ಇಳಕಲ್: ನಗರದ ವಿವಿಧ ಖಾಸಗಿ ಆಸ್ಪತ್ರೆಗಳು ಹಾಗೂ ತಾಲ್ಲೂಕಿನ ವಿವಿಧ ಶಾಲೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬಿ ಮತ್ತು ಶೇಖರಗೌಡ ರಾಮತ್ನಾಳ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಲೋಪದೋಷ ಕಂಡಲ್ಲಿ ಕಾರಣ ಕೇಳಿ ನೋಟಿಸ್ ನೀಡಿದರು.
ನಗರದ ಕನ್ನಡ ಕಟ್ಟೆ ಹತ್ತಿರದ ಜೋಡಮಸೀದಿ ಅಂಜುಮನ್ ಅರೇಬಿಕ್ ಶಾಲೆಗೆ ಭೇಟಿ ನೀಡಿದರು. ಭಾನುವಾರ ಹೊರತುಪಡಿಸಿ ಬೇರೆ ದಿನ ರಜೆ ನೀಡಕೂಡದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆದೇಶ ಇದ್ದಾಗಲೂ ಶುಕ್ರವಾರ ರಜೆ ನೀಡಲಾಗಿದೆ. ಇದು ಸರ್ಕಾರದ ಆದೇಶದ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಸಂಸ್ಥೆಯವರಿಗೆ ನೋಟಿಸ್ ನೀಡಬೇಕು ಎಂದು ಬಿಇಒ ಜಾಸ್ಮೀನ್ ಕಿಲ್ಲೇದಾರ ಅವರಿಗೆ ತಿಳಿಸಿದರು.
ನಗರದಲ್ಲಿ ಅನಧಿಕೃತ ಟ್ಯೂಷನ್ ಕ್ಲಾಸ್‌ಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಶಾಲಾ ಅವಧಿಯಲ್ಲಿ ಮಕ್ಕಳು ಟ್ಯೂಷನ್‌ಗೆ ಹೋಗುವುದು ಕಾನೂನು ಬಾಹಿರ. ಇಲ್ಲಿಯ ಕೊರವರ ಓಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಿರುವ 5 ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿಯೇ ಪ್ರಗತಿ ಟ್ಯೂಷನ್ ಕೇಂದ್ರಗಳಲ್ಲಿ ಹಾಜರಿದ್ದಾರೆ. ಈ ಬಗ್ಗೆ ಕಾರಣ ಕೇಳಿ ಮುಖ್ಯಶಿಕ್ಷಕರಿಗೆ, ಸಿಆರ್‌ಸಿ, ಶಿಕ್ಷಣ ಸಂಯೋಜಕರಿಗೆ ನೋಟಿಸ್ ನೀಡಬೇಕು. ಅನಧಿಕೃತ ಟ್ಯೂಷನ್ ಕೇಂದ್ರಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಮಗ್ರ ಮಾಹಿತಿ ನೀಡಿ ಎಂದು ಬಿಇಒಗೆ ಸೂಚಿಸಿದರು.
ಕಂದಗಲ್ಲ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಬಾಲಕನೊಬ್ಬ ಕುರಿ ಕಾಯುತ್ತಿರುವುದು ಕಂಡು ಬಂದಿತು. ಬಾಲಕನ ಹತ್ತಿರ ಹೋಗಿ ಶಾಲೆಗೆ ಹೋಗದಿರುವ ಕುರಿತು ಪ್ರಶ್ನಿಸಿದರು. ಪಾಲಕರ ಮನವೊಲಿಸಿ, ಬಾಲಕನನ್ನು ಶಾಲೆಗೆ ದಾಖಲಿಸಿ, ನಿತ್ಯ ಶಾಲೆಗೆ ಹೋಗುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿಸಿದರು.
ಕಂದಗಲ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಸಭೆ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹಾಗೂ ಬಾಲ್ಯ ವಿವಾಹದ ಬಗ್ಗೆ ಕೇಳಿದಾಗ ಪಿಡಿಒ ವೀರನಗೌಡ ಮರಟಗೇರಿ ಸರಿಯಾದ ಮಾಹಿತಿ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಅವರು ನೋಟಿಸ್ ನೀಡುವಂತೆ ತಾಲ್ಲೂಕು ಪಂಚಾಯ್ತಿ ಇಒ ಮುರುಳೀಧರ ದೇಶಪಾಂಡೆ ಅವರಿಗೆ ಸೂಚಿಸಿದರು.
ನಗರದ ಎಸ್.ಎಸ್. ಕಡಪಟ್ಟಿ ಸ್ಮಾರಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅಕ್ಕಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಠಾರೆ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಭ್ರೂಣದ ಸ್ಕ್ಯಾನಿಂಗ್ ಬಗ್ಗೆ ಕಡತಗಳನ್ನು ಪರಿಶೀಲಿಸಿದರು. ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿಲ್ಲದ ಕಾರಣ ನೋಟಿಸ್ ನೀಡುವಂತೆ ಡಿಎಚ್‌ಒ ಅವರಿಗೆ ಹೇಳಿದರು.
ಬಾಗಲಕೋಟೆಯಂತಹ ಚಿಕ್ಕ ಜಿಲ್ಲೆಯಲ್ಲಿ 163 ಸ್ಕ್ಯಾನಿಂಗ್ ಕೇಂದ್ರಗಳಿವೆ. ಮಹಾಲಿಂಗಪುರ ಘಟನೆಯ ಹಿನ್ನೆಲೆಯಲ್ಲಿ ಈ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ನಿಗಾ ವಹಿಸಬೇಕು ಎಂದು ಡಿಎಚ್‌ಒಗೆ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ್, ಜಿಲ್ಲಾ ಸಂಯೋಜಕ ಅಮರೇಶ ಎಚ್., ತಾಲ್ಲೂಕು ಬಿಸಿಎಂ ಅಧಿಕಾರಿ ಸಂಗಮೇಶ ಗಡೇದ, ಸಿಡಿಪಿಒ ಗಿರಿತಿಮ್ಮಣ್ಣನವರ, ಟಿಎಚ್‌ಒ ಅಂಗಡಿ, ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ಕಟ್ಟಿಮನಿ, ಪಿಎಸ್‌ಐ ಎಸ್.ಆರ್. ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.