ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಇನ್ನೂ ಆರಿಲ್ಲವೇ ಬಿಜೆಪಿ ಭಿನ್ನಮತದ ಕಿಡಿ?

ಲೋಕಸಭಾ ಚುನಾವಣೆಯೊಳಗೆ ಸರಿಪಡಿಸುವ ವಿಶ್ವಾಸ
Published 3 ಜನವರಿ 2024, 5:29 IST
Last Updated 3 ಜನವರಿ 2024, 5:29 IST
ಅಕ್ಷರ ಗಾತ್ರ

ಬಾಗಲಕೋಟೆ: ಭಿನ್ನಮತದಿಂದಾಗಿ ಜಿಲ್ಲೆಯಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿತು. ಐವರಿದ್ದ ಶಾಸಕರ ಸಂಖ್ಯೆ ಎರಡಕ್ಕೆ ಇಳಿದಿದೆ. ಲೋಕಸಭಾ ಚುನಾವಣೆಗಾದರೂ ಭಿನ್ನಮತ ಶಮನವಾಗುವುದೇ ಕಾದು ನೋಡಬೇಕಿದೆ.

ರಾಜ್ಯ ಘಟಕದ ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಾಗಲಕೋಟೆಗೆ ಬರುತ್ತಿದ್ದಾರೆ ಎಂದಾಗಲೇ ಭಿನ್ನಮತ ಶಮನವಾಗುವುದು ಎಂದು ಕಾರ್ಯಕರ್ತರು ನಿರೀಕ್ಷಿಸಿದ್ದರು. ಆದರೆ, ಅಧ್ಯಕ್ಷ ವಿಜಯೇಂದ್ರ ಬಾಗಲಕೋಟೆಯಲ್ಲಿದ್ದಾಗ ನಡೆದ ಘಟನೆಗಳನ್ನು ನೋಡಿದರೆ, ಇನ್ನೂ ಅಸಮಾಧಾನ ಹೊಗೆಯಾಡುತ್ತಿದೆ ಎಂಬುದು ಕಂಡು ಬಂದಿತು.

ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಮುರುಗೇಶ ನಿರಾಣಿ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರೂ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಇದು ಜಿಲ್ಲೆಯ ಕೆಲ ನಾಯಕರಿಗೆ ಅಸಮಾಧಾನ ಹುಟ್ಟು ಹಾಕಿದೆ. ವೇದಿಕೆ ಮೇಲಾಗಲೀ, ಕೆಳಗಾಗಲೀ ನಾಯಕರು ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ. 

ವಿಧಾನಸಭಾ ಚುನಾವಣೆಗೆ ಮುನ್ನ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಒಂದು ಕಡೆಯಾದರೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಮತ್ತೊಂದೆಡೆ ಇದ್ದರು. ಮಾಜಿ ಸಚಿವ ಗೋವಿಂದ ಕಾರಜೋಳ, ಚರಂತಿಮಠರ ಪರ ಹೆಚ್ಚಿನ ಒಲುವು ಹೊಂದಿದ್ದರೂ, ತಮ್ಮ ಕ್ಷೇತ್ರದಲ್ಲಿ ಮತ ಗಳಿಕೆಗಾಗಿ ನಿರಾಣಿ ಅವರನ್ನೂ ಬಿಡದಂತಹ ಸ್ಥಿತಿಯಲ್ಲಿದ್ದರು. ಹಾಗಾಗಿ, ಪ್ರತಿ ನಡೆಯಲ್ಲೂ ಬ್ಯಾಲೆನ್ಸ್ ಮೆಂಟೇನ್‌ ಮಾಡಿದ್ದರು.

ಮುರುಗೇಶ ನಿರಾಣಿ ಅವರ ವಿರುದ್ಧ ಆಗಾಗ ವಾಗ್ದಾಳಿ ನಡೆಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ತಮ್ಮ ಅನುಕೂಲಕ್ಕೆ ತಕ್ಕಂತೆ ಬಾಗಲಕೋಟೆ ಜಿಲ್ಲೆಯ ರಾಜಕೀಯದಲ್ಲೂ ಆಗಾಗ ತಮ್ಮ ದಾಳ ಉರುಳಿಸುತ್ತಿರುತ್ತಾರೆ. ಇದು ಜಿಲ್ಲೆಯಲ್ಲಿನ ಭಿನ್ನಮತದ ಬೆಂಕಿಗೆ ಗಾಳಿ ಬೀಸಿದಂತಾಗುತ್ತದೆ.

‘ರಾಜ್ಯದ ಎಲ್ಲ ನಾಯಕರೊಂದಿಗೆ ಮಾತನಾಡಿ ಅಸಮಾಧಾನವನ್ನು ಶಮನಗೊಳಿಸಲಾಗಿದೆ. ಯಾವುದೇ ಭಿನ್ನಮತವಿಲ್ಲ. ಒಗ್ಗಟ್ಟಾಗಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ’ ಎಂದು ವಿಜಯೇಂದ್ರ ಹೇಳಿದರು. ಆದರೆ, ಜಿಲ್ಲೆಯ ನಾಯಕರ ನಡುವೆ ಅಂತಹ ಲಕ್ಷಣಗಳು ಕಾಣಿಸಲಿಲ್ಲ.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮನೆಗೆ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೋದಾಗ ಜಿಲ್ಲೆಯ ಕೆಲ ನಾಯಕರು ಅಲ್ಲಿರಲಿಲ್ಲ. ನಂತರ ಅವರು, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಕಚೇರಿಗೆ ಹೋದಾಗಲೂ ಕೆಲವರು ಗೈರಾಗಿದ್ದರು. ಜತೆಗೆ ಕಾರ್ಯಕರ್ತರ ಸಮಾವೇಶಕ್ಕೆ ಇನ್ನೂ ಕೆಲ ನಾಯಕರು ಹಾಜರಾಗಿರಲಿಲ್ಲ.

ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡಲಿಲ್ಲ. ನಾಯಕರ ನಡುವಿನ ಜಗಳದಿಂದಾಗಿ ಎರಡನೇ ಹಂತದ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇವರ ಬಳಿ ಹೋದರೆ ಅವರಿಗೆ ಸಿಟ್ಟು, ಅವರ ಬಳಿ ಹೋದರೆ ಇವರಿಗೆ ಸಿಟ್ಟು ಎಂಬ ಕಾರಣಕ್ಕಾಗಿ ಸಂಘಟನೆಯಲ್ಲಿ ತಟಸ್ಥರಾಗಿ ಉಳಿಯುತ್ತಿದ್ದಾರೆ. ಇನ್ನಾದರೂ ವಿಜಯೇಂದ್ರ ಅಸಮಾಧಾನ ಶಮನಕ್ಕೆ ಮುಂದಾಗುವರೇ ಎಂಬುದು ಕಾರ್ಯಕರ್ತರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT