ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲಸಂಗಮ ಶ್ರೀಗೆ ಸಚಿವ ನಿರಾಣಿ ಸವಾಲು

ಮೀಸಲಾತಿಗೆ ಅಡ್ಡಿ: ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ
Last Updated 24 ಡಿಸೆಂಬರ್ 2022, 9:52 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬಾರದು ಎಂದು ಎಲ್ಲಿಯಾದ್ರು ನಾನು ಹೇಳಿದ್ದನ್ನು ಸಾಬೀತು ಪಡಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಕೂಡಲಸಂಗಮದ ಬಸವಜಯ ಮೃತ್ಯಂಜಯ ಸ್ವಾಮೀಜಿಗೆ ಸವಾಲು ಹಾಕಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದ ಸಚಿವರಿಂದ ಮೀಸಲಾತಿ ಘೋಷಣೆ ತಪ್ಪಿತು ಎಂದು ಸ್ವಾಮೀಜಿ ಪದೇ, ಪದೇ ಹೇಳುತ್ತಾರೆ. ಅದನ್ನು ಸಾಬೀತು ಪಡಿಸಲು ಸಾಧ್ಯವಾಗದಿದ್ದರೆ, ಅವರು ಪೀಠ ಬಿಟ್ಟು, ರಾಜಕಾರಣಕ್ಕೆ ಬರಲಿ’ ಎಂದು ಆಗ್ರಹಿಸಿದರು.

‘ಸ್ವಾಮೀಜಿ ಬಗ್ಗೆ ಅಪಾರ ಗೌರವಿದೆ. ರಾಜ್ಯದಲ್ಲಿ 80 ಲಕ್ಷ ಸಮಾಜದ ಜನರಿರುವುದರಿಂದ ಎರಡು ಪೀಠ ಮಾಡಿದೆವು. ಮೂರನೇ ಪೀಠವನ್ನೂ ನಾನೇ ಮಾಡಿದ್ದೇನೆ. ಇನ್ನೂ ಎರಡು ಪೀಠ ಮಾಡುತ್ತೇನೆ. ಪೀಠ ಹುಟ್ಟುವ ಮೊದಲೇ ಮಂತ್ರಿಯಾಗಿದ್ದೆ’ ತಿರುಗೇಟು ನೀಡಿದರು.

‘ಅವ್ರನ್ನ, ಇವ್ರನ್ನ ಸೋಲಿಸುತ್ತೇವೆ ಎಂದು ಹೇಳುತ್ತೀರಿ. ನಿಮ್ಮ ಪೀಠ ಇರುವಲ್ಲಿಯೇ ನಿಮ್ಮ ಸಮಾಜದ ಶಾಸಕನನ್ನು ಗೆಲ್ಲಿಸಲು ಆಗಲಿಲ್ಲ. ಗೆಲ್ಲಿಸೋದು, ಸೋಲಿಸೋದು ಮತದಾರರ ಕೈಯಲ್ಲಿದೆ. ಬಾಯಿಚಪಲಕ್ಕೆ ಯಾರದೋ ಮಾತು ಕೇಳಿ ಮಾತನಾಡಬೇಡಿ. ದೊಡ್ಡ ಸ್ಥಾನದಲ್ಲಿದ್ದೀರಿ. ಮನಸ್ಸಿಗೆ ಬಂದಂತೆ ಮಾತನಾಡಿದರೆ ಇನ್ನೊಬ್ಬರಿಗೆ ನೋವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಡಿ.29 ರಂದು ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಸಿಗಲಿದೆ’ ಎಂದು ಹೇಳಿದರು.

‘ಟಿಕೆಟ್‌ಗಾಗಿ ಹಲವರ ಮನೆ ಬಾಗಿಲಿಗೆ ಹೋಗಿದ್ದೇನೆ. ಆಗ ಯತ್ನಾಳ ಅವರ ಮನೆ ಬಾಗಿಲಿಗೂ ಹೋಗಿರಬಹುದು. ಆದರೆ, ಅವರು ಮಂತ್ರಿಯಾಗೋದಕ್ಕೆ ಯಾರು, ಯಾರು ಮನೆ ಬಾಗಿಲಿಗೆ ಹೋಗಿದ್ದಾರೆ. ಯಾರ ಕಾಲಿಗೆ ಬಿದ್ದಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ’ ಅವರನ್ನು ಟೀಕಿಸಿದರು.

‘ಕಳೆದ ವಾರ ದೆಹಲಿಗೆ ಹೋದಾಗ ಸಚಿವೆ ಶೋಭಾ ಕರಂದ್ಲಾಜೆ ಕಾಲು ಬಿದ್ದು ಬಂದಿದ್ದಾರೆ‌‌. ನನ್ನ ಹಾಗೂ ಯಡಿಯೂರಪ್ಪ ಅವರನ್ನು ಒಂದು ಮಾಡಿ ಎಂದು ಬೇಡಿಕೊಂಡಿದ್ದಾರೆ’ ಎಂದರು.

‘ನಾವು ಮನಸ್ಸು ಮಾಡಿದರೆ ಸರ್ಕಾರ ತರ್ತಿವಿ. ಸರ್ಕಾರ ಕೆಡುವುತ್ತೇವೆ ಎನ್ನುತ್ತೀರಿ. ಬಾಯಿ ಚಪಲಕ್ಕೆ ಉದ್ಧಟತನದ ಮಾತನ್ನಾಡುತ್ತೀರಿ. ನೀವು ಏನು ಮಾತನಾಡುತ್ತೀರಿ ಎಂಬುದನ್ನು ಜನರು ಗಮನಿಸುತ್ತಾರೆ. ನಾನು ರಾಜಕೀಯ ಆರಂಭಿಸಿದ್ದು ಬಿಜೆಪಿಯಲ್ಲೇ, ಸಾಯೋದೂ ಇಲ್ಲಿಯೇ. ನಿಮ್ಮ ಹಾಗೆ ಬಿಜೆಪಿಯಲ್ಲಿದ್ದಾಗ ಹಿಂದುತ್ವದ ಬಣ್ಣ ಹಚ್ಚಿಕೊಳ್ಳೋದು, ಜೆಡಿಎಸ್‌ಗೆ ಹೋದಾಗ ಟೋಪಿ ಹಾಕಿಕೊಂಡು ಟಿಪ್ಪು ಹೋಗಳೋದು ಮಾಡುವುದಿಲ್ಲ. ಸಮಯ ಬಂದಂಗ ಛತ್ರಿ ಹಿಡಿಯುವುದು ನನ್ನ ಜಾಯಮಾನವಲ್ಲ’ ಎಂದು ತಿರುಗೇಟು ನೀಡಿದರು.

‘ನನಗೆ ಬಚ್ಚಾ ಎನ್ನುತ್ತಾರೆ. ಅದನ್ನು ಒಪ್ಪಿಕೊಳ್ಳುತ್ತೇನೆ. ಅಂತಹ ಬಚ್ಚಾನೆ ಇಂದು 21 ಕಾರ್ಖಾನೆ ಸ್ಥಾಪಿಸಿ, 72 ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದಾನೆ. ರೈತರ ಹೊಲ, ಮನೆ ಮೇಲೆ ಸಾಲ ಮಾಡಿಲ್ಲ. 25 ವರ್ಷಗಳಲ್ಲಿ ಒಬ್ಬನೇ ಒಬ್ಬ ರೈತ ಕಬ್ಬಿನ ಹಣ ನೀಡಿಲ್ಲ ಎಂದು ದೂರಿಲ್ಲ. ಕೈಗಾರಿಕೆ ಸಚಿವನಾಗಿ ಮೂರು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದೇನೆ. ಇಡೀ ಜಗತ್ತು ಕರ್ನಾಟಕದ ಕಡೆ ತಿರುವಂತೆ ಮಾಡಿದ್ದು ಈ ಬಚ್ಚಾ’ ಎಂದು ವಾಗ್ದಾಳಿ ನಡೆಸಿದರು.

‘ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ 2ಎ ಮೀಸಲಾತಿಗಾಗಿ ಬಾರಕೋಲ್‌ ಚಳವಳಿ ಮಾಡುತ್ತೇನೆ ಎನ್ನುತ್ತಾರೆ. ಅವರ ತಂದೆ ಸಚಿವ, ಸಮಾಜದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು. ಆಗ ಯಾಕೆ ಮಾಡಲಿಲ್ಲ. ಆವಾಗ ಬಾರಕೋಲ್ ಎಲ್ಲಿ ಹೋಗಿತ್ತು’ ಎಂದು ಪ್ರಶ್ನಿಸಿದರು.

ಯತ್ನಾಳ ಅವರನ್ನು ಮೂರನೇ ಮಹಡಿಯಲ್ಲಿ ಕೂಡಿಸ್ತೇವೆ ಎನ್ನುತ್ತೀಯಾ? ಹಾಗದರೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಏನು ಹೇಳುತ್ತೀಯಾ? ಅಷ್ಟು ಶಕ್ತಿವಂತನಾಗಿದ್ರೆ ನೀನ್ಯಾಕೆ ಮನೇಲಿ ಕೂಡುತ್ತಿದ್ದೆ. ಜನರು ಸೂಕ್ಷ್ಮವಾಗಿ ಗಮನಸಿಸುತ್ತಿರುತ್ತಾರೆ ಎಂಬ ಅರಿವಿರಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT