ಮಂಗಳವಾರ, ಮೇ 11, 2021
28 °C
ಪ್ರಜಾವಾಣಿ ’ಯಶಸ್ವಿನಿ’ ಸಮಾರಂಭ

ಮಹಿಳೆ ಯಶಸ್ವಿ ಪುರುಷನ ಹಿಂದಲ್ಲ, ಪಕ್ಕದಲ್ಲಿರುತ್ತಾಳೆ: ಸಚಿವೆ ಶಶಿಕಲಾ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ಮಹಿಳೆ, ಪ್ರತಿ ಯಶಸ್ವಿ ಪುರುಷನ ಹಿಂದೆ ಇರುವುದಿಲ್ಲ. ಬದಲಿಗೆ ಪಕ್ಕದಲ್ಲಿಯೇ ಇರುತ್ತಾಳೆ. ಆತನ ಯಶಸ್ಸಿನಲ್ಲಿ ಪಾಲುದಾರಿಣಿಯೂ ಹೌದು. ಸಮಾಜ ಅದನ್ನು ಅದೇ ರೀತಿ ಅರ್ಥೈಸಿಕೊಳ್ಳಬೇಕು. ಆಗಲೇ ಆ ಮಾತಿಗೊಂದು ಅರ್ಥ, ಗೌರವ ಇರಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.

ಇಲ್ಲಿನ ಗೌರಿಶಂಕರ ಕಲ್ಯಾಣಮಂಟಪದಲ್ಲಿ ಶನಿವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ‘ಪ್ರಜಾವಾಣಿ’ ಬಳಗದಿಂದ ಆಯೋಜಿಸಿದ್ದ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭ ‘ಯಶಸ್ವಿನಿ’ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿ, ವಿದ್ಯೆ, ಶಕ್ತಿ, ದುಡ್ಡು, ನದಿ, ಗೋವಿನ ಹೆಸರಲ್ಲಿ ಗುರುತಿಸಲ್ಪಡುವ ಮಹಿಳೆ ಸಹನಶೀಲಳೂ ಹೌದು. ಒಳ್ಳೆಯ ಸಂಗತಿಗಳ ಬಗ್ಗೆ ಆಕೆಗೆ ಸಹನೆ ಇರಲಿದೆ. ಅನ್ಯಾಯ ಕಂಡರೆ ಸಹಿಸುವುದಿಲ್ಲ. ಸಾಧನೆ ಸುಮ್ಮನೆ ದೊರೆಯುವುದಿಲ್ಲ. ಅದರ ಹಿಂದೆ ಕಷ್ಟ, ಪರಿಶ್ರಮ, ನೋವು, ತ್ಯಾಗ ಎಲ್ಲವೂ ಇದೆ. ಸೋಲೇ ಗೆಲುವಿನ ಸೋಪಾನ ಎಂದು ಅರಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹೀಗೆ ಯಶಸ್ಸಿನ ಹಾದಿಯಲ್ಲಿ ಸಾಗಿ ಬಂದವರನ್ನು ಗುರುತಿಸುವ ಕೆಲಸ ’ಪ್ರಜಾವಾಣಿ‘ ಬಳಗ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ’ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ಮೂಲಕ ನಮ್ಮನ್ನು ನಾವು ಗೌರವಿಸಿಕೊಳ್ಳುವ ಕೆಲಸ ಮಾಡಿದ್ದೇವೆ. ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಕಡೆಯೂ ಇಂತಹ ಕಾರ್ಯಕ್ರಮ ಸಂಘಟಿಸಲಿದ್ದೇವೆ‘ ಎಂದರು.

ಪತ್ರಿಕೆಯಿಂದ ಕೊರೊನಾ ಸೋಂಕು ಹರಡಿದ ಒಂದೇ ಒಂದು ನಿದರ್ಶನವೂ ಜಗತ್ತಿನಲ್ಲಿ ಇಲ್ಲ. ಇದನ್ನು ವಿಶ್ವಸಂಸ್ಥೆಯೂ ದೃಢೀಕರಿಸಿದೆ. ಸುಳ್ಳು ಸುದ್ದಿ ನಂಬಿ ಪತ್ರಿಕೆಗಳ ಪ್ರಸರಣಕ್ಕೆ ತೊಂದರೆ ಮಾಡುವ ಕಾರ್ಯ ನಡೆದಿತ್ತು. ಅದನ್ನು ತೊಡೆದು ಹಾಕಲು ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಾಗಲಕೋಟೆ ಜಿಲ್ಲೆಯ 19 ಮಂದಿ ಮಹಿಳೆಯರನ್ನು ಸಚಿವೆ ಶಶಿಕಲಾ ಜೊಲ್ಲೆ ಸನ್ಮಾನಿಸಿದರು.

ಕೊಪ್ಪಳದ ಉದ್ಯಮಿ ಭಾರತಿ ಗುಡ್ಲಾನೂರ, ಹಾಸ್ಯಸಾಹಿತಿ ಇಂದುಮತಿ ಸಾಲಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್, ಪ್ರಜಾವಾಣಿ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥೆ ಎಸ್.ರಶ್ಮಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು