ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಷ್ಟು ತುಟ್ಟಿಯಾಗಲಿದೆ ಆಸ್ತಿ ಖರೀದಿ

ಮಾರ್ಗಸೂಚಿ ದರ ಶೇ25 ರಿಂದ ಶೇ80ರವರೆಗೆ ಏರಿಕೆ ಸಾಧ್ಯತೆ
Published 13 ಸೆಪ್ಟೆಂಬರ್ 2023, 4:36 IST
Last Updated 13 ಸೆಪ್ಟೆಂಬರ್ 2023, 4:36 IST
ಅಕ್ಷರ ಗಾತ್ರ

ಬಾಗಲಕೋಟೆ: ಅಗತ್ಯ ವಸ್ತುಗಳ ಒಂದೊಂದೇ ಬೆಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭೂಮಿಯ ಬೆಲೆಯೂ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಿವೇಶನ, ಜಮೀನು ಮಾರ್ಗಸೂಚಿ ದರವನ್ನು ಶೇ25 ರಿಂದ ಶೇ80ರವರೆಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಅವುಗಳ ಬೆಲೆ ಹೆಚ್ಚಲಿವೆ.

ಬಾಗಲಕೋಟೆಯ ಜಿಲ್ಲೆಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಆಸ್ತಿ ಮಾರ್ಗಸೂಚಿ ದರ ಹೆಚ್ಚಳ ಕುರಿತು ಈಗಾಗಲೇ ಪ್ರಕಟಣೆ ನೀಡಿ, ಆಕ್ಷೇಪಣೆಗಳನ್ನು ಆಹ್ವಾನಿಸಿದ್ದರು. ಯಾವುದೇ ಆಕ್ಷೇಪಣೆಗಳ ಸಲ್ಲಿಕೆಯಾಗಿಲ್ಲ. ರಾಜ್ಯಮಟ್ಟದಲ್ಲಿ ಕೆಲವು ಕಡೆ ಆಗಿದ್ದರೆ, ಸರ್ಕಾರ ಮಟ್ಟದಲ್ಲಿ ಸಮಾಲೋಚನೆ ನಡೆಸಿ, ಮಾರ್ಗಸೂಚಿ ದರ ಹೆಚ್ಚಳಕ್ಕೆ ಅಂತಿಮ ಮುದ್ರೆ ಒತ್ತಲಿದೆ.

ನವನಗರ, ಗದ್ದನಕೇರಿ, ಸಿಕ್ಕೇರಿ, ಸೀಮಿಕೇರಿ ಸೇರಿದಂತೆ ನಗರಕ್ಕೆ ಹೊಂದಿಕೊಂಡಿರುವ ನಿವೇಶನಗಳ ಮಾರ್ಗಸೂಚಿ ದರದಲ್ಲಿ ಶೇ 30 ರಿಂದ ಶೇ80ರವರೆಗೆ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಲ್ಲೂಕು ಕೇಂದ್ರ, ಪಟ್ಟಣ ಪಂಚಾಯಿತಿಯಲ್ಲಿಯೂ ಮಾರ್ಗಸೂಚಿ ದರ ಹೆಚ್ಚೇ ಇದೆ. ಗ್ರಾಮೀಣ ಪ್ರದೇಶದಲ್ಲಿ ಇದರ ಪ್ರಮಾಣ ಶೇ25 ರಿಂದ ಶೇ40ರ ಆಸು ಪಾಸಿನಲ್ಲಿರಬಹುದು ಎಂದು ಅಂದಾಜಿಸಲಾಗಿದೆ.

ಉದಾಹರಣೆಗೆ ಗದ್ದನಕೇರಿ ವ್ಯಾಪ್ತಿಯ ನಿವೇಶಣಕ್ಕೆ ಮಾರ್ಗಸೂಚಿ ದರ ಪ್ರತಿ ಚ.ಮೀ.ಗೆ ಈ ಹಿಂದೆ ₹2,000 ದರವಿದ್ದರೆ, ₹2.16 ಲಕ್ಷ ಅದರ ಮೌಲ್ಯವಾಗುತ್ತಿತ್ತು. ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ಸೆಸ್‌ ಇತರೆ ಸೇರಿ ₹14,500 ಪಾವತಿಸಬೇಕಿತ್ತು. ಈಗ ಮಾರ್ಗಸೂಚಿ ಬೆಲೆಯಲ್ಲಿ ಶೇ25ರಷ್ಟು ಹೆಚ್ಚಳವಾದರೆ, ನಿವೇಶನದ ಮಾರುಕಟ್ಟೆ ದರ ₹2.70ಲಕ್ಕೆ ಹೆಚ್ಚಾಗಲಿದೆ. ಜೊತೆಗೆ ನೋಂದಣಿಯ ಎಲ್ಲ ಶುಲ್ಕಗಳು ಸೇರಿ ₹17 ಸಾವಿರ ಪಾವತಿಸಬೇಕಾಗುತ್ತದೆ.

ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಮಾರಾಟ ದರಕ್ಕೂ, ಸರ್ಕಾರ ನಿಗದಿ ಪಡಿಸಿರುವ ಮಾರ್ಗಸೂಚಿ ದರಕ್ಕೂ ಕೆಲವು ಪ್ರದೇಶಗಳಲ್ಲಿ ಬಹಳ ವ್ಯತ್ಯಾಸವಿದೆ. ಇದರಿಂದಾಗಿ ನಿವೇಶನ, ಜಮೀನು ಖರೀದಿ ವ್ಯವಹಾರದಲ್ಲಿ ಕಪ್ಪು ಹಣದ ಚಲಾವಣೆ ಜಾಸ್ತಿಯಾಗಿದೆ. ಮಾರ್ಗಸೂಚಿ ದರ ಹೆಚ್ಚಿಸುವ ಮೂಲಕ ಅದಕ್ಕೂ ನಿಯಂತ್ರಣ ಹಾಕಲು ಸರ್ಕಾರ ಮುಂದಾಗಿದೆ.

ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುತ್ತಿತ್ತು. 2019ರಿಂದ ಕೋವಿಡ್‌ ಕಾರಣದಿಂದಾಗಿ ಶುಲ್ಕು ಪರಿಷ್ಕರಣೆ ಆಗಿರಲಿಲ್ಲ. ಜೊತೆಗೆ ಕಳೆಗುಂದಿದ್ದ ರಿಯಲ್‌ ಎಸ್ಟೇಟ್‌ಗೆ ಉತ್ತೇಜನ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು 2020–21ರಲ್ಲಿ ಮೊದಲ ಬಾರಿಗೆ ಶೇ 10ರಷ್ಟು ಮಾರ್ಗಸೂಚಿ ದರವನ್ನು ಕಡಿಮೆ ಮಾಡಲಾಗಿತ್ತು.

ಮಾರ್ಗಸೂಚಿ ಪರಿಷ್ಕರಣೆಯಿಂದ ಸರ್ಕಾರದ ಆದಾಯ ಗಳಿಕೆಯಲ್ಲಿ ಹೆಚ್ಚಳವಾಗಬಹುದಾದರೂ, ಕೋವಿಡ್‌ ಸಂದರ್ಭದಲ್ಲಿ ಮಂದಗತಿ ಪಡೆದುಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮವು ಇತ್ತೀಚೆಗಷ್ಟೇ ಚೇತರಿಸಿಕೊಳ್ಳಲಾರಂಭಿಸಿತ್ತು. ಈಗ ದರ ಏರಿಕೆಯಿಂದ ಮತ್ತೇ ವಹಿವಾಟಿನ ಮೇಲೆ ಹೊಡೆತ ಬೀಳಲಿದೆಯಾ ಎಂಬ ಆತಂಕ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರನ್ನು ಕಾಡುತ್ತಿದೆ. 

ಈಗಾಗಲೇ ಆಕ್ಷೇಪಣೆ ಸಲ್ಲಿಕೆ ಅವಧಿ ಪೂರ್ಣಗೊಂಡಿದೆ. ರಾಜ್ಯದಾದ್ಯಂತ ಬಂದಿರುವ ಆಕ್ಷೇಪಣೆಗಳ ಬಗೆಗೆ ಸಭೆ ನಡೆಯಲಿದೆ. ಕೊನೆಗೆ ಸರ್ಕಾರ ದರ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳಲಿದೆ. ಅ.1ರಿಂದ ಹೊಸ ಮಾರ್ಗಸೂಚಿ ದರ ಜಾರಿಯಾಗುವ ಸಾಧ್ಯತೆಗಳಿವೆ.

ರಾಜ್ಯ ಸರ್ಕಾರ ಸೂಚನೆಯಂತೆ ಆಸ್ತಿ ಮಾರ್ಗಸೂಚಿ ದರ ‍ಪರಿಷ್ಕರಣೆ ಮಾಡಲು ಮುಂದಾಗಿದ್ದೇವೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಂದ ಆದೇಶ ಬಂದ ನಂತರವಷ್ಟೇ ಎಷ್ಟು ಹೆಚ್ಚಾಗಲಿದೆ ಎಂದು ಗೊತ್ತಾಗಲಿದೆ

-ಅನಿಲ್‌ ಜಮಖಂಡಿ ಉಪನೋಂದಣಾಧಿಕಾರಿ ನೋಂದಣಿಮತ್ತು ಮುದ್ರಾಂಕ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT