ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಖಂಡಿ: ದಶಕ ಕಳೆದರೂ ‍ಪೂರ್ಣಗೊಳ್ಳದ ಕಾಮಗಾರಿ

ಸಮರ್ಪಕ ನೀರು ಪೂರೈಕೆಗಾಗಿ ಕಾಯುತ್ತಿರುವ ಜನರು
Published 27 ನವೆಂಬರ್ 2023, 4:59 IST
Last Updated 27 ನವೆಂಬರ್ 2023, 4:59 IST
ಅಕ್ಷರ ಗಾತ್ರ

ಜಮಖಂಡಿ: ನಗರದ ಜನರು ದಶಕದಿಂದ ನಿರಂತರ ನೀರಿಗಾಗಿ (24X7) ಕಾಯುತ್ತಲೇ ಇದ್ದಾರೆ.

ದಿನದಿಂದ ದಿನಕ್ಕೆ ನಗರ ಬೆಳೆಯುತ್ತಲೇ ಇದೆ. ಸದ್ಯ ನಗರದಲ್ಲಿ 85 ಸಾವಿರ ಜನಸಂಖ್ಯೆ, 15,670 ಮನೆಗಳಿವೆ. ಕೆಲವು ಬಡಾವಣೆಗಳನ್ನು ಹೊರತುಪಡಿಸಿ ಉಳಿದ ಬಡಾವಣೆಗಳಲ್ಲಿ ಈಗಲೂ ಮೂರು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಿರಂತರ ನೀರು ಪೂರೈಸುವ ಯೋಜನೆಯನ್ನು ₹22.47 ಕೋಟಿ ವೆಚ್ಚದಲ್ಲಿ 2013ರಲ್ಲಿ ಆರಂಭಿಸಲಾಗಿದೆ. ದಶಕ ಕಳೆದರೂ ಯೋಜನೆ ಜಾರಿ ಪೂರ್ಣಗೊಂಡಿಲ್ಲ.

ನೀರು ಸರಬರಾಜು ವಿತರಣಾ ಕೊಳವೆ ಮಾರ್ಗದ ನವೀಕರಣ ಯೋಜನೆಯ ಕಾಮಗಾರಿ 2013ರಲ್ಲಿ ಪ್ರಾರಂಭವಾಯಿತು. ದಿನದ 24 ಗಂಟೆಯೂ ನೀರು ಪೂರೈಸಬೇಕು. ಯಾವುದೇ ಮೋಟಾರ್ ಬಳಸದೆ ಮೂರನೇ ಮಹಡಿಯವರೆಗೆ ನೀರು ಬರುವಂತೆ ಯೋಜನೆ ರೂಪಿಸಲಾಗಿದೆ ಎಂದು ಯೋಜನೆ ಆರಂಭಿಸಿದಾಗ ಹೇಳಲಾಗಿತ್ತು.

ಕಾಮಗಾರಿ ವಿಳಂಬದಿಂದಾಗಿ ಯೋಜನಾ ವೆಚ್ಚ ಹೆಚ್ಚಾಗಿ, ನಗರದಾದ್ಯಂತ ಅಳವಡಿಸಬೇಕಿದ್ದ ನಳಗಳ ಸಂಪರ್ಕವನ್ನು 7,681ಕ್ಕೆ ಮನೆಗಳಿಗೆ ಮಾತ್ರ ಮಾಡಲಾಗಿದೆ. ಕಾಮಗಾರಿ ಸರಿಯಾಗಿ ಆಗದ ಕಾರಣ ಕೆಲ ಮನೆಗಳಿಗೆ ಮಾತ್ರ ನೀರು ಸರಬರಾಜು ಆಗುತ್ತಿದೆ.

ಎಲ್‌ಐಸಿ ಕಾಲೊನಿ, ಸ್ಟೇಟ್ ಬ್ಯಾಂಕ್‌ ಕಾಲೊನಿ, ಬಸವ ನಗರದಲ್ಲಿ ಮಾತ್ರ ಕಾಮಗಾರಿ ಮಾಡಿ, 2018ರ ಜೂನ್‌ನಲ್ಲಿ ನಗರಸಭೆಗೆ ಹಸ್ತಾಂತರಿಸಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. 

2018ರಲ್ಲಿ ಬಾಕಿ ಉಳಿದಿದ್ದ 42.29 ಕಿ.ಮೀ. ಪ್ರದೇಶದ ಕುಡಿಯುವ ನೀರಿನ ಪೈಪಲೈನ್ ಅಳವಡಿಸಲು ನಗರೋತ್ಥಾನ ಹಂತ-3ರ ಅಡಿಯಲ್ಲಿ ₹9.99 ಕೋಟಿ ವೆಚ್ಚದಲ್ಲಿ 2,500 ಮನೆಗಳಿಗೆ ಸಂಪರ್ಕವನ್ನು ಕಲ್ಪಿಸುವ ಗುತ್ತಿಗೆಯನ್ನು ಮುಂಬೈನ ಸ್ವಸ್ತಿಕ್ ಇನ್‌ಫ್ರಾಲಾಜಿಕ್ ಇಂಡಿಯಾ ಕಂಪನಿಗೆ ನೀಡಲಾಗಿತ್ತು.

ಚೌಡಯ್ಯ ನಗರ, ಆಜಾದ್ ನಗರ, ರೆಹಮತ್ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಳ ಜೋಡಣೆ ಮಾಡಿ 2020ರ ಮಾರ್ಚ್‌ಗೆ ನಗರಸಭೆಗೆ ಹಸ್ತಾಂತರಿಸಿದ್ದಾರೆ. 1,809 ನಳ ಸಂಪರ್ಕ ಮಾಡಲಾಗಿದೆ ಎಂದು ತಿಳಿಸಲಾಗಿದ್ದು, ಅಲ್ಲಿಯೂ ಕೆಲವು ಬಾಕಿ ಉಳಿದಿವೆ.

ಪೈಪ್‌ಲೈನ್‌ ಅಪೂರ್ಣ: ಯೋಜನೆಗಾಗಿ ಹೊಸ ಪೈಪ್‌ಲೈನ್‌ ಅಳವಡಿಸುವ ಕಾರ್ಯ ನಡೆಯುತ್ತಲೇ ಇದೆ. ಇದುವರೆಗೆ ಮುಗಿದಿಲ್ಲ. ಪೈಪ್‌ಲೈನ್‌ ಸಲುವಾಗಿ ಅಗೆದ ರಸ್ತೆಗಳನ್ನು ಯಥಾಸ್ಥಿತಿಗೆ ತರುವ ಕೆಲಸವೂ ಆಗಿಲ್ಲ. ಕೆಲವು ಕಡೆ ನಳಗಳು ಕಿತ್ತು ಹೋಗಿವೆ. ಮೀಟರ್‌ಗಳು ಸ್ಥಗಿತಗೊಂಡು, ಕಾಣೆಯಾಗಿವೆ. ಆದರೆ, ನಗರಸಭೆಯಲ್ಲಿ ಕಾಗದದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ನೀರು ಸಹ ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಗುತ್ತಿಗೆದಾರರಿಂದ ಕೆಲಸ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವರ ಕುರಿತು ಅಧಿಕಾರಿಗಳ ಮೃದುಧೋರಣೆ ತಾಳಿರುವುದೂ ಕಾಮಗಾರಿ ವಿಳಂಬ ಹಾಗೂ ಕಳಪೆ ಸಾಮಗ್ರಿಗಳ ಬಳಕೆಗೆ ಕಾರಣವಾಗಿದೆ ಎಂದು ನಗರಸಭೆ ಸದಸ್ಯರು ಹಲವು ಬಾರಿ ಸಭೆಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯೋಜನೆಯ ವಿಳಂಬ ಹಾಗೂ ಸರಿಯಾಗಿ ಅನುಷ್ಠಾನ ಆಗದಿರುವುದಕ್ಕೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಕಾರಣರಾಗಿದ್ದಾರೆ. ಕಾಮಗಾರಿ ಅನುಷ್ಠಾನದ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

ಜಮಖಂಡಿಯ ಮುಧೋಳ ರೋಡ್‌ ಹತ್ತಿರ ಅಳವಡಿಸಿರುವ ಪೈಪ್‌ ಹಾಗೆಯೇ ಬಿಟ್ಟಿರುವುದು
ಜಮಖಂಡಿಯ ಮುಧೋಳ ರೋಡ್‌ ಹತ್ತಿರ ಅಳವಡಿಸಿರುವ ಪೈಪ್‌ ಹಾಗೆಯೇ ಬಿಟ್ಟಿರುವುದು
ಜಮಖಂಡಿ ಟೀಚರ್ಸ್ ಕಾಲೊನಿಯಲ್ಲಿ ಪೈಪ್ ಲೈನ್ ಜೋಡಣೆ ಮಾಡಲಾಗುತ್ತಿದೆ
ಜಮಖಂಡಿ ಟೀಚರ್ಸ್ ಕಾಲೊನಿಯಲ್ಲಿ ಪೈಪ್ ಲೈನ್ ಜೋಡಣೆ ಮಾಡಲಾಗುತ್ತಿದೆ
ಜಮಖಂಡಿಯ ಜಯನಗರದ ಚರಂಡಿಯಲ್ಲಿ ಪೈಪ್ ಜೋಡಣೆ ಮಾಡಿರುವುದು
ಜಮಖಂಡಿಯ ಜಯನಗರದ ಚರಂಡಿಯಲ್ಲಿ ಪೈಪ್ ಜೋಡಣೆ ಮಾಡಿರುವುದು
ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ
ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ
ರಮೇಶ ಕೊಳಂಬಿ
ರಮೇಶ ಕೊಳಂಬಿ
ರಾಜು ಮಸಳಿ
ರಾಜು ಮಸಳಿ

ಜಮಖಂಡಿ ಬೆಳೆಯುತ್ತಿರುವುದರಿಂದ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಮೃತ-2 ಯೋಜನೆಯಡಿ ಪ್ರಸ್ತಾಪ ಸಲ್ಲಿಸಿದ್ದು ಅದು ಜಾರಿಯಾದರೆ ಎಲ್ಲ ಮನೆಗಳಿಗೆ ಸಂಪೂರ್ಣವಾಗಿ ನಳ ಜೋಡಣೆಯಾಗುತ್ತದೆ

– ಕಿರಣ ಮಾಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ

ನಗರದಲ್ಲಿ ಎರಡು–ಮೂರು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ

–ಲಕ್ಷ್ಮೀ ಅಷ್ಟಗಿ ಪೌರಾಯುಕ್ತೆ ನಗರಸಭೆ

ಚೌಡಯ್ಯ ನಗರದಲ್ಲಿ ಅರ್ಧ– ಮರ್ಧ ಪೈ‌ಪ್ ಲೈನ್ ಕಾಮಗಾರಿ ಮಾಡಿದ್ದಾರೆ. ಸರಿಯಾಗಿ ನೀರು ಬರುವುದಿಲ್ಲ ಅರ್ಧದಷ್ಟು ನೀರು ಪೈ‍ಪ್‌ಗಳಲ್ಲಿಯೇ ಸೋರಿ ಹೋಗುತ್ತಿದೆ

–ರಾಜು ಮಸಳಿ ನಿವಾಸಿ ಚೌಡಯ್ಯ ನಗರ

ವಾರದಲ್ಲಿ ಎರಡು ದಿನ ಮಾತ್ರ ನೀರು ಬರುತ್ತದೆ ‌ದಿನಪೂರ್ತಿ ಒಮ್ಮೆಯೂ ನೀರು ಬಂದಿಲ್ಲ ಇನ್ನೂ ಹಲವಾರು ಮನೆಗಳಿಗೆ ನಳ ಸಂಪರ್ಕ ನೀಡಿಲ್ಲ

–ರಮೇಶ ಕೊಳಂಬಿ ನಿವಾಸಿ ಪ್ರಭಾತ ನಗರ

ಮತ್ತೊಮ್ಮೆ ಪ್ರಸ್ತಾವ

ನಗರದ ಮನೆಗಳಿಗೆ ದಿನಪೂರ್ತಿ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಎರಡು ಬಾರಿಯಾದರೂ ಪೂರ್ಣಗೊಂಡಿಲ್ಲ. ಮೂರನೇ ಬಾರಿಗೆ ಮತ್ತೊಮ್ಮೆ ಪ್ರಸ್ತಾವ ಕಳುಹಿಸಲಾಗಿದೆ. ಬಾಕಿ ಉಳಿದಿರುವ 5489 ಮನೆಗಳಿಗೆ ಸಂಪರ್ಕ ಕಲ್ಪಿಸಲು ಅಮೃತ–2 ಯೋಜನೆಯಲ್ಲಿ ₹21 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವ ಕಳುಹಿಸಲಾಗಿದೆ. ಈಗಾಗಲೇ ಸಂಪರ್ಕ ಕಲ್ಪಿಸಲಾಗಿರುವ ಮನೆಗಳ ಅವ್ಯವಸ್ಥೆಯನ್ನು ಸರಿಪಡಿಸಿ ಸತತವಾಗಿ ನೀರು ಸರಬರಾಜು ಕೆಲಸ ಆಗಬೇಕಿದೆ. ಜೊತೆಗೆ ಹೊಸದಾಗಿ ಕೈಗೆತ್ತಿಕೊಳ್ಳುವ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು.

ಬಳಕೆಯಾಗದ ಮೀಟರ್ ‌

ದಿನದ ಇಪ್ಪತ್ತನಾಲ್ಕು ಗಂಟೆ ನೀರು ಸರಬರಾಜು ಮಾಡುವ ಯೋಜನೆಯಡಿ ಅಳವಡಿಸಲಾಗಿರುವ ಮೀಟರ್‌ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಮೀಟರ್ ಅಳವಡಿಸಿ ಹಲವಾರು ವರ್ಷಗಳೇ ಕಳೆದಿದ್ದು ಹಲವು ಮೀಟರ್‌ಗಳು ಕಿತ್ತು ಹೋಗಿವೆ. ಚೆನ್ನಾಗಿರುವ ಮೀಟರ್‌ಗಳಿಗೂ ಅವುಗಳು ಓಡಿದ ಆಧಾರದ ಮೇಲೆ ಬಿಲ್ ನೀಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT