ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ವದಂತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಿ

ತಳವಾರರಿಗೆ ಎಸ್‌ಟಿ ಪ್ರಮಾಣಪತ್ರ ನೀಡಿದ್ದರಲ್ಲಿ ತಪ್ಪಿಲ್ಲ
Published 4 ಸೆಪ್ಟೆಂಬರ್ 2024, 14:14 IST
Last Updated 4 ಸೆಪ್ಟೆಂಬರ್ 2024, 14:14 IST
ಅಕ್ಷರ ಗಾತ್ರ

ಬಾಗಲಕೋಟೆ: ‘ತಳವಾರ ಸಮಾಜದವರಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವ ಕುರಿತು ನ್ಯಾಯಾಲಯದ ನಿರ್ದೇಶನವನ್ನು ತಿರುಚಿ ಹೇಳಿ ಗೊಂದಲ ಮೂಡಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಚಿನ್ನಪ್ಪ ಅಂಬಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೈಜ ತಳವಾರರಿಗೆ ದಾಖಲೆ ಪರಿಶೀಲಿಸಿ ಜಾತಿ ಪ್ರಮಾಣಪತ್ರ ನೀಡುವಂತೆ ಸರ್ಕಾರ, ಅಧಿಕಾರಿಗಳಿಗೆ ನಿರ್ದೇಶನ ನೀಡಿದೆಯೇ ಹೊರತು, ತಳವಾರರಿಗೆ ಪ್ರಮಾಣಪತ್ರ ನೀಡಬಾರದು ಎಂದು ಹೇಳಿಲ್ಲ. ಗೊಂದಲ ಮೂಡಿಸುತ್ತಿರುವ ಮಾರಪ್ಪ ನಾಯಕ್‌, ದ್ಯಾಮಣ್ಣ ಗಾಳಿ, ರಾಜು ನಾಯ್ಕರ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕುಲಶಾಸ್ತ್ರ ಅಧ್ಯಯನ ಮಾಡಿದ ಮೇಲೆಯೇ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಕೇಂದ್ರವು ಗೆಜೆಟ್‌ನಲ್ಲಿ ತಳವಾರ, ಪರಿವಾರ ಸಮಾಜಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಂತೆ ಸೂಚಿಸಿದೆ. ರಾಜ್ಯ ಸರ್ಕಾರವೂ ಸ್ಪಷ್ಟವಾಗಿ ಆದೇಶ ನೀಡಿದೆ. ಆದರೂ, ಕೆಲವರು ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

‘ರಾಜ್ಯದ 24 ಜಿಲ್ಲೆಗಳಲ್ಲಿ 2011ರ ಪ್ರಕಾರ ತಳವಾರ ಸಮಾಜಕ್ಕೆ ಸೇರಿದ 8.28 ಲಕ್ಷ ಜನಸಂಖ್ಯೆ ಇತ್ತು. ಈಗ ಅವರ ಸಂಖ್ಯೆ ಹೆಚ್ಚಾಗಿದೆ. ಚಾಮರಾಜನಗರ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಪರಿವಾರ ಸಮಾಜಕ್ಕೆ ಸೇರಿದವರಿದ್ದಾರೆ ಎಂದು ಕುಲಶಾಸ್ತ್ರ ಅಧ್ಯಯನದಲ್ಲಿದೆ. ಆ ಪ್ರಕಾರವೇ ಅಧಿಕಾರಿಗಳು ಪರಿಶೀಲನೆ ನಡೆಸಿ, ಪ್ರಮಾಣಪತ್ರ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಎಲ್ಲ ಪರಿಶೀಲನೆ ನಡೆಸಿ, ಅರ್ಹರಿಗೆ ಪ್ರಮಾಣ ಪತ್ರ ನೀಡಿದ್ದಾರೆ. ನಕಲಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ, ಅನಗತ್ಯವಾಗಿ ಕಿರುಕುಳ ನೀಡುವ ಕೆಲಸ ಆಗಬಾರದು’ ಎಂದರು.

ಬೇಡ, ವಾಲ್ಮೀಕಿ, ನಾಯಕ, ತಳವಾರ ಜಾತಿಯವರು ಸಹೋದರರ ಸಂಬಂಧದಲ್ಲಿ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸುತ್ತಿದ್ದಾರೆ. ಜಾತಿಗಳ ಮಧ್ಯದಲ್ಲಿ ಹುಳಿ ಹಿಂಡುವ, ದ್ವೇಷ ಬಿತ್ತುವ ಕೆಲಸ ಮಾಡಬೇಡಿ ಎಂದು ಮನವಿ ಮಾಡುತ್ತೇವೆ ಎಂದರು.

ಗೌರವ ಅಧ್ಯಕ್ಷ ಪ್ರಭು ಗಸ್ತಿ, ಭೀಮಶಿ ತಳವಾರ, ಬಸವರಾಜ ಸೋಮಾಪುರ, ಉಮೇಶ ಗಸ್ತಿ, ಸಿಂದೂರ ತಳವಾರ, ಭೀಮಶಿ ಹುನ್ನೂರ, ಭೀಮು ದೇಶನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT