ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ | ಗದ್ದಿಗೌಡರಿಗೆ ಹ್ಯಾಟ್ರಿಕ್‌ ಗೆಲುವು

ಕಾಂಗ್ರೆಸ್‌ಗೆ ಎದುರಾಗಿದ್ದ ಆಡಳಿತ ವಿರೋಧಿ ಅಲೆ
Published 21 ಏಪ್ರಿಲ್ 2024, 6:17 IST
Last Updated 21 ಏಪ್ರಿಲ್ 2024, 6:17 IST
ಅಕ್ಷರ ಗಾತ್ರ

ಬಾಗಲಕೋಟೆ: ಯುಪಿಎ ಸರ್ಕಾರದ ವಿರುದ್ಧ ಎದ್ದಿದ್ದ ಆಡಳಿತ ವಿರೋಧಿ ಅಲೆ, ನರೇಂದ್ರ ಮೋದಿ ಅಲೆಯಲ್ಲಿ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಗೆಲುವನ್ನು ಪಿ.ಸಿ. ಗದ್ದಿಗೌಡರ ತಮ್ಮದಾಗಿಸಿಕೊಂಡರು.

ಇಲ್ಲಿಯವರೆಗೆ ನಡೆದ ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುನಗದ ಎಸ್‌.ಬಿ. ಪಾಟೀಲ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಗದ್ದಿಗೌಡರ ಮೂರನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಅವರ ನಂತರದ ಸ್ಥಾನ ಪಡೆದರು.

2004ರಿಂದ 14ರವರೆಗೆ ಕೇಂದ್ರದಲ್ಲಿ ಯು.ಪಿ.ಎ ನೇತೃತ್ವದ ಸರ್ಕಾರ ಆಡಳಿತ ನಡೆಸಿತ್ತು. ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಕಂಡು ಬರಲಾರಂಭಿಸಿತ್ತು. ಸರ್ಕಾರದ ವಿರುದ್ಧ 2ಜಿ ಸ್ಪೆಕ್ಟ್ರಂ ಸೇರಿದಂತೆ ಹಲವು ಹಗರಣಗಳ ಆರೋಪಗಳು ಜೋರಾಗಿದ್ದವು. ಲೋಕಪಾಲ ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆ ನೇತೃತ್ವದ ಹೋರಾಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ ಮುಖಂಡರ ಕಪ್ಪು ಹಣ ವಿದೇಶದಲ್ಲಿದೆ. ಅದನ್ನು ವಾಪಸ್‌ ತರಲಾಗುವುದು ಎಂಬ ಬಿಜೆಪಿ ಘೋಷಣೆಯ ಪರಿಣಾಮ ಗದ್ದಿಗೌಡರ ಗೆಲುವಿನ ಹಾದಿ ಸುಗಮವಾಯಿತು.

ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿಯಂತಹ ನಾಯಕರ ಹೊರಾಟ, ಗುಜರಾತ್ ಮುಖ್ಯಮಂತ್ರಿಯಾಗಿ ಹೆಸರು ಗಳಿಸಿದ್ದ ನರೇಂದ್ರ ಮೋದಿ ಕೇಂದ್ರದತ್ತ ಬಂದು ಘೋಷಿಸಿದ ಹೊಸ, ಹೊಸ ಯೋಜನೆಗಳ ಪರಿಣಾಮ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಯಿತು. 

2013ರಲ್ಲಿ ಬಹುಮತದೊಂದಿಗೆ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ವರ್ಷದ ಅಂತರದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿತ್ತು ಕಾಂಗ್ರೆಸ್‌ ಪಡೆ. ಜಿಲ್ಲೆಯಲ್ಲಿಯೂ ಕಾಂಗ್ರೆಸ್‌ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ, ಮೋದಿ ಅಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ್ತೊಮ್ಮೆ ಸೋಲಾಯಿತು.

ಗೆಳೆಯರ ಸ್ಪರ್ಧೆ: ಎರಡು ಬಾರಿ ಸೋಲನುಭವಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಬದಲಾವಣೆಗೆ ಮುಂದಾಯಿತು. ಗದ್ದಿಗೌಡರ ವಿರುದ್ಧ 2004ರಲ್ಲಿ ಆರ್‌.ಎಸ್‌. ಪಾಟೀಲ, 2009ರಲ್ಲಿ ಜೆ.ಟಿ. ಪಾಟೀಲ ಕಣಕ್ಕಿಳಿದಿದ್ದರು. ಮತ್ತೆ ಅಭ್ಯರ್ಥಿ ಬದಲಾಯಿಸಿ ಈ ಬಾರಿ ಅಜಯಕುಮಾರ ಸರನಾಯಕರನ್ನು ಕಣಕ್ಕಿಳಿಸಿತು.

ಗೆಳೆಯರ ನಡುವೆ ಸ್ಪರ್ಧೆ: ಜನತಾ ಪರಿವಾರದ ಮೂಲಕ ರಾಜಕೀಯ ಅಸ್ತಿತ್ವ ಕಂಡುಕೊಂಡಿದ್ದ, ರಾಮಕೃಷ್ಣ ಹೆಗಡೆಯವರ ಶಿಷ್ಯರಾಗಿದ್ದ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಅಜಯಕುಮಾರ ಸರನಾಯಕ ಆತ್ಮೀಯ ಸ್ನೇಹಿತರಾಗಿದ್ದರು.

ಜನತಾ ಪರಿವಾರದ ಒಡಕಿನ ನಂತರ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಅಜಯಕುಮಾರ ಸರನಾಯಕ 2003ರಲ್ಲಿ ಕಾಂಗ್ರೆಸ್ ಸೇರಿದ್ದರೆ, 2004ರಲ್ಲಿ ಬಿಜೆಪಿ ಸೇರಿದ್ದರು. ರಾಜಕೀಯ ಬೆಳವಣಿಗೆಗಳ ಪರಿಣಾಮ ಇಬ್ಬರೂ ಲೋಕಸಭಾ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದರು. 

ಐಪಿಎಸ್‌ ಅಧಿಕಾರಿಯಾಗಿ ಜನಪ್ರಿಯತೆ ಪಡೆದಿದ್ದ ಶಂಕರ ಬಿದರಿ, ಜಿಲ್ಲೆಯ ರಬಕವಿ–ಬನಹಟ್ಟಿಯವರಾಗಿದ್ದರಿಂದ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್‌ ಟಿಕೆಟ್‌ ದೊರೆಯದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅದ್ದೂರಿ ಪ್ರಚಾರ ಮಾಡಿದರಾದರೂ 10,959 ಮತಗಳನ್ನು ಮಾತ್ರ ಪಡೆದುಕೊಂಡರು.

ಅಜಯಕುಮಾರ ಸರನಾಯಕ
ಅಜಯಕುಮಾರ ಸರನಾಯಕ

ಲಕ್ಷ ದಾಟಿದ ಗೆಲುವಿನ ಅಂತರ ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ಕಾಂಗ್ರೆಸ್‌ ನಡುವೆಯೇ ನೇರ ಸ್ಪರ್ಧೆ ಇತ್ತು.  1078805 ಮತಗಳು ಚಲಾವಣೆಯಾಗಿದ್ದವು. ಮೋದಿ ಅಲೆ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧದ ಜನಾಭಿಪ್ರಾಯ ಮತಗಳಾಗಿ ಪರಿವರ್ತನೆಗೊಂಡು ಬಿಜೆಪಿಯ ಪಿ.ಸಿ.ಗದ್ದಿಗೌಡರ ಕಾಂಗ್ರೆಸ್ ಪಕ್ಷದ ಅಜಯಕುಮಾರ ಸರನಾಯಕರ ವಿರುದ್ಧ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವಿಗೆ ಪಾತ್ರರಾದರು. 14 ಅಭ್ಯರ್ಥಿಗಳು ಕಣದಲ್ಲಿದ್ದ ಚುನಾವಣೆಯಲ್ಲಿ ಪಿ.ಸಿ.ಗದ್ದಿಗೌಡರ 571548 ಮತಗಳನ್ನು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರೆ ಅವರ ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ಅಜಯಕುಮಾರ ಸರನಾಯಕ 454988 ಮತಗಳನ್ನು ಪಡೆದು ಪರಾಭವಗೊಂಡರು. ಅಂದು ಒಟ್ಟು ಮತದಾನ ಶೇ 68.90ರಷ್ಟಾಗಿತ್ತು. ಗೆಲುವಿನ ಅಂತರ 116560.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT