ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಕಬ್ಬು: ಸಿಹಿಯಾಗುವುದೇ? ಕಹಿಯಾಗುವುದೇ?

ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳು; ಕಬ್ಬು ಅರೆಯಲು ಸಿದ್ಧತೆ
Published 27 ಅಕ್ಟೋಬರ್ 2023, 7:18 IST
Last Updated 27 ಅಕ್ಟೋಬರ್ 2023, 7:18 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯಲು ಮುಂದಾಗಿವೆ. ಕಳೆದ ವರ್ಷ 1,54,31,399 ಮೆಟ್ರಿಕ್‌ ಟನ್‌ ಅರೆದು, 1,42,200 ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದಿಸಲಾಗಿತ್ತು.

ಈ ವರ್ಷ ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಮಳೆ ಕೊರತೆ ಹಾಗೂ ಉಷ್ಣಾಂಶದ ಹೆಚ್ಚಳದಿಂದ ಇಳುವರಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವು ಹಿಂದಿನ ವರ್ಷದ ಇಳುವರಿ ಆಧಾರದ ಮೇಲೆ ಈ ವರ್ಷದ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಘೋಷಿಸಲಾಗಿದೆ.

ಶೇ10.25ರಷ್ಟು ಸಕ್ಕರೆ ಇಳುವರಿಯ ಪ್ರತಿ ಮೆಟ್ರಿಕ್‌ ಟನ್‌ ಕಬ್ಬಿಗೆ ₹3,150 ದರ ನಿಗದಿ ಮಾಡಲಾಗಿತ್ತು. ನಂತರದ ಶೇ1ರಷ್ಟು ಇಳುವರಿಗೆ ಪ್ರತಿ ಮೆಟ್ರಿಕ್‌ ಟನ್‌ ಕಬ್ಬಿಗೆ ₹307 ನಿಗದಿ ಮಾಡಲಾಗಿದೆ.

ಕಳೆದ ವರ್ಷ ಪ್ರತಿ ಟನ್‌ ಕಬ್ಬಿಗೆ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯು ₹2,900 ಘೋಷಿಸಿತ್ತು. ಉಳಿದ ಕಾರ್ಖಾನೆಗಳು ಅದರ ಆಸು–ಪಾಸಿನಲ್ಲಿದ್ದರೆ, ಕೆಲವು ಇನ್ನೂ ಕಡಿಮೆ ಪಾವತಿ ಮಾಡಿದ್ದವು. ಆದರೆ, ಈ ಬಾರಿ ಇನ್ನೂ ದರ ನಿಗದಿಯಾಗಿಲ್ಲ. ಕಬ್ಬಿನ ಬೆಲೆ ರೈತರಿಗೆ ಸಿಹಿಯಾಗುವುದೇ? ಕಹಿಯಾಗುವುದೇ ನೋಡಬೇಕಿದೆ.

ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳಿವೆ. ಕಳೆದ ವರ್ಷ ಎಲ್ಲ ಕಾರ್ಖಾನೆಗಳು ಕಬ್ಬು ಅರೆದಿದ್ದವು. ಆದರೆ, ಈ ಬಾರಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವುದು ಅನುಮಾನವಾಗಿದೆ.

ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಜಮಖಂಡಿ ಉಪವಿಭಾಗಾಧಿಕಾರಿಯನ್ನೇ ಆಡಳಿತಾಧಿಕಾರಿನ್ನಾಗಿ ನೇಮಕ ಮಾಡಲಾಗಿದೆ. ಕಾರ್ಖಾನೆಯಲ್ಲಿದ್ದ ಸಕ್ಕರೆ ಮಾರಾಟ ಮಾಡಿ ಬಾಕಿ ಉಳಿದಿದ್ದ ರೈತರ ಬಾಕಿ ಬಿಲ್‌ ಪಾವತಿಸಲಾಗಿದೆ.

ಸಕ್ಕರೆ ಕಾರ್ಖಾನೆಯನ್ನು ಲೀಸ್ ಆಧಾರದ ಮೇಲೆ ನೀಡಿ ಆರಂಭಿಸಲು ಉದ್ದೇಶಿಸಲಾಗಿದೆ. ಆದರೆ, ಇದು ಕಾರ್ಯಗತವಾಗುವುದೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಶಿರೂರು ಹತ್ತಿರದ ಮೆಲ್‌ಬ್ರೊ ಸಕ್ಕರೆ ಕಾರ್ಖಾನೆ ಕಳೆದ ವರ್ಷ ಕಾರ್ಯಾರಂಭ ಮಾಡಿತ್ತು. ಈ ಬಾರಿಯೂ ಕಬ್ಬು ನುರಿಸಲಿದ್ದು, ಬೆಲೆ ಘೋಷಣೆಯಾಗಬೇಕಿದೆ.

ದರ ಘೋಷಿಸಲು ಆಗ್ರಹ: ಕಬ್ಬು ಅರೆಯುವುದನ್ನು ಪ್ರಾರಂಭಿಸುವ ಮುನ್ನ ರೈತರು ಹಾಗೂ ಕಾರ್ಖಾನೆಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಬೇಕು. ಪ್ರತಿ ಟನ್‌ ಕಬ್ಬಿಗೆ ಬೆಲೆ ಘೋಷಣೆ ಮಾಡಬೇಕು ಎಂದು ರೈತ ಮುಖಂಡ ಮುತ್ತಪ್ಪ ಕೋಮಾರ ಆಗ್ರಹಿಸಿದ್ದಾರೆ.

ದರ ಘೋಷಿಸದೆ ಕಬ್ಬು ಅರೆಯುವುದಕ್ಕೆ ಆರಂಭಿಸಿದರೆ, ಹೋರಾಟ ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಕುರಿತು ಚರ್ಚಿಸಲು ಅ.29ರಂದು ಸಭೆಯನ್ನೂ ಕರೆಯಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT