ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತುಗಳ ಹೆಜ್ಜೆಯಲ್ಲಿ ಮಳೆ, ಬೆಳೆಯ ಹೇಳಿಕೆ

ಹಿಂಗಾರಿ ಫಸಲು ಉತ್ತಮ; ಕಾರಹುಣ್ಣಿಮೆ ವಿಶೇಷ ಆಚರಣೆ
Published 3 ಜೂನ್ 2023, 15:41 IST
Last Updated 3 ಜೂನ್ 2023, 15:41 IST
ಅಕ್ಷರ ಗಾತ್ರ

ಜಮಖಂಡಿ: ಬೇಸಿಗೆ ಕಳೆದು ಮುಂಗಾರಿನ ಹೊಸ್ತಿಲಲ್ಲಿ ಆಚರಿಸಲಾಗುವ ಹಬ್ಬ ಕಾರಹುಣ್ಣಿಮೆ. ಮುಂಗಾರು ಆರಂಭದ ಮೊದಲ ಹಬ್ಬವು, ರೈತನ ಮಿತ್ರ ರಾಸುಗಳಿಗೆ ಔಷಧ ಗುಣಗಳುಳ್ಳ ಘೊಟ್ಟಿ ಕುಡಿಸಿ, ಬಣ್ಣ ಬಳಿದು ಅಲಂಕಾರ ಮಾಡಿ, ಓಡಿಸಿ ಖುಷಿ ಪಡುವ ಸಂಭ್ರಮಕ್ಕೆ ಜಮಖಂಡಿ ಸಾಕ್ಷಿಯಾಯಿತು.

ರೈತರೊಂದಿಗೆ ದುಡಿಯುವ ರಾಸುಗಳಿಗೆ ಈ ಹಬ್ಬ ಆಚರಿಸಲಾಗುತ್ತದೆ. ನಮ್ಮ ಭಾಗದಲ್ಲಿ ಈ ಹಬ್ಬ ಇನ್ನಷ್ಟು ಮೆರುಗು ಪಡೆಯುತ್ತದೆ. ಎತ್ತುಗಳಿಗೆ ಅಲಂಕರಿಸಿ ಖುಷಿಪಡುವ ರೈತರಿಗೆ, ಮೃಗಶಿರ ಮಳೆಯು, ಹೊಲಗಳನ್ನು ಉತ್ತು, ಬಿತ್ತಲು ಹಸಿರು ನಿಶಾನೆ ನೀಡುತ್ತದೆ ಎಂದು ರೈತ ಸಂಗಪ್ಪ ದಡ್ಡಿಮನಿ ತಿಳಿಸಿದರು.

ಹುಣ್ಣಿಮೆಯ ಹಿಂದಿನ ದಿನ ಹೊನ್ನುಗ್ಗಿ ಆಚರಿಸಲಾಗುತ್ತದೆ. ರೈತರು ಕುಂಟಿ, ಕೂರಿಗೆ, ಬಾರುಕೋಲು ಮೊದಲಾದ ಕೃಷಿ ಸಾಮಗ್ರಿಗಳನ್ನು ಪೂಜಿಸುತ್ತಾರೆ. ಎತ್ತುಗಳಿಗೆ ಹೊಸ ಹಗ್ಗ, ಮೂಗುದಾರ, ಬಾಸಿಂಗ, ಹಣೆಗೆ ಕಟ್ಟುವ ಹೂವಿನ ಹಾರ, ಕೋಡಿಗೆ ಕಟ್ಟಲು ರಿಬ್ಬನ್‌ ಖರೀದಿಸುತ್ತಾರೆ. ಎತ್ತಿನ ಮೈಮೇಲೆ ಬಣ್ಣ ಬಳಿದು ತಯಾರಿ ಮಾಡಿಕೊಳ್ಳುತ್ತಾರೆ ಎಂದು ಬಸವರಾಜ ಹಂಗರಗಿ ವಿಶ್ಲೇಷಿಸಿದರು.

ಹಬ್ಬದ ದಿನ ಎತ್ತುಗಳನ್ನು ಸಿಂಗರಿಸುತ್ತಾರೆ. ಮನೆಯ ದೇವರ ಕೋಣೆಯಲ್ಲಿ ರತ್ನ ಗಂಬಳಿಯ ಗದ್ದುಗೆ ಮೇಲೆ ಅಕ್ಕಿ ಅಥವಾ ಜೋಳವನ್ನು ಹಿಡಿಯಷ್ಟು ಗುಂಪು ಹಾಕಿ, ಅದರ ಪೂರ್ವಾಭಿಮುಖವಾಗಿ ಜೋಡಿ ಎತ್ತುಗಳನ್ನು ನಿಲ್ಲಿಸುತ್ತಾರೆ. ಮಹಿಳೆಯರು ಎತ್ತುಗಳಿಗೆ ಪೂಜೆ ಸಲ್ಲಿಸಿ, ಹೋಳಿಗೆ, ಜೋಳದ ಕಿಚಡಿ ಮೊದಲಾದ ವಿಶೇಷ ಖಾದ್ಯಗಳನ್ನು ಎಡೆ ಇಡುತ್ತಾರೆ. ಎತ್ತುಗಳ ಮಾಲೀಕರು ಮಹಿಳೆಯರಿಗೆ ಉಡಿ ತುಂಬುತ್ತಾರೆ.

ಸಂಜೆ ಅಗಸಿಯ ಎರಡೂ ಕಡೆ ಉದ್ದನೆಯ ಬೊಂಬುಗಳಿಗೆ ಬೇವಿನ ಎಲೆಗಳನ್ನು ದಾರದಲ್ಲಿ ಕಟ್ಟಿ, ಗ್ರಾಮಸ್ಥರು ಹಿಡಿದು ನಿಂತಿರುತ್ತಾರೆ. ಸಿಂಗರಿಸಿದ ಎತ್ತುಗಳನ್ನು ಓಡಿಸುತ್ತಾರೆ. ಯಾವ ಎತ್ತು ಕೊಂಬಿನ ಮೂಲಕ ಹಗ್ಗವನ್ನು ಹರಿಯುತ್ತದೆಯೋ ಅಥವಾ ಮೊದಲು ಅದನ್ನು ದಾಟುತ್ತದೆಯೋ ಅದನ್ನು ವಿಜಯಶಾಲಿ ಎಂದು ಘೋಷಿಸಲಾಗುತ್ತದೆ. ಯಾವ ಬಣ್ಣದ ಎತ್ತು ಹಗ್ಗವನ್ನು ಹರಿಯುತ್ತದೆಯೋ, ಅದರ ಆಧಾರದ ಮೇಲೆ ಆ ವರ್ಷದ ಮಳೆ, ಬೆಳೆ ನಿರ್ಧರಿಸುತ್ತೆವೆ ಮಲ್ಲೇಶ ಹೇಸಮನಿ, ಮಲ್ಲಿಕಾರ್ಜುನ ಲಿಂಗನೂರ.

ಎತ್ತುಗಳು ಓಡುವಾಗ ಅವುಗಳ ಹೆಜ್ಜೆಗಳೂ ಮಳೆ, ಬೆಳೆಯ ಹೇಳಿಕೆಯಾಗುತ್ತವೆ. ಕಾಲು ಹಿಂದೆ ಇಡೋದು, ಕಾಲು ಸಿಕ್ಕಿಸಿಕೊಳ್ಳುವುದು ಮಾಡಿದರೆ ಮುಂಗಾರು ಮಳೆ ಕೈ ಕೊಡುತ್ತದೆ ಎಂದೂ, ಸರಾಗವಾಗಿ ಓಡಿದರೆ ಮುಂಗಾರು, ಹಿಂಗಾರು ಮಳೆ ಎರಡೂ ಚೆನ್ನಾಗಿ ಆಗುರುತ್ತದೆ ಎಂದು ನಂಬುವ ವಾಡಿಕೆ ಇದೆ. ಇದನ್ನು ಕರಿ ಹರಿಯುವ ಪದ್ಧತಿ ಎಂದೂ ಕರೆಯುತ್ತಾರೆ.

ನಗರದ ಹನುಮಾನ ದೇವಸ್ಥಾನದ ಹತ್ತಿರ ಶನಿವಾರ ಕರಿ ಹರಿಯಲು ಬಿಳಿ, ಹಾಗೂ ಕೆಂದು ಬಣ್ಣದ ಎತ್ತುಗಳಿಗೆ ಮಾತ್ರ ಅವಕಾಶ ನೀಡಲಾಗಿರುತ್ತದೆ. ಯಾವ ಬಣ್ಣದ ಎತ್ತು ಕರಿಹರಿಯುತ್ತೋ ಆ ಬಣ್ಣದ ಬೆಳೆ ಚೆನ್ನಾಗಿ ಬರುತ್ತದೆ ಎನ್ನುವ ನಂಬಿಕೆ ರೈತರದ್ದು. ಈ ಭಾರಿ ಬಿಳಿ ಎತ್ತು ಮೊದಲ ಕರಿ ಹರಿದಿದ್ದಕ್ಕೆ ನಾಡಿನಲ್ಲಿ ಬಿಳಿ ಜೋಳದ ಫಸಲು ಚೆನ್ನಾಗಿ ಬರುತ್ತೆ ಎಂಬುದಕ್ಕೆ ಸಾಕ್ಷಿಯಾಯ್ತು. ಗ್ರಾಮೀಣ ಭಾಗದಲ್ಲಿ ಭಾನುವಾರ ಈ ಹಬ್ಬವನ್ನು ಆಚರಣೆ ಮಾಡಲಿದ್ದು ರೈತರು ಕಾರಹುಣ್ಣಿಮೆಯ ತಯಾರಿ ಮಾಡಿಕೊಂಡಿದ್ದಾರೆ ಎಂದು ಕೆ.ಕೆ.ತುಪ್ಪದ, ಮಹಾದೇವ ತೆಲಬಕ್ಕನವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT