ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಷ್ಟರನ್ನು ನೋಡಬಾರ್ದು, ನನ್ನ ನೋಡಬೇಕು: ಸಚಿವ ಎಸ್.ಸುರೇಶಕುಮಾರ್

Last Updated 25 ಅಕ್ಟೋಬರ್ 2019, 12:45 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಟೆಕ್ಸ್ಟ್‌ಬುಕ್ಸ್ ಎಲ್ಲಾ ಬಂದಿದೆಯಾ, ಯಾವುದೂ ಟೆಕ್ಸ್ಟ್ ಬುಕ್ ಇಲ್ಲಾ ಅನ್ನೋಂಗೆ ಏನೂ ಇಲ್ಲ. ಯಾವತ್ತು ಬಂತು. ಯಾವುದೂ ಟೆಕ್ಸ್ಟ್‌ಬುಕ್ಸ್ ನೀವು ಕಳೆದುಕೊಂಡಿರಲಿಲ್ಲವಾ, ಹೊಸದು ಬಂತಾ, ಯಾವತ್ತು ಬಂತು..ಮೇಷ್ಟರನ್ನು ನೋಡಬಾರ್ದು ನೀನು. ನನ್ನ ನೋಡಬೇಕು...

ಇದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಗುರುವಾರ ಮುಧೋಳ ತಾಲ್ಲೂಕಿನ ಒಂಟಿಗೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ಮಕ್ಕಳ ಯೋಗಕ್ಷೇಮ ವಿಚಾರಿಸಿದ ಪರಿ.

ಘಟಪ್ರಭಾ ನದಿ ಪ್ರವಾಹದಿಂದ ಒಂಟಿಗೋಡಿಯ ಶಾಲೆ ತೀವ್ರವಾಗಿ ಹಾನಿಗೀಡಾಗಿದೆ. ಹೀಗಾಗಿ ಮಕ್ಕಳಿಗೆ ಅಲ್ಲಿಂದ ಒಂದೂವರೆ ಕಿ.ಮೀ ದೂರದ ಆಸರೆ ಕಾಲೊನಿ ಬಳಿ ತಾತ್ಕಾಲಿಕವಾಗಿ ತಗಡಿನ ಶೆಡ್‌ಗಳನ್ನು ಹಾಕಿ ಅಲ್ಲಿ ಪಾಠ ಮಾಡಲಾಗುತ್ತಿದೆ.

ಡಿಸಿಎಂ ಗೋವಿಂದ ಕಾರಜೋಳ ಅವರೊಂದಿಗೆ ಸುರೇಶಕುಮಾರ್ ಅಲ್ಲಿಗೆ ಭೇಟಿ ನೀಡಿ ಹಾನಿಗೀಡಾದ ಶಾಲೆಯ ಕಟ್ಟಡ ವೀಕ್ಷಣೆ ಮಾಡಿದರು. ನಂತರ ತಾತ್ಕಾಲಿಕ ಶೆಡ್‌ಗೆ ಬಂದು ಮಕ್ಕಳೊಂದಿಗೆ ಚರ್ಚಿಸಿದರು.

ಬಾಲಕಿಯೊಬ್ಬಳ ಪುಸ್ತಕ ಪರಿಶೀಲಿಸಿದ ಸಚಿವರು, ‘ಕಾವೇರಿನಾ ನೀನು. ನಿನ್ನ ಹೆಸರು ಕಾವೇರಿ ಅಲ್ವಾ, ಕಾವೇರಿ ಅಂದ್ರೆ ಏನು‘ ಎಂದು ಪ್ರಶ್ನಿಸಿದರು. ಅದಕ್ಕೆ ನಾಚಿದ ಬಾಲೆ ನದಿ ಎಂದು ಪ್ರತಿಕ್ರಿಯಿಸಿದಳು. ಅದು ಎಲ್ಲಿದೆ ಎಂದು ಮರು ಪ್ರಶ್ನೆ ಹಾಕಿದಾಗ ಗೊತ್ತಿಲ್ಲ ಎಂಬ ಉತ್ತರ ಬಂತು. ‘ಗೊತ್ತಿಲ್ಲವಾ? ಓಹ್ ನಾನೇ ಇರುವಾಗ ಅದು ಯಾಕೆ ಬೇಕು ಅಲ್ವಾ‘ ಎಂದು ಚಟಾಕಿ ಹಾರಿಸಿದರು.

ಏಳನೇ ಕ್ಲಾಸಿಗೆ ಎಲ್ಲರೂ ರೆಡಿ ಇದ್ದೀರಾ, ಏನಕ್ಕೆ.. ಪಬ್ಲಿಕ್ ಪರೀಕ್ಷೆಗೆ ರೆಡಿ ಇದ್ದೀರಾ. ಮಗ್ಗಿ ಯಾರಿಗೆ ಎಲ್ಲರಿಗೂ ಬರುತ್ತದಾ, ಏಳರ ಮಗ್ಗಿ ಬರುತ್ತದಾ ಎಂದು ಪ್ರಶ್ನಿಸಿದರು. ಬಾಲಕಿಯೊಬ್ಬಳು ಏಳರ ಮಗ್ಗಿ ಹೇಳಿ ಮುಗಿಸಿದಾಗ ಏಳು ಆರಲೇ ಎಷ್ಟು ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಸರಿಯಾಗಿ ಉತ್ತರಿಸಿದ ಆಕೆ, ಆರು ಏಳಲೇ ಎಷ್ಟು ಎಂದು ಕೇಳಿದಾಗ 49 ಎಂದು ತಪ್ಪಾಗಿ ಹೇಳಿದಳು. ಉತ್ತರ ಸರಿಪಡಿಸಿದ ಸಚಿವರು ಅಲ್ಲಿಂದ ಹೊರಟರು.

ಬೋರ್ಡ್ ವ್ಯವಸ್ಥೆ ಮಾಡಿ:ಮಕ್ಕಳಿಗೆ ತಗಡಿನ ಶೆಡ್ ವ್ಯವಸ್ಥೆ ಆದರೂ, ಪಾಠ ಮಾಡಲು ಬೋರ್ಡ್ ಇಲ್ಲದಿರುವುದನ್ನು ಗಮನಿಸಿದ ಸಚಿವರು ಸ್ಥಳದಲ್ಲಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರನ್ನು ಕರೆದು ತಕ್ಷಣ ಬೋರ್ಡಿನ ವ್ಯವಸ್ಥೆ ಮಾಡಿ ಎಂದು ಸೂಚನೆ ಕೊಟ್ಟರು.

ಮಕ್ಕಳು ಬಂದಿರಲಿಲ್ಲ:ಏಳನೇ ತರಗತಿಯಲ್ಲಿ 23 ವಿದ್ಯಾರ್ಥಿಗಳು ಇದ್ದು, ಹಳೆಯ ಊರಿನಿಂದ ಆಸರೆ ಕಾಲೊನಿಯತ್ತ ಬರಲು ಹಳ್ಳ ಅಡ್ಡ ಬಂದಿದ್ದ ಕಾರಣ ಬಹಳಷ್ಟು ಮಕ್ಕಳು ಶಾಲೆಗೆ ಬಂದಿರಲಿಲ್ಲ. ಸಚಿವರು ಬಂದಾಗ 10 ಮಕ್ಕಳು ಮಾತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT