ಸೋಮವಾರ, ನವೆಂಬರ್ 30, 2020
20 °C
ಬಂಧು, ಮಿತ್ರರೊಂದಿಗೆ ಜವಾರಿ ಭೋಜನದ ಸವಿ

ಸೀಗಿ ಹುಣ್ಣಿಮೆ: ಚರಗ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆರೂರ: ಮಸಾರಿ ಜಮೀನುಗಳ ಕೃಷಿಕರು ತಮ್ಮ ಮಿತ್ರರು ಹಾಗೂ ಪರಿವಾರದೊಂದಿಗೆ ಹೊಲಗಳಿಗೆ ತೆರಳಿ ಭೂಮಾತೆಗೆ ನಮಿಸಿ, ನೈವೇದ್ಯ ಅರ್ಪಿಸುವ ಮೂಲಕ ಸೀಗಿ ಹುಣ್ಣಿಮೆ ಆಚರಿಸಿದರು.

ಈ ಹಬ್ಬಕ್ಕೆಂದೇ ರೈತಾಪಿ ಕುಟುಂಬಗಳ ಮಹಿಳೆಯರು ಹಿಂದಿನ ರಾತ್ರಿಯೆಲ್ಲಾ ಎದ್ದು ಚರಗಕ್ಕೆ ಬೇಕಾದ ಭಕ್ಷ್ಯ-ಭೋಜನ ತಯಾರಿಸಿದರು.
ಸಜ್ಜಿ, ಜೋಳದ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ, ಚಪಾತಿ, ಕೆನೆ ಮೊಸರು, ವಿವಿಧ ಬಗೆಯ ಚಟ್ನಿಗಳು ಹಾಗೂ ಕಡಬು, ಕರ್ಚಿಕಾಯಿ, ಸಜ್ಜೆಗಡಬು, ಚೌಳಿಕಾಯಿ ಪಲ್ಯ ಮತ್ತು ಮೆಣಸಿನಕಾಯಿ ಪಲ್ಯ ಮುಂತಾದ ಬಗೆ ಬಗೆಯ ಭಕ್ಷ್ಯ, ಭೋಜನವನ್ನು ಭೂತಾಯಿಗೆ ನೈವೇದ್ಯ ತೋರಿಸಿದರು. ಚರಗವನ್ನು ಜಮೀನಿನ ತುಂಬೆಲ್ಲಾ ಬೆಳೆಗಳಿಗೆ ಅರ್ಪಿಸಿ, ಮುತ್ತೈದೆಯರಿಗೆ ಉಡಿ ತುಂಬಿ ಸಂತಸಪಟ್ಟರು.

ರೈತರು ತಮ್ಮ ಬಂಧು, ಮಿತ್ರರೊಂದಿಗೆ ಭೂತಾಯಿಯ ಒಡಲಲ್ಲಿ ಕುಳಿತು ಹಬ್ಬದ ವಿಶಿಷ್ಟ ಬಗೆಯ ಭಕ್ಷ್ಯ, ಭೋಜನಗಳನ್ನು ಸವಿದರು. ‘ಬೆಳೆಯ ಸಮೃದ್ಧಿ ತುಂಬಿದ ಹೊಲದಲ್ಲಿ ಭೂತಾಯಿಗೆ ನಮಿಸಿ, ಬಂಧು ಪರಿವಾರಕ್ಕೆ ಜವಾರಿ ಭೋಜನ ಉಣಿಸುವುದು ನಿಜಕ್ಕೂ ಕೃಷಿಕರಿಗೆ ಸಾರ್ಥಕ ಭಾವ’ ಎನ್ನುತ್ತಾರೆ ಶಿವಪುತ್ರಪ್ಪ ಹುಂಡೇಕಾರ.

ಈ ಬಾರಿ ಅಧಿಕ ಮಳೆಯ ಆರ್ಭಟದಿಂದ ಎರೆ ಹಾಗೂ ಮಸಾರಿ ಜಮೀನುಗಳಲ್ಲಿ ಕಾಲಿಡಲು ಸಹ ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆಗೆ ಇನ್ನೂ ಹಿಂಗಾರು ಬಿತ್ತನೆ ಸಾಧ್ಯವಾಗಿಲ್ಲ. ಈರುಳ್ಳಿ, ಮೆಣಸಿನಕಾಯಿ ಬೆಳೆಗಳಂತೂ ಮಳೆಯಲ್ಲಿ ಕೊಳೆತು ಹೋಗಿವೆ. ಚರಗದ ಹಬ್ಬದ ಸಡಗರದಲ್ಲಿ ಇದ್ದ ರೈತಾಪಿ ಬಂಧು ಮಿತ್ರರು ಅಧಿಕ ಮಳೆಯಿಂದ ಎಲ್ಲೆಡೆ ಭೂತಾಯಿ ಹಸಿರುಟ್ಟ ಸಿಂಗಾರವನ್ನು ಕಣ್ತುಂಬ ಅನುಭವಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.