ಗುಳೇದಗುಡ್ಡ: ‘ಕೈಮಗ್ಗ ನೇಕಾರಿಕೆಯಲ್ಲಿ ಬದಲಾವಣೆ ಮಾಡಿದರೆ ಕೈಮಗ್ಗದ ಖಣಗಳು ಹಾಗೂ ಇತರೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಲಭಿಸಲಿದೆ. ನೇಕಾರರು ತಮ್ಮ ನೇಕಾರಿಕೆಯಲ್ಲಿ ಹೊಸ ಕೌಶಲ ರೂಢಿಸಿಕೊಂಡು ಪಾರಂಪರಿಕ ನೇಕಾರಿಕೆ ಉದ್ಯೋಗದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕು’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ಪಟ್ಟಣದ ಮುರುಘಾಮಠದಲ್ಲಿ ಸಮಸ್ತ ಕೈಮಗ್ಗ ನೇಕಾರರ ಸಮೂಹದ ಸಹಕಾರದೊಂದಿಗೆ ಗುರುವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ನೇಕಾರ ಬಂಧುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘30 ವರ್ಷಗಳ ಹಿಂದಿನ ನೇಕಾರಿಕೆ ಕಲೆಯ ಶ್ರೀಮಂತಿಕೆ ಮರು ಸೃಷ್ಠಿಸುವ ನಿಟ್ಟಿನಲ್ಲಿ ನಾವು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದರು.
ಗುರುಸಿದ್ಧೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಶ್ರೀ, ಶ್ರೀಕಾಶೀನಾಥ ಶ್ರೀ ಸಾನ್ನಿಧ್ಯ ವಹಿಸಿ, ಕೈಮಗ್ಗ ಕಲೆಗೆ ಹೆಸರಾದ ಗುಳೇದಗುಡ್ಡದಲ್ಲಿ ಮತ್ತೆ ನೇಕಾರಿಕೆ ತನ್ನ ಉಳಿಸಿಕೊಳ್ಳಬೇಕಾಗಿದೆ. ಅದಕ್ಕೆ ಸರ್ಕಾರ ಯೋಜನೆಗಳನ್ನು ರೂಪಿಸಿ ನೇಕಾರಿಕೆ ಮರುಜೀವ ಕೊಡಬೇಕಾದ ಅನಿವಾರ್ಯತೆ ಇದೆ’ ಎಂದರು.
ಹಿರಿಯ ನೇಕಾರ ಬಂಧುಗಳಿಗೆ ಸನ್ಮಾನಿಸಯಿತು. ನೇಕಾರ ಮುಖಂಡ ಅಶೋಕ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಜಶೇಖರ ಶೀಲವಂತ, ಭಾಗ್ಯಾಉದ್ನೂರ, ಚಂದ್ರಕಾಂತ ಶೇಖಾ, ರಮೇಶಅಯೋದಿ, ಎಂ.ಎಂ.ಜಮಖಾನಿ, ಶ್ರೀಕಾಂತ ಹುನಗುಂದ, ಮೋಹನ ಮಲಜಿ ಇದ್ದರು.