ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಉಮಾಶ್ರೀಗೆ ಅವಕಾಶ: ಜಿಲ್ಲೆಯ ಆಕಾಂಕ್ಷಿಗಳಿಗೆ ತೊಡಕು

Published 23 ಮೇ 2024, 6:42 IST
Last Updated 23 ಮೇ 2024, 6:42 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯೊಂದಿಗೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ವಿಧಾನ ಪರಿಷತ್ ಮಾಜಿ ಸದಸ್ಯರು, ವಿಧಾನಸಭೆಗೆ ಅವಕಾಶ ಸಿಗದವರು, ಪಕ್ಷದಲ್ಲಿ ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದವರೆಲ್ಲ ವಿಧಾನ ಪರಿಷತ್‌ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

11 ಸ್ಥಾನಗಳ ಪೈಕಿ ಏಳು ಸ್ಥಾನಗಳು ಕಾಂಗ್ರೆಸ್‌, ಮೂರು ಬಿಜೆಪಿ ಹಾಗೂ ಒಂದು ಜೆಡಿಎಸ್‌ಗೆ ಸಿಗಲಿದೆ ಎಂಬ ಲೆಕ್ಕಾಚಾರವಿದೆ. ಅದೇ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಈಗಾಗಲೇ ಬೆಂಗಳೂರು, ದೆಹಲಿ ನಾಯಕರ ಮೂಲಕ ಪ್ರಯತ್ನ ಕಾರ್ಯ ಆರಂಭಿಸಿದ್ದಾರೆ.

ಸುದೀರ್ಘ ಕಾಲ ವಿಧಾನ ಪರಿಷತ್‌ ಸದಸ್ಯರು, ಸಚಿವರೂ ಆಗಿದ್ದ ಎಸ್‌.ಆರ್. ಪಾಟೀಲರಿಗೆ ಈ ಹಿಂದೆ ಪರಿಷತ್‌ ಟಿಕೆಟ್ ನಿರಾಕರಿಸಲಾಗಿತ್ತು. ವಿಧಾನಸಭೆ ಚುನಾವಣೆಗೂ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಿಂದ ಆಕಾಂಕ್ಷಿಯಾಗಿದ್ದರು. ಆಗಲೂ ಟಿಕೆಟ್‌ ಸಿಕ್ಕಿರಲಿಲ್ಲ. ಹಾಗಾಗಿ, ವಿಧಾನ ಪರಿಷತ್ ಪ್ರವೇಶದ ಅವಕಾಶ ನಿರೀಕ್ಷೆಯಲ್ಲಿದ್ದಾರೆ.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಈ ಹಿಂದೆ ಶಾಸಕರಾಗಿದ್ದರು. ಒಂದು ಬಾರಿ ಮೇಲ್ಮನೆಯ ಪ್ರವೇಶಕ್ಕೂ ಆಕಾಂಕ್ಷಿಯಾಗಿದ್ದಾರೆ. ಇದಲ್ಲದೆ ಮಾಜಿ ಸಚಿವ ಅಜಯಕುಮಾರ ಸರನಾಯಕ ಕೂಡ ಒಂದು ಕೈ ನೋಡಲು ಸಜ್ಜಾಗಿದ್ದಾರೆ. ಇವರ ಲ್ಲದೆ ಹಲವು ನಾಯಕರು ವಿಧಾನ ಪರಿಷತ್ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಕೆಲ ತಿಂಗಳ ಹಿಂದೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ನಟಿ ಉಮಾಶ್ರೀ ಅವರಿಗೆ ಅವಕಾಶ ನೀಡಲಾಗಿದೆ. ಅವರು ಈ ಹಿಂದೆ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿದ್ದರು. ಹಾಗಾಗಿ, ಅವರನ್ನು ಜಿಲ್ಲೆಯ ಕೋಟಾದಿಂದ ಪರಿಗಣಿಸಲಾಗಿತ್ತು ಎಂದು ಕಾಂಗ್ರೆಸ್‌ ರಾಜ್ಯ ನಾಯಕರು ಹೇಳುತ್ತಿರುವುದು ಆಕಾಂಕ್ಷಿಗಳಿಗೆ ಅಡ್ಡಿಯಾಗುವ ಲಕ್ಷಣಗಳಿವೆ.

ಬಿಜೆಪಿಯಲ್ಲಿ ಹೆಚ್ಚಿನ ಚಟುವಟಿಕೆಗಳು ಬಹಿರಂಗವಾಗಿ ಕಾಣಿಸುತ್ತಿಲ್ಲ. ಆದರೆ, ಹಲವು ಮಾಜಿ ಶಾಸಕರು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ರಾಜ್ಯಸಭೆಗೆ ಬಾಗಲಕೋಟೆಯ ನಾರಾಯಣ ಭಾಂಡಗೆ ಅವರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ವಿಧಾನ ಪರಿಷತ್‌ಗೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಜಿಲ್ಲೆಗೆ ಅವಕಾಶ ನೀಡಲು ಮನವಿ

ಬಾಗಲಕೋಟೆ: ವಿಧಾನಸಭೆಯಿಂದ ವಿಧಾನ ಪರಿಷತ್‌ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಹದ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.

ಸ್ಥಳೀಯ ಸಂಸ್ಥೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಾತಿನಿಧ್ಯ ಸಿಗಲಿಲ್ಲ. ಲೋಕಸಭೆಯ ಚುನಾವಣೆಯಲ್ಲಿಯೂ ಜಿಲ್ಲೆಯ ಆಕಾಂಕ್ಷಿಗಳಿಗೆ ಅವಕಾಶ ನೀಡಲಿಲ್ಲ. ಆದರಿಂದ, ಪರಿಷತ್ ಸದಸ್ಯ ಸ್ಥಾನಕ್ಕೆ ಜಿಲ್ಲೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾರೆ.

ಬೆಳ್ಳುಬ್ಬಿಗೆ ಅವಕಾಶಕ್ಕೆ ಆಗ್ರಹ

ಬಾಗಲಕೋಟೆ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಗಾಣಿಗ ಸಮಾಜದ ಎಸ್‌.ಕೆ. ಬೆಳ್ಳುಬ್ಬಿ ಅವರಿಗೆ ಅವಕಾಶ ನೀಡಬೇಕು ಎಂದು ಜಿಲ್ಲಾ ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಲಿಂಗಣ್ಣ ಗೋಡಿ, ಮುಖಂಡ ಪ್ರಕಾಶ ಅಂತರಗೊಂಡ ಮಾತನಾಡಿ, ಸಮಾಜದ ನಾಯಕರಿಗೆ ರಾಜಕೀಯವಾಗಿ ಅವಕಾಶಗಳು ಸಿಕ್ಕಿಲ್ಲ. ಸಚಿವರಾಗಿ ಉತ್ತಮ ಕೆಲಸ ಮಾಡಿರುವ ಬೆಳ್ಳುಬ್ಬಿ ಅವರಿಗೆ ಸಮಾಜದ ಪರವಾಗಿ ಅವಕಾಶ ನೀಡಬೆಕು ಎಂದು ಒತ್ತಾಯಿಸಿದರು.

ಗಾಣಿಗ ಸಮಾಜದ ಲಕ್ಷ್ಮಣ ಸವದಿ ಅವರಿಗೆ ಈ ಹಿಂದೆ ಅವಕಾಶ ನೀಡದ್ದರಿಂದ ಪಕ್ಷಕ್ಕೆ ಹಾನಿಯಾಯಿತು. ಮತ್ತೆ ಅದು ಮರುಕಳಿಸಬಾರದು. ಕೇವಲ ಮತ ಬ್ಯಾಂಕ್‌ ಆಗಿ ಬಳಸಿಕೊಂಡರೆ, ಮುಂದಿನ ದಿನಗಳಲ್ಲಿ ಸೂಕ್ತ ರಾಜಕೀಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಸಂಗಪ್ಪ, ಎಂ.ಎಸ್‌. ನಾಡಗೌಡರ, ಎಸ್‌.ವೈ.ಕಣಗಿ, ಬಿ.ಎಫ್‌. ಹೊರಕೇರ, ಪಿ.ಎಂ. ಗಾಣಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT