ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಸಿಗುವುದೇ ಅನುದಾನ?

Published 1 ಫೆಬ್ರುವರಿ 2024, 5:07 IST
Last Updated 1 ಫೆಬ್ರುವರಿ 2024, 5:07 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡುತ್ತಿರುವುದರಿಂದ ಅವರ ಕಾಲದಲ್ಲಿಯೇ ಘೋಷಣೆಯಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಈ ವರ್ಷದಿಂದಾದರೂ ಆರಂಭವಾಗಲಿ ಎಂಬ ನಿರೀಕ್ಷೆ ಗರಿಗೆದರಿದೆ.

2014–15ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆ ನಂತರ ಆಡಳಿತ ನಡೆಸಿದ ಸಮ್ಮಿಶ್ರ ಸರ್ಕಾರದಲ್ಲಾಗಲೀ, ಬಿಜೆಪಿ ಸರ್ಕಾರದಲ್ಲಾಗಲೀ ಅನುದಾನ ದೊರೆಯಲಿಲ್ಲ. ಬಾಗಲಕೋಟೆಯ ಜೊತೆಗೆ ಗದಗ, ಹಾವೇರಿ, ರಾಯಚೂರು, ಕೊ‍ಪ್ಪಳ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭದ ಘೋಷಣೆ ಮಾಡಲಾಗಿತ್ತು. ಆ ಜಿಲ್ಲೆಗಳಲ್ಲಿ ಕಾಲೇಜು ಆರಂಭಗೊಂಡಿವೆ. ಜಿಲ್ಲೆಯಲ್ಲಿ ಈ ಬಾರಿಯಾದೂ ಕಾಲೇಜು ಆರಂಭವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಈ ವರ್ಷ ಬಜೆಟ್‌ನಲ್ಲಿ ಕಾಲೇಜು ಆರಂಭಕ್ಕೆ ಅನುದಾನ ನೀಡಬೇಕು ಎಂದು ಶಾಸಕ ಎಚ್‌.ವೈ. ಮೇಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಜೊತೆಗೆ ರಮೇಶ ಬದ್ನೂರ, ಕರವೇ ಮುಖಂಡ ಬಸವರಾಜ ಧರ್ಮಂತಿ ಸೇರಿದಂತೆ ಹಲವರು ಮನವಿ ಸಲ್ಲಿಸಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ಬಾಗಲಕೋಟೆಯಲ್ಲಿ ಭಾಷಣ ಮಾಡಿದ್ದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಿಲ್ಲ. ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದರೆ, ಕಾಲೇಜು ಆರಂಭಿಸಲಿದೆ ಎಂದಿದ್ದರು. ಈಗ ಅವರೇ ಮುಖ್ಯಮಂತ್ರಿಯ ಜತೆಗೆ ಹಣಕಾಸು ಸಚಿವರೂ ಆಗಿದ್ದಾರೆ. ಈಗಲಾದರೂ ಮಾತಿಗೆ ಬದ್ಧರಾಗಿರುತ್ತಾರೆಯೇ ಎಂಬುದು ಜಿಲ್ಲೆಯ ಜನರ ಪ್ರಶ್ನೆ.

ದಶಕದ ಹಿಂದೆ ಬಾಗಲಕೋಟೆಯ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖ್ಯಾಡ ಗ್ರಾಮದಲ್ಲಿ ಲಲಿತಕಲಾ ವಿಶ್ವವಿದ್ಯಾಲಯ ಆರಂಭಿಸಲು ಆಗಿನ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಆದರೆ, ಇನ್ನೂ ವಿಶ್ವವಿದ್ಯಾಲಯ ಆರಂಭವಾಗಿಲ್ಲ.

2012–13ರಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರವು ವಿಶ್ವವಿದ್ಯಾಲಯವನ್ನು ಇಲ್ಲಿ ಆರಂಭಿಸಲು ನಿರ್ಧರಿಸಿತ್ತು. ₹ 1.23 ಕೋಟಿ ಬಿಡುಗಡೆ ಮಾಡಲಾಗಿತ್ತು. ಅದಕ್ಕಾಗಿಯೇ ಖ್ಯಾಡ ಗ್ರಾಮದಲ್ಲಿ 430 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಈ ಬಾರಿಯಾದರೂ ಚಾಲನೆ ಸಿಗಲಿದೆ ಎಂಬುದು ಜನರ ನಿರೀಕ್ಷೆಯಾಗಿದೆ.

ಬಾಗಲಕೋಟೆ–ಕುಡಚಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಮಿ ಒದಗಿಸುವ ಕಾರ್ಯ ರಾಜ್ಯ ಸರ್ಕಾರದ್ದಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಭೂಸ್ವಾಧೀನ ಪೂರ್ಣಗೊಂಡಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಇನ್ನಷ್ಟು ಭೂಮಿ ಸ್ವಾಧೀನವಾಗಬೇಕಿದೆ. ಬೇಗನೆ ಸ್ವಾಧೀನ ಮಾಡಿಕೊಟ್ಟರೆ ಎರಡು ದಶಕಗಳ ಮಾರ್ಗದ ಕನಸು ನನಸಾಗಲಿದೆ.

ರಾಜಕೀಯ ಸಂಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಅವರನ್ನು ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಗೆಲ್ಲಿಸುವ ಮೂಲಕ ಬಾದಾಮಿ ಜನರು ರಾಜಕೀಯ ಪುನರ್‌ಜನ್ಮ ನೀಡಿದ್ದರು. ಚುನಾವಣೆ ಸಮಯದಲ್ಲಿ ಗೆದ್ದರೆ, ಬಾದಾಮಿ ಕ್ಷೇತ್ರದ ಅಭಿವೃದ್ಧಿಯ ಹೊಣೆ ನನ್ನದು ಎಂದು ಭರವಸೆ ನೀಡಿದ್ದರು. ಆದರೆ, ಮುಖ್ಯಮಂತ್ರಿಯಾದ ನಂತರ ಒಂದು ಬಾರಿಯೂ ಬಾದಾಮಿಗೆ ಬಂದಿಲ್ಲ. ಅಭಿವೃದ್ಧಿಗಾದರೂ ಅನುದಾನ ನೀಡುವರೇ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT