ಶನಿವಾರ, ಜೂನ್ 25, 2022
21 °C
ರೈತರ ಬಾಕಿ ಪಾವತಿಸದ ಕಾರಣ

ಸಕ್ಕರೆ ಹರಾಜು ಮಾಡಲು ಮುಂದಾದ ಜಿಲ್ಲಾಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಗಡುವು ಮೀರಿದರೂ ರೈತರ ಬಾಕಿ ಪಾವತಿಸದ ಕಾರಣ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಲ್ಲಿ ದಾಸ್ತಾನು ಇರುವ ಸಕ್ಕರೆ ಹರಾಜು ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಬೀಳಗಿ ತಾಲ್ಲೂಕಿನ ಕುಂದರಗಿಯ ಜೆಮ್ ಶುಗರ್ಸ್, ಮುಧೋಳದ ನಿರಾಣಿ ಶುಗರ್ಸ್, ತೇರದಾಳದ ಸಾವರಿನ್ ಶುಗರ್ಸ್, ಮುಧೋಳ ತಾಲ್ಲೂಕಿನ ಸಮೀರವಾಡಿಯ ಗೋದಾವರಿ ಶುಗರ್ಸ್ ಕಾರ್ಖಾನೆಗಳಲ್ಲಿ ದಾಸ್ತಾನು ಇರುವ ಸಕ್ಕರೆ ಹರಾಜು ಮಾಡಲು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಭಾನುವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.

ಸರ್ಕಾರ ನಿಗದಿಗೊಳಿಸಿದ ಪಾರದರ್ಶಕ ಹಾಗೂ ನ್ಯಾಯಯುತ (ಎಫ್ ಅರ್ಪಿ) ಬೆಲೆ ನೀತಿಯಡಿ ರೈತರು ಕಬ್ಬು ಪೂರೈಸಿದ 15 ದಿನಗಳ ಒಳಗಾಗಿ ಬಾಕಿ ಪಾವತಿಸಬೇಕಿದೆ. ಆದರೆ ಜಿಲ್ಲೆಯ 11 ಸಕ್ಕರೆ ಕಾರ್ಖಾನೆಗಳ ಪೈಕಿ 9 ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದವು.

ಬೆಂಗಳೂರಿನಲ್ಲಿ ಕಬ್ಬಿನ ಬಾಕಿ ಪಾವತಿಗೆ  ರೈತ ಸಂಘದಿಂದ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಜೂನ್ ಮೊದಲ ವಾರದಲ್ಲಿ ರಾಜ್ಯ ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕರ ಆದೇಶದ ಮೇರೆಗೆ ಜಿಲ್ಲಾಡಳಿತ ಬಾಕಿ ಉಳಿಸಿಕೊಂಡಿದ್ದ ಎಲ್ಲ ಕಾರ್ಖಾನೆಗಳಿಗೂ ನೋಟಿಸ್ ನೀಡಿತ್ತು. ಜೂನ್ 30ರ ಒಳಗೆ ಬಾಕಿ ಪಾವತಿಸುವಂತೆ ಸೂಚಿಸಿತ್ತು.

ಜಿಲ್ಲಾಡಳಿತದ ನೋಟಿಸ್ ಗೆ ಸ್ಪಂದಿಸಿದ ಐದು ಕಾರ್ಖಾನೆಗಳು ಸಂಪೂರ್ಣ ಬಾಕಿ ಪಾವತಿಸಿವೆ. ಉಳಿದ ಕಾರ್ಖಾನೆಗಳು ಸ್ಪಂದಿಸದ ಕಾರಣ ಸಕ್ಕರೆ ಹರಾಜು ಹಾಕಿ ರೈತರ ಬಾಕಿ ಹಣ ಪಾವತಿಗೆ ಜಿಲ್ಲಾಡಳಿತ ಈಗ ಮುಂದಾಗಿದೆ.

ಜಿಲ್ಲಾಡಳಿತದ ಪ್ರಕಟಣೆ ಅನ್ವಯ 2018-19 ನೇ ಸಾಲಿನ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಜೆಮ್  ಶುಗರ್ಸ್ ₹ 35.60 ಕೋಟಿ, ಸಾವರಿನ್ ಶುಗರ್ಸ್ ₹20.08 ಕೋಟಿ, ಸಮೀರವಾಡಿ ಶುಗರ್ಸ್ ₹ 115 ಕೋಟಿ,  ನಿರಾಣಿ ಶುಗರ್ಸ್  ₹ 61.49 ಕೋಟಿ ಬಾಕಿ ಉಳಿಸಿಕೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು