ಶನಿವಾರ, ಜುಲೈ 2, 2022
27 °C
ಶಾಲೆ ಆರಂಭ: ಎರಡು ವರ್ಷಗಳ ನಂತರ ಮತ್ತೆ ಮಕ್ಕಳ ಕಲರವ

ಶಾಲೆ ಆರಂಭ: ಎರಡು ವರ್ಷಗಳ ನಂತರ ಮತ್ತೆ ಮಕ್ಕಳ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೋವಿಡ್–19 ಸೋಂಕಿನ ಕಾರಣಕ್ಕೆ ಎರಡು ಸುದೀರ್ಘ ವರ್ಷಗಳಿಂದ ಮಕ್ಕಳ ಕಲರವದಿಂದ ದೂರವಿದ್ದ ಪ್ರಾಥಮಿಕ ಶಾಲೆಗಳಲ್ಲಿ ಸೋಮವಾರ ಮತ್ತೆ ಜೀವ ಪಡೆದವು.

ಪೋಷಕರ ಕೈ ಹಿಡಿದು ಶಾಲೆಯ ಅಂಗಳಕ್ಕೆ ಕಾಲಿಟ್ಟ ಮಕ್ಕಳು ಮೊದಲ ದಿನ ಸಂಭ್ರಮಿಸಿದರು. ಆನ್‌ಲೈನ್ ತರಗತಿಯಲ್ಲಿ ಫೋನ್‌ನ ಸ್ಕ್ರೀನ್‌ನಲ್ಲಿ ಮಾತ್ರ ಶಿಕ್ಷಕರು, ಗೆಳೆಯ–ಗೆಳತಿಯರನ್ನು ಕಾಣುತ್ತಿದ್ದ ಮಕ್ಕಳು ಶಾಲೆಗೆ ಬರುತ್ತಲೇ ಪ್ರತ್ಯಕ್ಷವಾಗಿ ಅವರನ್ನು ಕಂಡು ಖುಷಿಪಟ್ಟರು. ಬಂದ ತಕ್ಷಣ ನೀನು ಇದ್ದೀಯ, ನಾನು ಬಂದಿದ್ದೇನೆ ಎನ್ನುತ್ತಾ ಪರಸ್ಪರರನ್ನು ಮಾತಾಡಿಸಿ, ಮೈದಡವಿ ಗೆಳೆತನದ ಬೆಚ್ಚನೆಯ ಅನುಭೂತಿ ಪಡೆದರು. ಇಷ್ಟು ದಿನ ಮನೆಯ ಕಪಾಟು ಸೇರಿದ್ದ ಸಮವಸ್ತ್ರ ಮಕ್ಕಳ ಮೈಗಂಟಿ ಅವರಲ್ಲಿ ಹೆಮ್ಮೆಯ ಭಾವಕ್ಕೆ ತಿದಿಯೊತ್ತಿದ್ದವು.

ಬೆಲ್ಲು ಹೊಡೆಯುತ್ತಿದ್ದಂತೆಯೇ ಸಾಲುಗಟ್ಟಿ ಪ್ರಾರ್ಥನೆ, ರಾಷ್ಟ್ರಗೀತೆ ಹಾಡಿದ ಮಕ್ಕಳಿಗೆ ಶಿಕ್ಷಕರು ಬಿಸ್ಕತ್ತು, ಚಾಕೊಲೇಟ್, ಹೂವು ನೀಡಿ ಔಪಚಾರಿಕವಾಗಿ ಸ್ವಾಗತ ಕೋರಿದರು. ವಿದ್ಯಾಗಮ, ಆನ್‌ಲೈನ್ ತರಗತಿಯ ನಿಯಂತ್ರಿತ ವಾತಾವರಣದಲ್ಲಿ ಮಕ್ಕಳ ಕಂಡಿದ್ದ ಶಿಕ್ಷಕರು ಈಗ ಮತ್ತೆ ಶಾಲಾ ಅಂಗಳ ತುಂಬಿದ್ದು ಕಂಡು ಸಂಭ್ರಮಿಸಿದರು. ಮಕ್ಕಳನ್ನು ಅಕ್ಕರೆಯಿಂದ ಮಾತಾಡಿಸಿ ಅವರಿಗೆ ಕೋವಿಡ್ ಮಾರ್ಗಸೂಚಿ ಪಾಲನೆಯ ಬಗ್ಗೆ ಕಿವಿಮಾತು ಹೇಳಿದರು. ಕೈಗೆ ಸ್ಯಾನಿಟೈಸರ್ ಹಚ್ಚಿ, ಮಾಸ್ಕ್ ಹಾಕಿಕೊಳ್ಳಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದರು.

’ನಮ್ಮಲ್ಲಿ 1ರಿಂದ 5ನೇ ತರಗತಿವರೆಗೆ 135 ಮಕ್ಕಳು ಇದ್ದಾರೆ. ಮೊದಲ ದಿನ 100 ಮಂದಿ ಬಂದಿದ್ದಾರೆ. ಅವರು ಬರುತ್ತಿದ್ದಂತೆಯೇ ಥರ್ಮಲ್ ಸ್ಕಾನರ್ ಬಳಸಿ ಅವರ ದೇಹದ ಉಷ್ಣತೆ ಪರೀಕ್ಷಿಸಿ, ಚಾಕೊಲೆಟ್ ಕೊಟ್ಟೆವು. ಅವರಲ್ಲಿ ಶಾಲೆಗೆ ಬಂದ ಸಂಭ್ರಮ ಎದ್ದು ಕಾಣುತ್ತಿತ್ತು. ನಮಗೂ ಖುಷಿ ಆಗಿದೆ‘ ಎಂದು ಬಾಗಲಕೋಟೆಯ ಹರಿಣಶಿಕಾರಿ ಕಾಲೊನಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ 3ರ ಮುಖ್ಯ ಶಿಕ್ಷಕ ಈರಣ್ಣ ಕಿಚಡಿ ‘ಪ್ರಜಾವಾಣಿ‘ಯೊಂದಿಗೆ ಸಂತಸ ಹಂಚಿಕೊಂಡರು.

ಶೇ 45ರಷ್ಟು ಮಕ್ಕಳು ಹಾಜರಿ..

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿ ಒಟ್ಟು 1900 ಶಾಲೆಗಳು ಇದ್ದು, ಈ ವರ್ಷ 1ರಿಂದ 5ನೇ ತರಗತಿಗೆ ಒಟ್ಟು 1.97 ಲಕ್ಷ ಮಕ್ಕಳು ದಾಖಲಾತಿ ಪಡೆದಿದ್ದಾರೆ. ಅವರಲ್ಲಿ ಮೊದಲ ದಿನ ಶೇ 45ರಷ್ಟು ಮಕ್ಕಳು ಶಾಲೆಗೆ ಬಂದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಶ್ರೀಶೈಲ ಬಿರಾದಾರ ‘ಪ್ರಜಾವಾಣಿ‘ಗೆ ತಿಳಿಸಿದರು.

ಗುಂಪು ಕಲಿಕೆಗೆ ಒತ್ತು: ಸೂಚನೆ...

ಬೀಳಗಿ ತಾಲ್ಲೂಕಿನ ಕೊರ್ತಿ ಪುನರ್ವಸತಿ ಕೇಂದ್ರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಡಿಡಿಪಿಐ, 1 ಹಾಗೂ 5ನೇ ತರಗತಿ ಮಕ್ಕಳ ಕಲಿಕಾ ಮಟ್ಟ ಪರಿಶೀಲಿಸಿದರು.

’ಎರಡು ವರ್ಷಗಳಿಂದ ಔಪಚಾರಿಕ ಕಲಿಕೆ ಇಲ್ಲ. ಬದಲಿಗೆ ಆನ್‌ಲೈನ್‌ ಪಾಠ ಇತ್ತು. ಹೀಗಾಗಿ ಮಕ್ಕಳ ಕಲಿಕಾ ಮಟ್ಟ ಕುಂಠಿತವಾಗಿರುವುದು ಕಂಡುಬಂದಿದೆ. ಅವರನ್ನು ಮತ್ತೆ ಹಳಿಗೆ ತರಲು ಗುಂಪು ಕಲಿಕೆಗೆ ಒತ್ತು ನೀಡುವಂತೆ ಶಿಕ್ಷಕರಿಗೆ ಸೂಚನೆ ನೀಡಿದ್ದೇವೆ‘ ಎಂದು ಶ್ರೀಶೈಲ ಬಿರಾದಾರ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು