ಬಾಗಲಕೋಟೆ: ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡ ಹೆಸರಿನಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ನಕಲಿ ಜಾತಿ ಪ್ರಮಾಣಪತ್ರ ಕೊಡಲಾಗಿರುವುದರಿಂದ ನೈಜ ಫಲಾನುಭವಿಗಳಿಗೆ
ಅನ್ಯಾಯವಾಗಿದೆ. ಮುಂಬರುವ ಮಹರ್ಷಿ ವಾಲ್ಮೀಕಿ ಜಯಂತಿ (ಅ.17) ಒಳಗಾಗಿ ಆ ಎಲ್ಲ ಪ್ರಮಾಣಪತ್ರಗಳನ್ನು ರದ್ದುಗೊಳಿಸದಿದ್ದರೆ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮುಖಂಡರು ಎಚ್ಚರಿಕೆ ನೀಡಿದರು.
ಉತ್ತರ ಕರ್ನಾಟಕ 13 ಜಿಲ್ಲೆಗಳ ಮುಖಂಡರೊಂದಿಗೆ ಸಭೆಯ ನಂತರ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ರಾಜ್ಯ ಅಧ್ಯಕ್ಷ ಶ್ರವಣಕುಮಾರ ನಾಯಕ, ಪ್ರಧಾನ ಕಾರ್ಯದರ್ಶಿ ಮಾರೆಪ್ಪ ನಾಯಕ ಅವರು, ಕೇಂದ್ರ ಸರ್ಕಾರವು ನಾಯಕ, ವಾಲ್ಮೀಕಿ, ನಾಯ್ಕಡ ಸಮುದಾಯದ ಪರ್ಯಾಯ ಪದಗಳಾದ ತಳವಾರ, ಪರಿವಾರ
ದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ಆದರೆ, ತಳವಾರ ವೃತ್ತಿ ಮಾಡದ ವಿವಿಧ ಸಮಾಜದವರೂ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
‘ನಕಲಿ ಜಾತಿ ಪ್ರಮಾಣಪತ್ರಗಳನ್ನು ನೀಡಬಾರದು ಎಂದು ಮನವಿ ಮಾಡಿಕೊಂಡರೂ ಅಧಿಕಾರಿಗಳು ನೀಡುತ್ತಲೇ ಇದ್ದಾರೆ. ನಿಲ್ಲಿಸದಿದ್ದರೆ, ಮೊದಲ ಹಂತದಲ್ಲಿ ಎಸ್‌ಟಿ ಸಮುದಾಯದ ಶಾಸಕರ ಮನೆ ಎದುರು ಬಾಯಿ ಬಡಿದುಕೊಳ್ಳುವ ಹೋರಾಟ ನಡೆಸಲಾಗುವುದು. ಬಳಿಕ ಎಲ್ಲ ಶಾಸಕರ ಮನೆಗಳ ಎದುರು ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.