ಗುಳೇದಗುಡ್ಡ: ತಾಲ್ಲೂಕಿನ ರೈತರ ಜಮೀನಿಗೆ ನವಿಲುತೀರ್ಥ ಜಲಾಶಯದಿಂದ ನೀರು ಹರಿಸಲು 30 ವರ್ಷಗಳ ಹಿಂದೆ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಿಸಲಾಗಿದೆ. ಆದರೆ ಇಂದಿಗೂ ತಾಲ್ಲೂಕಿನ ರೈತರ ಜಮೀನಿಗೆ ಹನಿ ನೀರೂ ಹರಿದಿಲ್ಲ.
ಬಾದಾಮಿ ತಾಲ್ಲೂಕಿನ ಮೂಲಕ ಕುಟಕನಕೇರಿ ಗ್ರಾಮದಿಂದ ಪ್ರವೇಶಿಸುವ ಈ ಎಡದಂಡೆ ಕಾಲುವೆ ಚಿಕ್ಕಮುಚ್ಚಳಗುಡ್ಡ, ಹಂಸನೂರ, ರಾಘಾಪುರ, ಕೆಲವಡಿ, ಹಾನಾಪುರ ಎಸ್.ಪಿ, ಮುರುಡಿ, ಕೋಟೆಕಲ್, ಖಾನಾಪುರ, ಎಸ್.ಕೆ.ಪರ್ವತಿ ಮೂಲಕ ಕಟಗಿನಹಳ್ಳಿ ಮತ್ತು ಆಸಂಗಿ ಗ್ರಾಮದ ಹತ್ತಿರ ಇರುವ ಮಲಪ್ರಭಾ ನದಿಗೆ ಸೇರುವ ಯೋಜನೆ ಇದಾಗಿದೆ.
ಕಾಲುವೆ ನೀರು ನವಲಗುಂದ, ನರಗುಂದ, ಕೊಣ್ಣೂರು, ಕುಳಗೇರಿ ಮಾರ್ಗವಾಗಿ ಬಾದಾಮಿ ತಾಲ್ಲೂಕನ್ನು ಪ್ರವೇಶಿಸಿ ನಂತರ ಗುಳೇದಗುಡ್ಡ ತಾಲ್ಲೂಕನ್ನು ಪ್ರವೇಶಿಸಿದೆ. 1994ರಲ್ಲಿ ಬಾದಾಮಿ ಸಮೀಪ ಕಬ್ಬಲಗೇರಿ ಹತ್ತಿರ ತೆಗೆದ ಕಾಲುವೆ ನೀರು ಬರದಿದ್ದರಿಂದ ಸಂಪೂರ್ಣ ಮುಚ್ಚಿ ಹೋಗಿದೆ. ಗುಳೇದಗುಡ್ಡ ತಾಲ್ಲೂಕಿಗೆ ಇದುವರೆಗೆ ನೀರು ಬಂದಿಲ್ಲ. ಆದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೀರು ಬರದಿದ್ದರೂ ಗಮನ ಹರಿಸದಿರುವುದು ದುರದೃಷ್ಟಕರ.
ಒಟ್ಟು ಯೋಜನಾ ಕ್ಷೇತ್ರ: ಕುಳಗೇರಿ, ಬಾದಾಮಿ ಹಾಗೂ ಗುಳೇದಗುಡ್ಡ ಸೇರಿ 17,733 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ಕುಳಗೇರಿ ಮತ್ತು ಬಾದಾಮಿವರೆಗೆ ಕಾಲುವೆಗಳಿಗೆ ನೀರು ಬಂದಿದ್ದು, ಗುಳೇದಗುಡ್ಡ ತಾಲ್ಲೂಕು ಮಾತ್ರ ನೀರಿನಿಂದ ವಂಚಿತವಾಗಿದೆ.
ಎರಡು ಸಾವಿರ ಎಕರೆಗೆ ನೀರಾವರಿ: ಗುಳೇದಗುಡ್ಡ ತಾಲ್ಲೂಕಿನಲ್ಲಿ ಅಂದುಕೊಂಡಂತೆ ಕಾಲುವೆಯ ಮೂಲಕ ನೀರು ಹರಿದಿದ್ದರೆ 15ಕ್ಕೂ ಹೆಚ್ಚು ಗ್ರಾಮಗಳ ರೈತರ 2,000 ಎಕರೆ ಜಮೀನಿಗೆ ನೀರಾವರಿಗೆ ಸೌಲಭ್ಯ ದೊರೆಯುತ್ತಿತ್ತು. ಇಲ್ಲಿ ಬಡತನ ರೇಖೆಗಿಂತ ಕೆಳಗಿರುವ ರೈತರು ಉತ್ತಮ ಬೆಳೆ ಬೆಳೆಯುವ ಮೂಲಕ ಆರ್ಥಿಕ ಅಭಿವೃದ್ಧಿ ಆಗುವುದರ ಜೊತೆಗೆ ನೀರಾವರಿಯ ಸಮೃದ್ಧ ತಾಲ್ಲೂಕು ಆಗುವ ಸಾಧ್ಯತೆ ಹೆಚ್ಚಿತ್ತು. ಕಾಲುವೆ ನಿರ್ಮಿಸಿದರೂ ನೀರು ಬಾರದ್ದರಿಂದ ರೈತರಲ್ಲಿ ನಿರಾಸೆ ಮೂಡಿದೆ.
ಬಾರದ ಪರಿಹಾರ ಹಣ: ಕಾಲುವೆ ನಿರ್ಮಿಸಿ 30 ವರ್ಷ ಗತಿಸಿದರೂ ಹಲವು ಗ್ರಾಮಗಳ ರೈತರಿಗೆ ಕಾಲುವೆ ನಿರ್ಮಾಣಕ್ಕೆ ಜಮೀನು ನೀಡಿದ ರೈತರಿಗೆ ಇಂದಿಗೂ ಪರಿಹಾರ ಹಣ ಬಂದಿಲ್ಲ. ಅದರಲ್ಲಿ ಮುರಡಿ ಗ್ರಾಮದ ಹನಮಂತ ಗದ್ದಿ, ಫಕೀರಪ್ಪ ಗೌಡರ, ರಾಘಾಪುರ ಗ್ರಾಮದ ಮುತ್ತಪ್ಪ ಉಂಡಿ, ಬಸವರಾಜ ಉಂಡಿ, ಸಾರವ್ವ ದಾದಿ ಹಾಗೂ ಹಂಸನೂರಿನ ರೈತರು ಸೇರಿ ನೂರಾರು ರೈತರಿಗೆ ಅವರ ಭೂಮಿಯಲ್ಲಿ ಕಾಲುವೆ ತೋಡಿದ ಪರಿಹಾರ ಇಂದಿಗೂ ಬಂದಿಲ್ಲ ಎಂದು ರಾಘಾಪುರ ಗ್ರಾಮದ ರೈತ ಮುತ್ತಪ್ಪ ಉಂಡಿ ಹೇಳುತ್ತಾರೆ.
ಮುಚ್ಚಿದ ಕಾಲುವೆಗಳು: ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ನಿರ್ಮಿಸಿದ ಕಾಲುವೆಗಳಲ್ಲಿ ನೀರು ಬಾರದ್ದರಿಂದ ಕಾಲುವೆಗಳು ಮುಚ್ಚಿ ಹೋಗಿವೆ. ಕೆಲವೆಡೆ ಕಾಲುವೆಗಳು ಎಂದು ಗೊತ್ತಾಗದ ಹಾಗೆ ಗಿಡ ಬೆಳೆದಿವೆ. ಕುಟಕನಕೇರಿಯಿಂದ ರಾಘಾಪುರದವರೆಗೂ ಕಾಲುವೆಗಳೇ ಕಾಣದಷ್ಟು ಗಿಡಗಳು ಬೆಳೆದು ನಿಂತಿವೆ.
ತಿಪ್ಪೆಯಾಗಿ ಪರಿವರ್ತನೆಯಾದ ಕಾಲುವೆಗಳು: ಮುರುಡಿ ಮತ್ತು ರಾಘಾಪುರ ಗ್ರಾಮಗಳಲ್ಲಿ ಕೆಲವು ಕಡೆ ರೈತರು ಹೊಲದಲ್ಲಿ ದನ–ಕರುಗಳನ್ನು ಕಟ್ಟಿಕೊಂಡಿದ್ದಾರೆ. ತೋಟದ ಮನೆಗಳಲ್ಲಿ ಜಾನುವಾರುಗಳಿವೆ. ಅಲ್ಲಿ ರೈತರು ಕಾಲುವೆಗಳನ್ನು ತಿಪ್ಪೆ ಮಾಡಿಕೊಂಡಿದ್ದಾರೆ.
ಶಾಸಕರಿಗೆ ಮನವಿ: ಬಾದಾಮಿಯ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ವಿಭಾಗ ನಂ-3 ಇಲಾಖೆಯಿಂದ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರಿಗೆ ನವೀಕೃತ ಕಾಲುವೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನಕ್ಕೆ ಇಲಾಖೆ ಅಧಿಕಾರಿ ಟಿ. ಪ್ರಭಾಕರ ಮನವಿ ಮಾಡಿದ್ದು, ಶಾಸಕರು ಸರ್ಕಾರದಿಂದ ಅನುದಾನ ಕೊಡಿಸಲು ಭರವಸೆ ನೀಡಿದ್ದಾರೆ.
ನನ್ನ ಹೊಲದಲ್ಲಿ ಕಾಲುವೆ ನಿರ್ಮಿಸಿ 30 ವರ್ಷ ಗತಿಸಿವೆ. ಇದುವರೆಗೆ ಪರಿಹಾರವನ್ನೂ ನೀಡಿಲ್ಲ. ನೀರೂ ಬಂದಿಲ್ಲ. ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕುಮುತ್ತಪ್ಪ ಉಂಡಿ, ರಾಘಾಪುರ ಗ್ರಾಮದ ರೈತ
ಸರ್ಕಾರದ ಹಣ ಸಂಪೂರ್ಣ ಪೋಲಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ನಿರ್ಮಿಸಲು ಟೆಂಡರ್ ಪಡೆದ ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸದೇ ಹಾಗೆಯೇ ಬಿಟ್ಟು ಹೋಗಿದ್ದರಿಂದ ನೀರು ಬಂದಿಲ್ಲಪ್ರಕಾಶ ಗೌಡರ. ಅಧ್ಯಕ್ಷ ಕೃಷಿ ಪತ್ತಿನ ಸಹಕಾರ ಸಂಘ ಲಾಯದಗುಂದಿ
ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಕಾಲುವೆ ನಿರ್ಮಿಸಿದೆ. ಇದುವರೆಗೆ ನಮ್ಮ ಭೂಮಿಗೆ ನೀರೇ ಬಂದಿಲ್ಲಹುಚ್ಚಪ್ಪ ಗೌಡ್ರ, ಮುರುಡಿ ಗ್ರಾಮ
₹421 ಕೋಟಿಗೆ ಬೇಡಿಕೆ
ಗುಳೇದಗುಡ್ಡ ತಾಲ್ಲೂಕಿನಾದ್ಯಂತ ಹಾಳಾದ ಕಾಲುವೆ ದುರಸ್ತಿ ಸಂಪರ್ಕ ರಸ್ತೆ ನಿರ್ಮಾಣ ಕಾಲುವೆ ನವೀಕರಣ ಕಾರ್ಯಗಳನ್ನು ಕೈಗೊಳ್ಳಲು ₹421 ಕೋಟಿ ಅನುದಾನ ಕೋರಲಾಗಿದೆ. ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಕಚೇರಿಯಿಂದ ವಿಸ್ತ್ರತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಅನುದಾನ ನೀಡಿದಲ್ಲಿ ಕಾಲುವೆ ದುರಸ್ತಿಗೊಳಿಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಕಚೇರಿ ಕಾರ್ಯ ನಿರ್ವಾಹಕ ಎಂಜಿನಿಯರ್ ಟಿ. ಪ್ರಭಾಕರ ಹೇಳುತ್ತಾರೆ. ಇಷ್ಟು ವರ್ಷಗಳ ಕಾಲ ನೀರು ಹರಿಸಿಯೇ ಇಲ್ಲ. ವಾಸ್ತವದಲ್ಲಿ ನೀರು ಹರಿಸುವುದು ಕಷ್ಟದ ಸಂಗತಿಯಾಗಿದೆ. ಆದರೂ ಮತ್ತೆ ಕಾಲುವೆ ದುರಸ್ತಿಗೆ ಹಣ ಎತ್ತುವ ಹುನ್ನಾರ ನಡೆದಿದೆ.
ವ್ಯರ್ಥವಾದ ಕೂಲಿಕಾರರ ಶ್ರಮ
ಮುರುಡಿ ಗ್ರಾಮದ ಹತ್ತಿರ ಕಾಲುವೆಯನ್ನು ಸ್ವಚ್ಛಗೊಳಿಸಲು ಹಾನಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಅಧ್ಯಕ್ಷರು ನರೇಗಾ ಯೋಜನೆಯಲ್ಲಿ ಹಲವು ದಿನಗಳ ಕಾಲ ಸ್ವಚ್ಛಗೊಳಿಸಿದ್ದಾರೆ. ನೀರು ಬರುವುದಿಲ್ಲ ಎಂದು ಗೊತ್ತಿದ್ದರೂ ಸ್ವಚ್ಛಗೊಳಿಸಿ ಜನರ ಶ್ರಮ ಸರ್ಕಾರದ ಹಣ ವ್ಯರ್ಥಗೊಳಿಸಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.