ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ; ತಾಯಂದಿರಿಗೆ ಮೊರೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಯೋಗ
ಬಸವರಾಜ ಹವಾಲ್ದಾರ
Published 12 ಫೆಬ್ರುವರಿ 2024, 5:03 IST
Last Updated 12 ಫೆಬ್ರುವರಿ 2024, 5:03 IST
ಅಕ್ಷರ ಗಾತ್ರ

ಬಾಗಲಕೋಟೆ: ಮಾರ್ಚ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಿದ್ಯಾರ್ಥಿಗಳ ತಾಯಂದಿರ ಮೊರೆ ಹೋಗಿದೆ.

ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳ ತಾಯಂದಿರ ಸಭೆ ನಡೆಸಿ, ಅವರಿಗೆ ಎಸ್‌.ಎ–1 ಫಲಿತಾಂಶದ ಆಧಾರದ ಮೇಲೆ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ನೀಡಿದೆ. ಜೊತೆಗೆ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಶಿಕ್ಷಕರು ಏನು ಮಾಡಬೇಕು ಎಂಬ ಸಲಹೆಯನ್ನೂ ಅವರಿಂದ ಪಡೆಯಲಾಗಿದೆ.

ಓದಿಸುವಷ್ಟು ವಿದ್ಯಾರ್ಹತೆಯುಳ್ಳ ತಾಯಂದಿರಿಗೆ, ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಮತ್ತು ಯಾವುದಕ್ಕೆ ಹೆಚ್ಚು ಒತ್ತು ಕೊಡಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಕಲಿಕೆ ಮತ್ತು ಓದುವ ಪ್ರಕ್ರಿಯೆ ಹೇಗಿರಬೇಕು? ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಯಾವ ವಿಷಯದ ಯಾವ ಪಠ್ಯ ಕಡ್ಡಾಯವಾಗಿ ಓದಿಸಬೇಕು ಎಂಬುದನ್ನೂ ತಿಳಿಸಲಾಗಿದೆ.

‘ಮಕ್ಕಳಿಗೆ ಮನೆಯಲ್ಲಿ ಎರಡು ತಿಂಗಳು ಕೆಲಸ ಕಡಿಮೆ ಮಾಡಿಸಿ, ಓದಲು ಹೆಚ್ಚಿನ ಅನುವು ಮಾಡಿಕೊಡಲು ತಿಳಿಸಿದ್ದೇವೆ. ಟಿವಿ, ಮೊಬೈಲ್‌ನ್ನು ದೂರವಿಟ್ಟು ಪೋಷಕರೂ ಕೂಡ ಮಕ್ಕಳೊಂದಿಗೆ ಕೂತು, ಓದಿಸಬೇಕು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಓದುತ್ತಿರುವ ಮಕ್ಕಳನ್ನು ಮದುವೆ, ಜಾತ್ರೆಗಳಿಗೆ ಕರೆದೊಯ್ಯಬೇಡಿ. ಅವರ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಲು ಹೇಳಲಾಗಿದೆ. ಶಿಕ್ಷಕರಿಗೆ ಮಕ್ಕಳ ಓದಿನ ಬಗೆಗೆ ಮಾಹಿತಿ ನೀಡಬೇಕು ಮತ್ತು ಶಿಕ್ಷಕರಿಂದ ಸೂಕ್ತ ಮಾರ್ಗದರ್ಶನ ಪಡೆಯುವಂತೆ ಹೇಳಲಾಗಿದೆ’ ಎಂದರು.

‘ಫಲಿತಾಂಶ ಸುಧಾರಣೆಗೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ವಿಶೇಷ ಆಸಕ್ತಿ ವಹಿಸಿದ್ದು, ಶೈಕ್ಷಣಿಕ ವರ್ಷದ ಆರಂಭದಿಂದ ಮಕ್ಕಳಿಗೆ ಪತ್ರ ಬರೆಯುತ್ತಿದ್ದಾರೆ. ತಾಯಂದಿರ ಸಭೆಗೆ ಹಾಜರಾಗಿ, ಸಲಹೆ ಮತ್ತು ಸೂಚನೆ ನೀಡಿದ್ದಾರೆ. ಶಾಲಾ ಸುಧಾರಣಾ ಸಮಿತಿಯ ಸದಸ್ಯರೊಂದಿಗೂ ಸಭೆ ನಡೆಸಿ, ಓದಿನ ವಾತಾವರಣ ಮೂಡಿಸಲು ಕೋರಲಾಗಿದೆ’ ಎಂದರು.

‘ಕಳೆದ ಸಲ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ 84ರಷ್ಟು ಫಲಿತಾಂಶ ಪಡೆದು, ರಾಜ್ಯಕ್ಕೆ 24ನೇ ಸ್ಥಾನದಲ್ಲಿತ್ತು. ಈ ಸಲ 33,548 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಶೇ 90ಕ್ಕೂ ಹೆಚ್ಚು ಫಲಿತಾಂಶ ಪಡೆದು ರಾಜ್ಯದ 10 ಸ್ಥಾನಗಳೊಳಗೆ ಬರುವ ಗುರಿಯಿದೆ’ ಎಂದರು.

ಸರಣಿ ಪರೀಕ್ಷೆ ಪಾಸಿಂಗ್‌ ಪ್ಯಾಕೇಜ್‌ ಪೋಷಕರೊಂದಿಗೆ ಸಭೆ ಶಿಕ್ಷಕರಿಗೆ ತರಬೇತಿ ಸೇರಿ ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ - ಮಾಗುಂಡಪ್ಪ ಬಡದಾನಿ ಕ್ಷೇತ್ರ ಶಿಕ್ಷಣಾಧಿಕಾರಿ ಬಾಗಲಕೋಟೆ

ಮಗಳು ಹೆಚ್ಚಿನ ಅಂಕ ಪಡೆಯಲು ಓದಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಟಿವಿ. ಮೊಬೈಲ್‌ ಹೆಚ್ಚಿಗೆ ಬಳಸಲು ಕೊಡುತ್ತಿಲ್ಲ. ಉತ್ತಮ ಫಲಿತಾಂಶ ಗಳಿಸಲು ಆದ್ಯತೆ ಕೊಟ್ಟದ್ದೇವೆ- ಪ್ರೇಮಾ ಪಟ್ಟಣಶೆಟ್ಟಿ ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT