ಟೆ ನಿರ್ಮಾಣವಾಗಬೇಕಿದೆ. ಮುಖ್ಯ ರಸ್ತೆಯಲ್ಲಿಯೇ ವ್ಯಾಪಾರ ಮಾಡುತ್ತಾರೆ. ಕೆಲವು ಬಡಾವಣೆಗಳಲ್ಲಿ ಬಿದಿ ದೀಪಗಳು ಇದ್ದು, ಇಲ್ಲದಂತಾಗಿದೆ. ಪಟ್ಟಣದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ವರ್ಚಗಲ್ ಕೆರೆಯಿಂದ ಪೂರೈಕೆಯಾಗುವ ನೀರು ಕಲುಷಿತವಾಗಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಾಗರಿಕರು ದೂರುತ್ತಾರೆ.

2022-23ರಲ್ಲಿ ನಗರೋತ್ಥಾನ ಯೋಜನೆಯಲ್ಲಿ ₹5 ಕೋಟಿ ಮಂಜೂರಾಗಿದ್ದು, ಅದರಲ್ಲಿ 250 ಲಕ್ಷದಲ್ಲಿ 44 ಸಿಸಿ ರಸ್ತೆಗಳು, 11 ಚರಂಡಿಗಳು, ಮೂರು ಸಮುದಾಯ ಶೌಚಾಲಯಕ್ಕೆ ಮಂಜೂರು ದೊರೆತರೂ ಯಾವುದೇ ಕೆಲಸಗಳು ಪ್ರಾರಂಭವಾಗದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

‘ಜಲವಿಷನ್ ಯೋಜನೆಯಡಿ ಜಿಲ್ಲಾ ಖನಿಜ ನಿಧಿಯಿಂದ 2020-21ನೇ ಸಾಲಿನಲ್ಲಿ ಮಂಜೂರಾದ ₹250 ಲಕ್ಷದಲ್ಲಿ ಮನೆಮನೆಗೆ ನೀರು ಸರಬರಾಜು ಯೋಜನೆಯಲ್ಲಿ 893 ಮನೆಗಳಿಗೆ ನಳ ಜೋಡನೆ ಮಾಡಬೇಕಾಗಿದ್ದು, 684 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಅಪೂರ್ಣಗೊಂಡಿದ್ದು ಸಂಪರ್ಕ ನೀಡಿದ್ದ ನಳಗಳು ಕಾರ್ಯಮಾಡದೇ ಇದ್ದು ಇಲ್ಲದಂತಾಗಿದೆ. ಸುಮಾರು ₹100 ಲಕ್ಷ ಮಾತ್ರ ವೆಚ್ಚವಾಗಿದೆ. ಅಭಿವೃದ್ಧಿ ಮಾಡದೇ ಅಧಿಕಾರಿಗಳ ನಿರ್ಲಕ್ಷದಿಂದ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿವೆ’ ಎಂದು ಪಟ್ಟಣದ ನಿವಾಸಿ ಕೃಷ್ಣಾ ಸಾಳುಂಕಿ ಆರೋಪಿಸುತ್ತಾರೆ.

ಪಟ್ಟಣದಲ್ಲಿ ಎಲ್ಲ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು ಬೇಗನೆ ಪೂರ್ಣಗೊಳಿಸಬೇಕು
-ಹೊಳಬಸು ಕಾಜಗಾರ, ಅಧ್ಯಕ್ಷ ಪಿಕೆಪಿಎಸ್
ಟೆಂಡರ್ ಪ್ರಕ್ರಿಯೆ ಅಂತಮ ಹಂತದಲ್ಲಿದ್ದು ಬೇಗನೆ ಕಾಮಗಾರಿ ಪ್ರಾರಂಭಿಸಲಾಗುವುದು
-ಜ್ಯೋತಿ ಉಪ್ಪಾರ, ಮುಖ್ಯಾಧಿಕಾರಿ ಪಟ್ಟಣ ಪಂಚಾಯ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT