ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ: ಖುಷಿಗಾಗಿ ಕೃಷಿ ಮಾಡಿ ಯಶ ಕಂಡ ನಿವೃತ್ತ ತಹಶೀಲ್ದಾರ ಬಸಪ್ಪ

20 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಕೈಗೊಂಡ ನಿವೃತ್ತ ತಹಶೀಲ್ದಾರ್
Published : 23 ಆಗಸ್ಟ್ 2024, 4:26 IST
Last Updated : 23 ಆಗಸ್ಟ್ 2024, 4:26 IST
ಫಾಲೋ ಮಾಡಿ
Comments

ಜಮಖಂಡಿ: ಕಂದಾಯ ಇಲಾಖೆಯಲ್ಲಿ 35 ವರ್ಷ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಬಸಪ್ಪ ಲಕ್ಷ್ಮಪ್ಪ ಗೋಠೆ ಅವರು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬಂತೆ ಖುಷಿಗಾಗಿ ಕೃಷಿ ಮಾಡಿ ಕೃಷಿ ಕಾಯಕದಲ್ಲಿ ತೊಡಗಿಕೊಂಡು ಯಶಸ್ಸು ಕಂಡುಕೊಂಡಿದ್ದಾರೆ.

ತಾಲ್ಲೂಕಿನ ಹುಲ್ಯಾಳ ಗ್ರಾಮದ ಬರಡು ಭೂಮಿಯನ್ನು ನಿವೃತ್ತಿಯ ನಂತರ ಕಳೆದ 10 ವರ್ಷದಲ್ಲಿ 20 ಎಕರೆ ಜಮೀನಿನಲ್ಲಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ನೀರಿಲ್ಲದೆ ಪರದಾಡುತ್ತಿರುವ  ಜಮೀನನ್ನು ಶೇ 100ರಷ್ಟು ನೀರಾವರಿಗೊಳಪಡಿಸಿ ಸುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.

ಜಮೀನಿನ ನಡುವೆ ಹಾದು ಹೋಗಿರುವ ಹಳ್ಳಕ್ಕೆ ಅಡ್ಡಲಾಗಿ ಸರ್ಕಾರದ ಸಹಾಯದಿಂದ ಚೆಕ್ ಡ್ಯಾಮ್‌ ನಿರ್ಮಾಣ ಮಾಡಿಕೊಂಡು ನೀರು ನಿಲ್ಲುವಂತೆ ಮಾಡಿದ್ದಾರೆ. ಇದರಿಂದ ಅಂತರ್ಜಲ ಹೆಚ್ಚಾಗಿ ತಮ್ಮ ಜಮೀನಿನಲ್ಲಿರುವ ಐದು ಕೊಳವೆ ಬಾವಿಗಳಿಗೆ ನೀರು ಹೆಚ್ಚಾಗಿದೆ. ಕೊಳವೆ ಬಾವಿಯ ನೀರನ್ನು ಸಂಗ್ರಹಿಸಲು ಎರಡು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಂಡು ಸಂಗ್ರಹವಾದ ನೀರನ್ನು ಬೆಳೆಗಳಿಗೆ ಬಿಡುತ್ತಾರೆ.

20 ಎಕರೆ ಜಮೀನಿನಲ್ಲಿ ಆರು ಎಕರೆ ಕಬ್ಬು, ನಾಲ್ಕು ಎಕರೆ ಸೋಯಾಬಿನ್, ನಾಲ್ಕು ಎಕರೆ ಉದ್ದು, ಎರಡು ಎಕರೆ ಸೂರ್ಯಕಾಂತಿ, ಒಂದು ಎಕರೆ ಹೆಸರು, 2.5 ಎಕರೆ ತಾಳೆ ಗಿಡ, ಬದುವಿಗೆ 70 ಟೆಂಗಿನ ಮರ, 60 ಸಾಗವಾನಿ ಮರ, ಬಾಳೆಗಿಡ, ಲಿಂಬು, ಸೀತಾಫಲ, ಪಪ್ಪಾಯಿ, ಬಿದಿರು, ಚಿಕ್ಕು ಸೇರಿದಂತೆ ವಿವಿಧ ಮಿಶ್ರ ಬೆಳೆಗಳನ್ನು ಬೆಳೆದು ವಾರ್ಷಿಕ ₹20 ಲಕ್ಷಕ್ಕೂ ಅಧಿಕ ಲಾಭ ಪಡೆಯುತ್ತಿದ್ದಾರೆ.

ಕೃಷಿ ಜೊತೆಗೆ 10 ಎಮ್ಮೆ, ಎರಡು ಆಕಳು, ಎರಡು ಹೋರಿ, 16 ಆಡುಗಳನ್ನು ಸಾಕಾಣಿಕೆ ಮಾಡಿ ಹೈನುಗಾರಿಕೆಯಲ್ಲೂ ತೊಡಗಿಕೊಂಡಿದ್ದಾರೆ. ಇವುಗಳ ಮೇವು ಕಟಾವಿಗೆ ಕಟಾವು ಯಂತ್ರ, ಕಾಳು ಒಡೆಯಲು ಚಿಕ್ಕ ಗಿರಣಿ, ಒಂದು ಟ್ರ್ಯಾಕ್ಟರ್, ಸಣ್ಣ ವಿಎಸ್ ಟಿ ಟ್ರ್ಯಾಕ್ಟರ್ ನೆರವಿನಿಂದ ಕೃಷಿ ಕೆಲಸವನ್ನು ಮಾಡುತ್ತಿದ್ದಾರೆ.

ಬೆಳೆಗಳಿಗೆ ಜೀವಾಮೃತ, ಎರೆಹುಳು ಗೊಬ್ಬರ ಬಳಸುತ್ತಾರೆ. ಅದಕ್ಕಾಗಿ ಜಿವಾಮೃತ ಘಟಕ, ಎರೆಹುಳು ಗೊಬ್ಬರ ಘಟಕ ಸ್ಥಾಪಿಸಿಕೊಂಡಿದ್ದಾರೆ. ಬಯೋಗ್ಯಾಸ ಮೂಲಕ ಮನೆಯ ಅಡುಗೆ ಮಾಡಿಕೊಳ್ಳುತ್ತಿದ್ದಾರೆ.

ಸಾವಿರ ಅಡಿ ದೂರದಲ್ಲಿ ಹಾದು ಹೋಗಿರುವ ಕಾಲುವೆಯಿಂದ ವಿದ್ಯುತ್, ಮೋಟರ್ ಇಲ್ಲದೆ ಕೃಷಿ ಹೊಂಡಗಳಿಗೆ ನೀರು ಬರುತ್ತದೆ. ನೀರು ಹೆಚ್ಚಾದಾಗ ಹಾಗೂ ಮಳೆಗಾಲದಲ್ಲಿ ಕೃಷಿ ಹೊಂಡದಿಂದ ನೇರವಾಗಿ ಕೊಳವೆ ಬಾವಿಯಲ್ಲಿ ನೀರು ಬಿಟ್ಟು ಕೊಳವೆ ಬಾವಿಗಳನ್ನು ರಿಚಾರ್ಜ್‌ ಮಾಡುತ್ತಿದ್ದಾರೆ. ಜಮೀನಿನ ಪ್ರತಿಯೊಂದು ಕಡೆಗೂ ಪೈಪ್‌ಲೈನ್‌ ಮಾಡಿ ಮಾನವ ಕೆಲಸ ಕಡಿಮೆಯಾಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಕೃಷಿಯನ್ನು ಆಸಕ್ತಿಯಿಂದ ಮಾಡಿದರೆ ಒಳ್ಳೆಯ ಲಾಭ ಇದೆ. ಜಮೀನಿನಲ್ಲಿ ಬೆಳೆದ ಕಸಕಡ್ಡಿ, ಕಬ್ಬಿನ ರವದಿ ಸೇರಿದಂತೆ ಯಾವುದನ್ನು ಸುಡಬಾರದು. ಎಲ್ಲವನ್ನು ಗೊಬ್ಬರವನ್ನಾಗಿ ಪರಿವರ್ತಿಸಬೇಕು. ನಿಧಾನವಾಗಿ ಹೆಚ್ಚು ಸಾವಯವ ಕೃಷಿ ಅಳವಡಿಸಬೇಕು. ಮಿಶ್ರ ಬೆಳೆಗಳನ್ನು ಮಾಡುವುದರಿಂದ ಮಣ್ಣು ಹೆಚ್ಚು ತೇವಾಂಶವಾಗುತ್ತದೆ. ಇದರಿಂದ ಉತ್ತಮ ಇಳುವರಿ ಬರುತ್ತದೆ ಎನ್ನುತ್ತಾರೆ ರೈತ ಬಸಪ್ಪ.

ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ರೈತ ಬಸಪ್ಪ ನಿರ್ಮಿಸಿಕೊಂಡಿರುವ ಕೃಷಿ ಹೊಂಡ
ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ರೈತ ಬಸಪ್ಪ ನಿರ್ಮಿಸಿಕೊಂಡಿರುವ ಕೃಷಿ ಹೊಂಡ
ಬಸಪ್ಪ ಗೋಠೆ ಸಮಗ್ರ ಕೃಷಿ ಮಾಡಿದ್ದಾರೆ. ಅವರು ಮಾಡಿರುವ ಸಮಗ್ರ ಕೃಷಿ ಮಾಹಿತಿಯನ್ನು ಕೃಷಿ ವಿಶ್ವವಿದ್ಯಾಲಯ ಧಾರವಾಡಕ್ಕೆ ಕಳಿಸಿದ್ದೇವೆ
ಸಿದ್ದಪ್ಪ ಪಟ್ಟಿಹಳ್ಳ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT