ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಅಡುಗೆ ಎಣ್ಣೆ ತ್ಯಾಜ್ಯದಿಂದ ಇಂಧನ

ಬಾಗಲಕೋಟೆ ಮಾದರಿ ಅಳವಡಿಕೆಗೆ ಮುಂದಾದ ಬಿಬಿಎಂಪಿ, ತುಮಕೂರು ಪಾಲಿಕೆ
Last Updated 4 ನವೆಂಬರ್ 2020, 5:23 IST
ಅಕ್ಷರ ಗಾತ್ರ
ADVERTISEMENT
""
""
""
""
""

ಬಾಗಲಕೋಟೆ: ನಿತ್ಯ ನಸುಕಿನಲ್ಲಿ ಮನೆ, ಹೋಟೆಲ್, ಅಂಗಡಿಗಳ ಬಾಗಿಲಿಗೆ ಟ್ರ್ಯಾಕ್ಟರ್‌ನಲ್ಲಿ ಬರುವ ಇಲ್ಲಿನ ನಗರಸಭೆಯ ಸ್ವಚ್ಛತಾ ಸಿಬ್ಬಂದಿ‌ ಬರೀ ಕಸ ಮಾತ್ರ ಸಂಗ್ರಹಿಸುವುದಿಲ್ಲ. ಜೊತೆಗೆ ಮನೆಯಲ್ಲಿ ನಾವು ಬಳಸಿ ಬಿಸಾಕಲು ಇಟ್ಟ ಖಾದ್ಯ ತೈಲದ (ಅಡುಗೆ ಎಣ್ಣೆ ವೇಸ್ಟ್) ತ್ಯಾಜ್ಯವನ್ನೂ ಕೊಂಡುಕೊಳ್ಳುತ್ತಾರೆ. ಪ್ರತಿ ಲೀಟರ್ ತ್ಯಾಜ್ಯಕ್ಕೆ ₹15 ಕೊಡುತ್ತಾರೆ!

ಹೀಗೆ ಹಣ ನೀಡಿ ಕೊಂಡೊಯ್ದ ಖಾದ್ಯ ತೈಲದ ತ್ಯಾಜ್ಯ, ಸಂಜೆ ವೇಳೆ ಬಯೊ ಡೀಸೆಲ್ ಆಗಿ ಪರಿವರ್ತನೆಯಾಗಿರುತ್ತದೆ. ಪ್ರತಿ ಲೀಟರ್‌ಗೆ ₹65ರಂತೆ ಕೊಳ್ಳಲು ಸಿಗುತ್ತದೆ. ಹೀಗೆ ಕಸ ಕೊಂಡೊಯ್ದು ರಸವಾಗಿಸಿ ಮಾರಾಟ ಮಾಡುವ ಪರಿಸರ ಸ್ನೇಹಿ ಕಾರ್ಯಕ್ಕೆ ಇಲ್ಲಿನ ನಗರಸಭೆ ಆಡಳಿತ ರಾಜ್ಯಮಟ್ಟದಲ್ಲಿ ಮನ್ನಣೆಗೆ ಪಾತ್ರವಾಗಿದೆ. ವರ್ಷದ ಹಿಂದೆ ಪೌರಾಡಳಿತ ನಿರ್ದೇಶನಾಲಯ (ಡಿಎಂಎ) ಪ್ರಶಸ್ತಿ ನೀಡಿ ಗೌರವಿಸಿದೆ.

ಮಾರಾಟಕ್ಕೆ ಸಿದ್ಧವಾದ ಬಯೊ ಡೀಸೆಲ್

ಆರೋಗ್ಯಕ್ಕೆ ಮಾರಕವಾಗಿತ್ತು..

ಈ ಮೊದಲು ಒಮ್ಮೆ ಬಳಕೆಯಾದ ಖಾದ್ಯ ತೈಲ ಮತ್ತೊಮ್ಮೆ, ಮಗದೊಮ್ಮೆ ಬೀದಿ ಬದಿಯ ಹೋಟೆಲ್, ಕೈ ಗಾಡಿಗಳಲ್ಲಿ ತಿನಿಸು ತಯಾರಿಕೆಗೆ ಬಳಕೆಯಾಗುತ್ತಿತ್ತು. ದೊಡ್ಡ ಹೋಟೆಲ್, ಕಲ್ಯಾಣ ಮಂಟಪಗಳಿಂದ ಕಡಿಮೆ ದರಕ್ಕೆ ಕೊಂಡು ತಂದು ಅವುಗಳನ್ನು ಮರು ಬಳಕೆ ಮಾಡುತ್ತಿದ್ದರು. ಇಲ್ಲಿ ಕರಿದು ಉಳಿದ ಎಣ್ಣೆಯ ತ್ಯಾಜ್ಯ ಸೋಸಿ ಪಾಕೆಟ್ ಮಾಡಿ ಗುಡಿಗಳಲ್ಲಿ ನಂದಾ ದೀಪ ಹಚ್ಚಲು ಬರುವವರಿಗೆ ಮಾರಾಟ ಮಾಡುತ್ತಿದ್ದರು.

ಈ ಕಳಪೆ ಎಣ್ಣೆ ಬೀದಿ ಬದಿಯ ಸಣ್ಣ ಹೋಟೆಲ್‌ಗಳಲ್ಲಿ ತಿನ್ನುವ ಬಡವರ ಆರೋಗ್ಯಕ್ಕೂ ಮಾರಕವಾಗಿತ್ತು. ಮೀನು, ಚಿಕನ್ ಕರಿದ ಎಣ್ಣೆಯೂ ಸೋಸುವಿಕೆ ನಂತರ ದೀಪ ಬೆಳಗಲು ಬಳಕೆಯಾಗುತ್ತಿತ್ತು. ಅದನ್ನು ತಪ್ಪಿಸಲು ನಗರಸಭೆ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಶಾಖೆ ಕಂಡುಕೊಂಡ ಮಾರ್ಗ ಇದು.

ಬಾಗಲಕೋಟೆ ಬಿ.ವಿ.ವಿ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಬಯೊ ಟೆಕ್ನಾಲಜಿ ವಿಭಾಗದಲ್ಲಿರುವ ಬಯೊ ಡೀಸೆಲ್ ಉತ್ಪಾದನಾ ಘಟಕ

ಎಂಜಿನಿಯರಿಂಗ್ ಕಾಲೇಜು ಸಾಥ್:

ಹಸಿರು ಇಂಧನ ತಯಾರಿಕೆಯ ಈ ಸಾರ್ಥಕ ಕಾರ್ಯಕ್ಕೆನಗರಸಭೆಯೊಂದಿಗೆ ಇಲ್ಲಿನ ವಿದ್ಯಾಗಿರಿಯ ಬಿ.ವಿ.ವಿ ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಬಯೊಟೆಕ್ನಾಲಜಿ ವಿಭಾಗ ಕೂಡ ಕೈ ಜೋಡಿಸಿದೆ.

ಇಲ್ಲಿನ ಮೂರು ವರ್ಷಗಳ ಹಿಂದೆ ಖಾದ್ಯ ತೈಲ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದ್ದು, ತಾಂತ್ರಿಕ ಉಪಕರಣಗಳ ಅಳವಡಿಕೆಗೆ ₹5 ಲಕ್ಷ ಖರ್ಚು ಮಾಡಿದ್ದಾರೆ. ನಿತ್ಯ 200 ಲೀಟರ್ ಬಯೊಡೀಸೆಲ್ ತಯಾರಿಕೆ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಆದರೆ ಬೇಡಿಕೆಯಷ್ಟು ಬಳಕೆಯಾದ ಎಣ್ಣೆ ಸಿಗದ ಕಾರಣ ಈಗ ನಿತ್ಯ 120 ರಿಂದ 150 ಲೀಟರ್ ಬಯೊ ಡೀಸೆಲ್ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ಕಾಲೇಜಿನ ಬಯೊ ಟೆಕ್ನಾಲಜಿ ವಿಭಾಗದ ಡಾ.ಮೀನಾಕ್ಷಿ ಹಾಗೂ ಡಾ.ಭಾರತಿ ಮೇಟಿ ಅವರ ಮೇಲ್ವಿಚಾರಣೆಯಲ್ಲಿ ಈ ಘಟಕ ನಡೆಯುತ್ತಿದೆ. ಹಸಿರು ಇಂಧನ ಮಾರಾಟದಿಂದ ಸಂಗ್ರಹವಾಗುವ ಲಾಭಾಂಶವನ್ನು ಘಟಕದ ನಿರ್ವಹಣೆಗೆ ಬಳಸುತ್ತಿದ್ದಾರೆ.

’ಬಳಕೆಯಾದ ಖಾದ್ಯ ತೈಲವನ್ನು ಮನೆ, ಹೋಟೆಲ್‌ಗಳಿಂದ ಮಾತ್ರವಲ್ಲ ಕಲ್ಯಾಣ ಮಂಟಪಗಳಿಂದ ನಗರಸಭೆ ಸಿಬ್ಬಂದಿ ನಿತ್ಯ ಸಂಗ್ರಹಿಸಿ ತರುತ್ತಾರೆ. ಆರಂಭದಲ್ಲಿ ಲೀಟರ್‌ಗೆ ₹5 ಕೊಡುತ್ತಿದ್ದೆವು. ಆಗ ಅಷ್ಟಾಗಿ ಜನರಿಂದ ಸ್ಪಂದನೆ ಇರಲಿಲ್ಲ. ನಂತರ ಪ್ರತಿ ಲೀಟರ್‌ಗೆ ₹10 ಕೊಡಲು ಆರಂಭಿಸಿದೆವು. ಆಗ ಕೊಡ ತೊಡಗಿದರು. ಈಗ ₹15ಕ್ಕೆ ಹೆಚ್ಚಿಸಿದ್ದೇವೆ‘ ಎಂದು ನಗರಸಭೆ ಆಯುಕ್ತ ಮುನಿಸ್ವಾಮಪ್ಪ ಹೇಳುತ್ತಾರೆ.

’ನಿಮ್ಮ ಬಳಿ ಕೊಂಡೊಯ್ದ ಖಾದ್ಯ ತೈಲ ಮರು ಬಳಕೆ ಮಾಡಿ ತಿನಿಸುಗಳು ಮಾಡುತ್ತಾರೆ. ಅದರಿಂದ ಬಡವರ ಆರೋಗ್ಯಕ್ಕೆ ಕಂಟಕವಾಗುತ್ತಿದೆ‘ ಎಂಬುದನ್ನು ದೊಡ್ಡ ಹೋಟೆಲ್‌ಗಳ ಮಾಲೀಕರು, ಕಲ್ಯಾಣ ಮಂಟಪಗಳ ವ್ಯವಸ್ಥಾಪಕರಿಗೆ ಮನವರಿಕೆ ಮಾಡಿಕೊಟ್ಟೆವು. ಕ್ರಮೇಣ ಅವರು ಸ್ಪಂದಿಸಿ ನಮಗೆ ಕೊಡತೊಡಗಿದರು ಎನ್ನುತ್ತಾರೆ ಅವರು.

ಬಾಗಲಕೋಟೆ ಬಿ.ವಿ.ವಿ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಬಯೊ ಟೆಕ್ನಾಲಜಿ ವಿಭಾಗದಲ್ಲಿರುವ ಬಯೊ ಡೀಸೆಲ್ ಉತ್ಪಾದನಾ ಘಟಕ

ಇನ್ನಷ್ಟು ಬೇಡಿಕೆ:

ಈಗ ಸಂಸ್ಕರಣಾ ಘಟಕದ ಸಾಮರ್ಥ್ಯದಷ್ಟು ಬಳಕೆ ಮಾಡಿದ ಖಾದ್ಯ ತೈಲ ಸಿಗುತ್ತಿಲ್ಲ. ಹೀಗಾಗಿ ಜಿಲ್ಲೆಯ ಉಳಿದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಸಂಗ್ರಹಿಸಿ ತರುವ ಉದ್ದೇಶ ಹೊಂದಿದ್ದೇವೆ. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸಭೆ ನಡೆಸಿ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೂ ನಿರ್ದೇಶನ ನೀಡಿದ್ದಾರೆ. ಆಗ ನಮ್ಮ ಬೇಡಿಕೆಗಿಂತ ಹೆಚ್ಚು ತ್ಯಾಜ್ಯ ಸಂಗ್ರಹವಾದರೆ ಘಟಕದ ಸಾಮರ್ಥ್ಯ ಹೆಚ್ಚಿಸುವ ಉದ್ದೇಶವಿದೆ ಎನ್ನುತ್ತಾರೆ.

ಮುಂಜಾನೆ ಖಾದ್ಯ ತೈಲದ ತ್ಯಾಜ್ಯ ಸಂಗ್ರಹಿಸುವ ನಗರಸಭೆ ಸಿಬ್ಬಂದಿ ಅದನ್ನು ಎಂಜಿನಿಯರಿಂಗ್ ಕಾಲೇಜಿಗೆ ತಂದು ಕೊಡುತ್ತಾರೆ. ಅಲ್ಲಿ ಅದನ್ನು ಸಂಸ್ಕರಿಸಲಾಗುತ್ತಿದೆ. 100 ಲೀಟರ್ ತ್ಯಾಜ್ಯ ಸಂಸ್ಕರಣೆಗೆ ಅಷ್ಟೇ ಪ್ರಮಾಣದ ನೀರು ಬಳಕೆಯಾಗುತ್ತದೆ. ಈ ವೇಳೆ 20ರಿಂದ 30 ಲೀಟರ್‌ನಷ್ಟು ಫ್ಲೋರ್ ಕ್ಲೀನರ್ ಕೂಡ ಲಭ್ಯವಾಗುತ್ತದೆ. ಅದು ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳ ಸ್ವಚ್ಛಗೊಳಿಸಲು ಬಳಕೆಯಾಗುತ್ತಿದೆ.

ಬಾಗಲಕೋಟೆಯಲ್ಲಿ ಅಡುಗೆಎಣ್ಣೆತ್ಯಾಜ್ಯಬಳಸಿ ಸಿದ್ಧಪಡಿಸಿದ ಬಯೊ ಡೀಸೆಲ್

ಜಿಲ್ಲಾಧಿಕಾರಿ ಕಾರಿಗೂ ಬಯೊ ಡೀಸೆಲ್!

ಖಾದ್ಯ ತೈಲದ ತ್ಯಾಜ್ಯದಿಂದ ಉತ್ಪಾದಿಸಿದ ಬಯೊ ಡೀಸೆಲ್‌ ಬಳಸುವಂತೆ ಸಾರ್ವಜನಿಕರನ್ನು ಉತ್ತೇಜಿಸಲು ಹಿಂದಿನ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಸ್ವತಃ ತಮ್ಮ ಕಾರಿಗೆ ಬಳಕೆ ಮಾಡಲು ಆರಂಭಿಸಿದ್ದರು. ನಗರಸಭೆಯ ಕಸ ಸಾಗಿಸುವ ವಾಹನಕ್ಕೂ ಪ್ರಾಯೋಗಿಕ ಬಳಕೆ ನಡೆದಿದೆ. ಕೆಲವು ಆಟೊ ಹಾಗೂ ಟಂಟಂ ಚಾಲಕರು ಹಸಿರು ಇಂಧನದ ಕಾಯಂ ಗ್ರಾಹಕರಾಗಿದ್ದಾರೆ.

‘ಬಂಕ್‌ಗಳಲ್ಲಿ ಡೀಸೆಲ್ ದರ ಲೀಟರ್‌ಗೆ ₹75 ಇದೆ. ಇಲ್ಲಿ 10 ರೂಪಾಯಿ ಕಡಿಮೆ ಆಗುತ್ತದೆ. ನನ್ನ ಟಂಟಂ ವಾಹನಕ್ಕೆ ಬಯೊ ಡೀಸೆಲ್ ಬಳಕೆ ಆರಂಭಿಸಿರುವೆ.ಲೀಟರ್‌ಗೆ 24 ಕಿ.ಮೀ ಮೈಲೇಜ್ ಕೊಟ್ಟಿದೆ. ಹೊಗೆಯೇ ಬರುವುದಿಲ್ಲ’ ಎಂದು ನವನಗರದ ಚಾಲಕ ಪರಶುರಾಮ ಕೊಲ್ಹಾರ ಅಚ್ಚರಿ ವ್ಯಕ್ತಪಡಿಸಿದರು.

ಬಾಗಲಕೋಟೆ ಮಾದರಿ ಅಳವಡಿಕೆಗೆ ಸಲಹೆ..

ಬಾಗಲಕೋಟೆಯ ಈ ಮಾದರಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವಂತೆ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಜೊತೆಗೆ ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ಹೋಟೆಲ್‌ಗಳಲ್ಲಿ ಕರಿದ ಎಣ್ಣೆ ಪುನರ್‌ ಬಳಕೆ ಮಾಡುವುದನ್ನು ನಿಷೇಧಿಸಲು ಶಿಫಾರಸು ಮಾಡಿದೆ. ಮಂಡಳಿಯ ಆಶಯಕ್ಕೆ ಸ್ಪಂದಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ತುಮಕೂರು ಮಹಾನಗರ ಪಾಲಿಕೆ ಖಾದ್ಯ ತೈಲದಿಂದ ಬಯೊಡೀಸೆಲ್ ತಯಾರಿಕೆಗೆ ಮುಂದಾಗಿವೆ. ಎರಡೂ ಸಂಸ್ಥೆಗಳ ಅಧಿಕಾರಿಗಳು ಇಲ್ಲಿಗೆ ಬಂದು ವೀಕ್ಷಣೆ ಮಾಡಿ ಮಾಹಿತಿ ಪಡೆದು ತೆರಳಿದ್ದಾರೆ. ಇದೆಲ್ಲಾ ನಮ್ಮ ನಗರಸಭೆಗೆ ಗರಿಮೂಡಿಸುವ ಸಂಗತಿ. ನಮ್ಮ ಸಿಬ್ಬಂದಿಯ ಪರಿಶ್ರಮವೂ ಮಹತ್ವದ್ದು ಎಂದು ಆಯುಕ್ತ ಮುನಿಸ್ವಾಮಪ್ಪ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT