ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಧೋಳ | ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ಪಟ್ಟಿ ಪ್ರಕಟಣೆಗೆ ಆಗ್ರಹ
Published 12 ಜೂನ್ 2024, 15:43 IST
Last Updated 12 ಜೂನ್ 2024, 15:43 IST
ಅಕ್ಷರ ಗಾತ್ರ

ಮುಧೋಳ: ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಸರ್ಕಾರ ಶೀಘ್ರ ಮೀಸಲಾತಿ ಪಟ್ಟಿ ಪ್ರಕಟಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರಸಭೆ ಸದಸ್ಯರು ನಗರಸಭೆ ಕಚೇರಿಗೆ ಬುಧವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ನಗರಸಭೆ ಮಾಜಿ ಅಧ್ಯಕ್ಷರಾದ ಗುರುಪಾದ ಕುಳಲಿ, ಮಂಜುನಾಥ ಮಾನೆ, ಮಾಜಿ ಉಪಾಧ್ಯಕ್ಷೆ ಸ್ವಾತಿ ಕುಲಕರ್ಣಿ ಮಾತನಾಡಿ, ‘ನಗರಸಭೆ ಹಿಂದಿನ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡು 13 ತಿಂಗಳು ಸಮೀಪಿಸುತ್ತಿದ್ದರೂ ರಾಜ್ಯ ಸರ್ಕಾರ ನೂತನ ಮೀಸಲಾತಿ ಪ್ರಕ್ರಿಯೆಯಲ್ಲಿ ಆಸಕ್ತಿ ತೋರುತ್ತಿಲ್ಲ. ಇದರಿಂದ ನಗರದ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಮೂಲಸೌಲಭ್ಯ ಒದಗಿಸಲು ತುಂಬಾ ತೊಂದರೆಯಾಗುತ್ತಿದೆ. ಸರ್ಕಾರ ಮೀಸಲಾತಿ ಪ್ರಕ್ರಿಯೆ ಶೀಘ್ರ ಇತ್ಯರ್ಥಪಡಿಸಿ ಹೊಸ ಆಡಳಿತ ಮಂಡಳಿ ರಚನೆಗೆ ಅನುಕೂಲ ಕಲ್ಪಿಸಿಕೊಡಬೇಕು. ನಗರಸಭೆಗೆ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿಯನ್ನು ನೇಮಕ‌ ಮಾಡಿರುವುದರಿಂದ ಸರಿಯಾದ ಸಮಯಕ್ಕೆ ಸದಸ್ಯರ ಸಭೆ ಕರೆದು ವಾರ್ಡ್‌ವಾರು ಸಮಸ್ಯೆಗಳನ್ನು ಆಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಸದಸ್ಯರಿಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಕೇಂದ್ರ‌ ಸರ್ಕಾರದಿಂದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಗೆ ಭಾಜನವಾಗಿದ್ದ ನಗರದಲ್ಲಿ ಇಂದು ಸ್ವಚ್ಛತೆ ಕಣ್ಮರೆಯಾಗಿದೆ. ಸಾರ್ವಜನಿಕರು ಕೇಳುತ್ತಿರುವ ಮೂಲ ಸೌಲಭ್ಯ ಒದಗಿಸಲು ಸಾಧ್ಯವಾಗದಿರುವ ಪದವಿಗೆ ಯಾವುದೇ ಅರ್ಥವಿಲ್ಲ. ಅಧಿಕಾರಿಗಳು ಆಡಿದ್ದೇ ಆಟವಾಗಿದೆ‌. ಸರ್ಕಾರ ಕೂಡಲೇ ಮೀಸಲಾತಿ ಪ್ರಕಟಣೆ ಪ್ರಕ್ರಿಯೆಗೆ ಮುಂದಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪೊಲೀಸರೊಂದಿಗೆ ಸದಸ್ಯರ ಜಟಾಪಟಿ : ಬೆಳಿಗ್ಗೆಯಿಂದ ನಗರಸಭೆ ಎದುರು ಶಾಂತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರು ಏಕಾಏಕಿ ಕಚೇರಿ ಬಾಗಿಲಿಗೆ ಬೀಗ ಹಾಕಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಕಚೇರಿ ಬಾಗಿಲು ಹಾಕದೇ ಪ್ರತಿಭಟನೆ ಮಾಡಿ ಎಂದು ಮನವಿ ಮಾಡಿಕೊಂಡರು. ಪೊಲೀಸರ ಮಾತಿಗೆ ಬಗ್ಗದ ಪ್ರತಿಭಟನಾನಿರತ ಸದಸ್ಯರು ಜಿದ್ದಿಗೆ ಬಿದ್ದವರಂತೆ ನಗರಸಭೆ ಕಚೇರಿಗೆ ಬೀಗ ಹಾಕಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು. ಈ ವೇಳೆ ಪೊಲೀಸರ ಹಾಗೂ ಸದಸ್ಯರ ಮಧ್ಯೆ ಮಾತಿನ ಜಟಾಪಟಿ‌ ನಡೆಯಿತು.

ತಹಶೀಲ್ದಾರ್ ಭೇಟಿ : ನಗರಸಭೆ ಕಚೇರಿಗೆ ಬೀಗ ಹಾಕಿದ ಸುದ್ದಿ ತಿಳಿದು ಸ್ಥಳಕ್ಕೆ‌ ಬಂದ ತಹಶೀಲ್ದಾರ್ ವಿನೋದ ಹತ್ತಳ್ಳಿ ಪ್ರತಿಭಟನಾ ನಿರತ ಸದಸ್ಯರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಸದಸ್ಯರು, ‘ಪೌರಾಯುಕ್ತರು ನಮ್ಮ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಸದಸ್ಯರಿಗೆ ನಗರಸಭೆಯಲ್ಲಿ ಗೌರವ ನೀಡುತ್ತಿಲ್ಲ. ಸಾರ್ವಜನಿಕ‌ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತಿಲ್ಲ. ಎಲ್ಲದಕ್ಕೂ ಮಿಗಿಲಾಗಿ ನೂತನ ಆಡಳಿತ‌ ಮಂಡಳಿ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟರು.

ಈ ವೇಳೆ ಮಾತನಾಡಿದ ತಹಶೀಲ್ದಾರ್, ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಪೌರಾಯುಕ್ತರು ನಿಮ್ಮೊಂದಿಗೆ ಸಮನ್ವಯ ಸಾಧಿಸಿ ಕೆಲಸ ನಿರ್ವಹಿಸುವಂತೆ ಸೂಚಿಸುವುದಾಗಿ ತಿಳಿಸಿ ಪ್ರತಿಭಟನೆ ಹಿಂಪಡೆದು ಕಚೇರಿ ಬೀಗ ತೆರವುಗೊಳಿಸುವಂತೆ ಮನವಿ ಮಾಡಿದರು.

ತಹಶೀಲ್ದಾರ್ ಮನವಿಗೆ ಸ್ಪಂದಿಸದ ಸದಸ್ಯರು ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಜಿಲ್ಲಾಧಿಕಾರಿಯೊಂದಿಗೆ ದೂರವಾಣಿಯಲ್ಲಿ‌ ಮಾತನಾಡಿದ ತಹಶೀಲ್ದಾರ್ ವಿನೋದ ಹತ್ತಳ್ಳಿ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ ನಗರಸಭೆ ಸದಸ್ಯರೊಂದಿಗೆ ಸಭೆ ಸಡೆಸಲಿದ್ದಾರೆ ಎಂದು ತಿಳಿಸಿದರು. ಆಗ ಸದಸ್ಯರೆಲ್ಲರೂ ಪ್ರತಿಭಟನೆ ಹಿಂಪಡೆದರು.

ನಗರಸಭೆ ಸದಸ್ಯರಾದ ಸುರೇಶ ಕಾಂಬಳೆ, ಸುನೀಲ‌ ನಿಂಬಾಳ್ಕರ, ವಿನೋದ ಕಲಾಲ, ಕುಮಾರ ಪಮ್ಮಾರ, ಸುನಿತಾ ಭೋವಿ, ಯಲ್ಲವ್ವ ಅಂಬಿ, ಪಾರ್ವತಿ ಹರಕಿ, ಲೀಲಾಬಾಯಿ ರಜಪೂತ, ಲಕ್ಷ್ಮಿ ದಾಸರ, ಸದಾಶಿವ ಜೋಷಿ, ಗಾಯತ್ರಿ ಸಿಂಗಾಡೆ, ಲಕ್ಷ್ಮಿ ಮಾನೆ, ಶಾಂತಾ ಮಡಿವಾಳರ, ಜಿ.ಜಿ. ಶಿಮಗೋಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಮುಖಂಡರಾದ ಅರುಣ ಕಾರಜೋಳ, ಸಂಗಣ್ಣ ಕಾತರಕಿ, ಬಸವರಾಜ ದಾಸರ, ರಾಜು ಟಂಕಸಾಲಿ, ಸೋನಾಪ್ಪಿ ಕುಲಕರರ್ಣಿ ಸೇರಿದಂತೆ ಇತರರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಮುಧೋಳದಲ್ಲಿ ಬುಧವಾರ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಸರ್ಕಾರ ಶೀಘ್ರ ಮೀಸಲಾತಿ ಪಟ್ಟಿ ಪ್ರಕಟಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರಸಭೆ ಸದಸ್ಯರು ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು
ಮುಧೋಳದಲ್ಲಿ ಬುಧವಾರ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಸರ್ಕಾರ ಶೀಘ್ರ ಮೀಸಲಾತಿ ಪಟ್ಟಿ ಪ್ರಕಟಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರಸಭೆ ಸದಸ್ಯರು ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು

Cut-off box - 23ರವರೆಗೆ ಗಡವು ನಗರಸಭೆ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಜೂನ್ 23ರೊಳಗೆ ಸಭೆ ನಡೆಸಿ ಸಮಸ್ಯೆ ಆಲಿಸಬೇಕು. ಒಂದು ವೇಳೆ ನಿಗದಿತ ದಿನಾಂಕದೊಳಗೆ ಸಭೆ ಕರೆಯದಿದ್ದರೆ ಮತ್ತೆ ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ತಾತ್ಕಾಲಿಕವಾಗಿ‌ ಪ್ರತಿಭಟನೆ ಹಿಂಪಡೆದರು. ಸಾರ್ವಜನಿಕ‌ ಕೆಲಸಗಳಿಗೆ ಅನುವು ಮಾಡಿಕೊಟ್ಟರು. ಬಿಜೆಪಿ‌ ಸದಸ್ಯರಿಗೆ ಸೀಮಿತ ಮೀಸಲಾತಿ ವಿಷಯ ನಗರಸಭೆಯ ಎಲ್ಲ ಸದಸ್ಯರಿಗೂ ಸಂಬಂಧಪಟ್ಟಿದ್ದಾದರೂ‌ ಪ್ರತಿಭಟನೆಯಲ್ಲಿ‌ ಬಿಜೆಪಿ‌ ಸದಸ್ಯರು ಮಾತ್ರ ಪಾಲ್ಗೊಂಡಿದ್ದು ಚರ್ಚೆಗೆ ಗ್ರಾಸವಾಯಿತು. ‘ಕಾಂಗ್ರೆಸ್ ಸದಸ್ಯರಿಗೆ ನಾವು ಪ್ರತಿಭಟನೆಯಲ್ಲಿ‌ ಪಾಲ್ಗೊಳ್ಳುವಂತೆ ಮನವಿ‌ ಮಾಡಿಕೊಂಡಿದ್ದರೂ ಅವರು ಹೋರಾಟಕ್ಕೆ ಬಂದಿಲ್ಲ’ ಎಂದು ಹಾಜರಿದ್ದ ಸದಸ್ಯರು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT