ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಹರಿಯದ ನೀರು, ಬೆಳಗದ ಬೀದಿದೀಪ: ನಿವಾಸಿಗಳ ಪರದಾಟ

Published 2 ನವೆಂಬರ್ 2023, 14:27 IST
Last Updated 2 ನವೆಂಬರ್ 2023, 14:27 IST
ಅಕ್ಷರ ಗಾತ್ರ

ಬಾಗಲಕೋಟೆ: ಕರ್ನಾಟಕ ರಾಜ್ಯೋತ್ಸವ ಆಚರಣೆಯಿಂದಾಗಿ ರಾಜ್ಯವೆಲ್ಲ ಬೆಳಗುತ್ತಿದ್ದರೆ, ಬಾಗಲಕೋಟೆಯ ನವನಗರ ಮಾತ್ರ ಕತ್ತಲದಲ್ಲಿ ಮುಳುಗಿತ್ತು.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಗುತ್ತಿಗೆದಾರರ ಬಿಲ್‌ ಪಾವತಿಸಿಲ್ಲ ಎಂದು ಗುತ್ತಿಗೆದಾರರು ತಮ್ಮ ಸಿಬ್ಬಂದಿಯನ್ನು ಕೆಲಸಕ್ಕೆ ಕಳುಹಿಸದ ಕಾರಣ ಬೀದಿ ದೀಪಗಳು ಬೆಳಗಲಿಲ್ಲ. 

ಬೀದಿ ದೀಪಗಳು ಬೆಳಗುವುದಷ್ಟೇ ಅಲ್ಲ, ಕುಡಿಯುವ ನೀರು ಸರಬರಾಜು ಮಾಡುವ ಸಿಬ್ಬಂದಿಯೂ ವೇತನ ಪಾವತಿ ಮಾಡದ್ದಕ್ಕೆ ಪ್ರತಿಭಟನೆ ಮಾಡಿದ್ದರಿಂದ ಎರಡು ದಿನಗಳಿಂದ ನೀರು ಸರಬರಾಜು ಆಗಿಲ್ಲ. ತ್ಯಾಜ್ಯ ವಿಲೇವಾರಿಗೂ ಅದೇ ಗತಿಯಾಗಿದ್ದು, ಎರಡು ದಿನಗಳಿಂದ ಕಸ ವಿಲೇವಾರಿಯಾಗಿಲ್ಲ.

ನವನಗರದ ಯುನಿಟ್‌ 1 ಮತ್ತು 2 ಅನ್ನು ನಗರಸಭೆ ಹಸ್ತಾಂತರಿಸಲು ಮುಂದಾಗಿರುವುದರಿಂದ ನೀರು ಸರಬರಾಜು, ಬೀದಿ ದೀಪ ಹಾಗೂ ತ್ಯಾಜ್ಯ ವಿಲೇವಾರಿ ಟೆಂಡರ್‌ ಕರೆಯಲು ಮುಂದಾಗಿಲ್ಲ. ಅವಧಿ ಮುಗಿದಿರುವುದರಿಂದ ಬಿಲ್‌ ಪಾವತಿಗೂ ಮುಂದಾಗುತ್ತಿಲ್ಲ. ಪರಿಣಾಮ ಗುತ್ತಿಗೆದಾರರು ಪದೇ ಪದೇ ಕೆಲಸ ಸ್ಥಗಿತಗೊಳಿಸುತ್ತಿದ್ದಾರೆ.

ತಿಂಗಳ ಹಿಂದಷ್ಟೇ ವಾರಗಟ್ಟಲೇ ಕಸ ವಿಲೇವಾರಿ ಸ್ಥಗಿತ ಮಾಡಲಾಗಿತ್ತು. ಆಗಾಗ ಜನರು ಪರದಾಡಿದ್ದರು. ಕೊನೆಗೆ ಶಾಸಕ ಎಚ್‌.ವೈ. ಮೇಟಿ, ಸರ್ಕಾರದಿಂದ ಬಿಲ್‌ ಕೊಡಿಸುವ ಭರವಸೆ ನೀಡಿ ಕೆಲಸ ಮುಂದುವರೆಸುವಂತೆ ಮಾಡಿದ್ದರು.

ಈ ನಡುವೆ ಶಾಸಕ ಮೇಟಿ ಅವರು, ಬೆಂಗಳೂರಿನಲ್ಲಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ, ಕೆಬಿಜೆಎನ್‌ಎಲ್‌ ಪಡೆದುಕೊಂಡಿರುವ ಬಿಟಿಡಿಎ ದಲ್ಲಿಟ್ಟಿದ್ದ ಕಾರ್ಪಸ್‌ ಫಂಡ್ ಅನ್ನು ಮರಳಿ ಕೊಡುವಂತೆ ಮನವಿ ಮಾಡಿದ್ದರು. ಸಚಿವರೂ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದರು.

ತಿಂಗಳ ಕಳೆದ ಮೇಲೆಯೂ ಬಿಲ್‌ ಪಾವತಿಯಾಗದ್ದರಿಂದ ಗುತ್ತಿಗೆದಾರರು ಬುಧವಾರದಿಂದ ಮತ್ತೆ ಕೆಲಸ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಜನರು ಪರದಾಡುವಂತಾಗಿದೆ.

ಶಾಸಕ ಎಚ್‌.ವೈ. ಮೇಟಿ ಅವರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ್ದಾರೆ. ಗುತ್ತಿಗೆದಾರರು ಶುಕ್ರವಾರದಿಂದ ಕೆಲಸ ಆರಂಭಿಸಲಿದ್ದಾರೆ
ಮನ್ಮಧಯ್ಯ ಸ್ವಾಮಿ ಮುಖ್ಯ ಎಂಜಿನಿಯರ್‌ ಬಿಟಿಡಿಎ
ಗುತ್ತಿಗೆದಾರರೊಂದಿಗೆ ಸಭೆ: ಕೆಲಸ ಆರಂಭಿಸುವ ಭರವಸೆ
ಬಾಗಲಕೋಟೆ: ನವನಗರ ನಿರ್ವಹಣೆ ಸಂಬಂಧಿಸಿದ ವಿವಿಧ ಗುತ್ತಿಗೆದಾರರಿಗೆ ಪಾವತಿಸಬೇಕಾದ ಎಲ್ಲ ಬಾಕಿ ಮೊತ್ತ ಶೀಘ್ರ ಬಿಡುಗಡೆ ಮಾಡಲಾಗುವುದು. ಗುತ್ತಿಗೆದಾರರು ಕೆಲಸ ಮುಂದುವರೆಸಬೇಕು ಎಂದು ಶಾಸಕ ಎಚ್‌.ವೈ. ಮೇಟಿ ಹೇಳಿದರು. ಬಿಟಿಡಿಎ ಕಚೇರಿಯಲ್ಲಿ ಗುರುವಾರ ಗುತ್ತಿಗೆದಾರರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕಾರ್ಪಸ್‌ ಫಂಡ್‌ ಕೂಡ ಶೀಘ್ರ ಬರಲಿದೆ. ಗುತ್ತಿಗೆದಾರರು ಯಾವುದೇ ಆತಂಕ ಬೇಡ ಎಂದರು. ನವನಗರದ ನಿರ್ವಹಣೆ ಕಾರ್ಪಸ್‌ ಫಂಡ್‌ ಬಡ್ಡಿ ಹಣದಲ್ಲಿ ನಡೆಯುತ್ತಿತ್ತು. ಆದರೆ ಹಿಂದಿನ ಸರ್ಕಾರದಲ್ಲಿ ಠರಾವು ಪಾಸು ಮಾಡಿ ಕಾರ್ಪಸ್‌ ಫಂಡ್ ಅನ್ನು ಕೆಬಿಜೆಎನ್‌ಎಲ್‌ ನೀಡಲು ನಿರ್ಣಯ ಕೈಗೊಂಡಿದ್ದರು. ನಾವು ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಕಾರ್ಪಸ್‌ ಫಂಡ್‌ ಅನ್ನು ಕೆಬಿಜೆಎನ್‌ಎಲ್‌ಗೆ ನೀಡಲಾಗಿದೆ. ಮುಖ್ಯಮಂತ್ರಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರ‌ನ್ನುಭೇಟಿ ಮಾಡಿ ಮನವಿ ಮಾಡಿದ್ದೇವೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಕಾರ್ಪಸ್‌ ಫಂಡ್ ಜತೆಗೆ ಬಿಟಿಡಿಎಗೆ ವಿಶೇಷ ಅನುದಾನದ ಪ್ರಸ್ತಾವ ಸಲ್ಲಿಸಿದ್ದೇವೆ. ಗರಿಷ್ಠವೆಂದರೂ ತಿಂಗಳೊಳಗಾಗಿ ಕಾರ್ಪಸ್‌ ಫಂಡ್ ಮರಳಿ ಬರಲಿದೆ. ನನ್ನ ಮೇಲೆ ಭರವಸೆ ಇಟ್ಟು ಎಲ್ಲ ಗುತ್ತಿಗೆದಾರರು ದೈನಂದಿನ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು. ಈ ವೇಳೆ ಹಲವು ಗುತ್ತಿಗೆದಾರರು ತಮ್ಮ ಸಮಸ್ಯೆ ಹೇಳಿಕೊಂಡರು. ನಂತರ ಶಾಸಕರ ಮಾತಿಗೆ ಒಪ್ಪಿ ನಿರ್ವಹಣೆಯ ಎಲ್ಲ ಕಾರ್ಯ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಬಿಟಿಡಿಎ ಮುಖ್ಯ ಎಂಜಿನಿಯರ್‌ ಮನ್ಮಥಯ್ಯಸ್ವಾಮಿ ಮುಖಂಡರಾದ ನಾಗರಾಜ ಹದ್ಲಿ ಹಾಜಿಸಾಬ್ ದಂಡಿನ ಸಂಜೀವ ವಾಡಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT