ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿಗೆ ನೆರವಾಗಲಿವೆ 3 ಶಕ್ತಿಗಳು: ಬಿ. ಶ್ರೀರಾಮುಲು

ನರೇಂದ್ರ ಮೋದಿ, ಜೆಡಿಎಸ್‌ ಮೈತ್ರಿ, ರೆಡ್ಡಿ ಪಕ್ಷ ವಿಲೀನ ವರದಾನವೆಂದ ಶ್ರೀರಾಮುಲು
Published 31 ಮಾರ್ಚ್ 2024, 15:11 IST
Last Updated 31 ಮಾರ್ಚ್ 2024, 15:11 IST
ಅಕ್ಷರ ಗಾತ್ರ

ಬಳ್ಳಾರಿ: ಒಂದು ಕಡೆ ನರೇಂದ್ರ ಮೋದಿ ಅಲೆ. ಮತ್ತೊಂದೆಡೆ, ಜೆಡಿಎಸ್‌ ಮತ್ತು ಬಿಜೆಪಿಯ ನಾಯಕರ ಮೈತ್ರಿ. ಇನ್ನೊಂದೆಡೆ, ಆತ್ಮೀಯ ಸ್ನೇಹಿತ ಜನಾರ್ದನ ರೆಡ್ಡಿ ಪಕ್ಷ ವಿಲೀನಗೊಂಡಿದ್ದು, ಮೂರು ಶಕ್ತಿಗಳು ನನ್ನ ಗೆಲುವಿಗೆ ನೆರವಾಗಲಿವೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.  

ಬಳ್ಳಾರಿ ನಗರದ ‘ಸೂರ್ಯ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ನಡೆದ ಬಿಜೆಪಿ–ಜೆಡಿಎಸ್ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ. ನಾವು ಒಂದಾದಾಗಲೆಲ್ಲ ಭಯಬೀಳುವ ಕಾಂಗ್ರೆಸ್ ನಮ್ಮನ್ನು ಒಡೆಯುವ ಕುತಂತ್ರ ಮಾಡುತ್ತದೆ. ಈಗ ನಾವೆಲ್ಲ ಒಂದಾಗಿರುವುದು ಕಾಂಗ್ರೆಸ್‌ನವರಿಗೆ ನಿದ್ದೆ ಬರುತ್ತಿಲ್ಲ. ಬಿಜೆಪಿ ಜೆಡಿಎಸ್‌ ಸುನಾಮಿಯಲ್ಲಿ ಕಾಂಗ್ರೆಸ್ ಧೂಳಿಪಟ ಆಗಲಿದೆ. ಶ್ರೀರಾಮುಲು ಗೆಲುವು ಮೈತ್ರಿಯ ಗೆಲುವಾಗಲಿದೆ’ ಎಂದು ಭವಿಷ್ಯ ನುಡಿದರು. 

'ದೇವೆಗೌಡರ ಗರಡಿಯಲ್ಲಿ ಬೆಳೆದ ಹಲವು ಅವಕಾಶವಾದಿಗಳು ಈಗ ಅವರ ವಿರುದ್ದ ಮಾತನಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡರು ಮತ್ತು ಪ್ರಧಾನಿ ಮೋದಿ ಅವರಿಂದ ರಾಜ್ಯದಲ್ಲಿ ಈ ಮೈತ್ರಿ ಬೃಹತ್ ಶಕ್ತಿಯಾಗಿ ಹೊರ ಹೊಮ್ಮಿದೆ. ಇಂಡಿಯಾ ಮೈತ್ರಿಕೂಟದಿಂದ ಒಬ್ಬೊಬ್ಬರೇ ನಾಯಕರು ಕಳಚಿಕೊಳ್ಳುತ್ತಿದ್ದಾರೆ. ನ್ಯಾಯ ಯಾತ್ರೆ ನಡೆದ ಜಾಗಗಳಲ್ಲೆಲ ನಾಯಕರು ಹೊರ ಬರುತ್ತಿದ್ದಾರೆ. ಬಿಜೆಯನ್ನು ಎದುರಿಸಲು ಸಾಧ್ಯವಿಲ್ಲವೆಂದು ಕಾಂಗ್ರೆಸ್‌ಗೆ ಮನವರಿಕೆಯಾಗಿದೆ. ಮೋದಿ ಹ್ಯಾಟ್ರಿಕ್ ಗೆಲುವನ್ನು ತಡೆಯಲು ಯಾರಿಂದಲೂ ಆಗದು’ ಎಂದರು. 

ಜೆಡಿಎಸ್‌ ನಾಯಕ ವೆಂಕಟರಾವ್ ನಾಡಗೌಡ ಮಾತನಾಡಿ, ‘ಬಿಜೆಪಿ ಮತ್ತು ಜೆಡಿಎಸ್ ಈ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ. 28 ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಮೈತ್ರಿ ಧರ್ಮ ಪಾಲಿಸಿ ಶ್ರಮಿಸೋಣ. ದೇಶಕ್ಕೆ ಮೋದಿ ಅವರ ಅಗತ್ಯವಿದೆ ಎಂದು ದೇವೆಗೌಡರೇ ನಿರ್ಧಾರಕ್ಕೆ ಬಂದಿದ್ದಾರೆ‘ ಎಂದರು. 

‘ ಕಾಂಗ್ರೆಸ್‌ನಲ್ಲಿ ಮೋದಿಗೆ ಸರಿ ಸಮನವಾಗಿ ಯಾರೂ ಇಲ್ಲ. ರಾಹುಲ್ ಅವರನ್ನು ಹೋಲಿಸಿ ಆ ಪಕ್ಷ ನಗೆ ಪಾಟಲಿಗೀಡಾಗಿದೆ. ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದು ಇತ್ತೀಚೆಗೆ ಸಚಿವರೊಬ್ಬರು ಹೇಳಿದ್ದರು. ಅವರಿಗೆ ನಾನು ಹೇಳ ಬಯಸುತ್ತೇನೆ ಮತದಾರರು ಚುನಾವಣೆಯಲ್ಲಿ ಫಲಿತಾಂಶದ ಮೂಲಕ ನಿಮ್ಮ ಕೆನ್ನೆಗೆ ಹೊಡೆಯಲಿದ್ದಾರೆ’ ಎಂದರು. 

ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಮಾತನಾಡಿ, ‘ದೇವೆಗೌಡರ ಬಗ್ಗೆ ನನಗೆ ಅಪಾರ ಗೌರವ ಇದೆ. ರೈತರ ಪರವಾಗಿ ದೇವೇಗೌಡರು ಮಾಡಿದ ಕೆಲಸವನ್ನು ರಾಜ್ಯದಲ್ಲಿ ಬೇರೆ ಯಾರು ಮಾಡಿಲ್ಲ. ಮೋದಿ ಮತ್ತು ದೇವೇಗೌಡರು ಕಪ್ಪು ಚುಕ್ಕೆ ಇಲ್ಲದ ಆಡಳಿತ ನಡೆಸಿದ್ದಾರೆ. ಇಬ್ಬರೂ ರೈತರಿಗೆ, ನಿರಾವರಿಗೆ ಒತ್ತು ನೀಡಿದ್ದಾರೆ‘ ಎಂದರು. 

ಕಾರ್ಯಕ್ರಮದಲ್ಲಿ ಶಾಸಕ ನೇಮಿರಾಜ ನಾಯ್ಕ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ರಾಜಾ ವೆಂಕಟಪ್ಪ ನಾಯಕ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ  ಮೀನಳ್ಳಿ ತಾಯಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ನಾಯ್ಡು, ಕೆ. ಕೊಟ್ರೇಶ ಮತ್ತಿತರರು ಇದ್ದರು. 

‘ಸಂಸ್ಕೃತಿ ಇಲಾಖೆ ಸಚಿವರಿಗೆ ಸಂಸ್ಕೃತಿ ಇಲ್ಲ’

ಮೋದಿ ಎನ್ನುವವರ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ್‌ ತಂಗಡಗಿ ಹೇಳಿಕೆ‌ಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ‘ಅಭಿಮಾನಕ್ಕಾಗಿ ಜನ ಮೋದಿ‌... ಮೋದಿ...ಎನ್ನುತ್ತಾರೆ. ಮೋದಿ ಎಂದರೆ ದೇಶಾಭಿಮಾನ. ಯುವಕರು ಮೋದಿ ಎಂದು ಘೋಷಣೆ ಕೂಗುತ್ತಾರೆ. ಶಿವರಾಜ ತಂಗಡಗಿ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೂ, ಅವರಿಗೆ ಸಂಸ್ಕಾರವೆಂಬುದಿಲ್ಲ. ಯಾರು ಏನೇ ಹೇಳಿದರೂ ಜನ ಮೋದಿ ಮೋದಿ ಎನ್ನುವುದನ್ನು ನಿಲ್ಲಿಸುವುದಿಲ್ಲ‘ ಎಂದರು. 

ಸೋನಿಯಾ ರಾಹುಲ್‌ ಮೇಲೂ ಕೇಸ್‌ಗಳಿವೆ...
ಶಾಸಕ ಜನಾರ್ದನ ರೆಡ್ಡಿ ತಮ್ಮ ವಿರುದ್ಧದ ಪ್ರಕರಣಗಳಿಗೆ ಹೆದರಿ ಬಿಜೆಪಿ ಸೇರಿದ್ದಾರೆ ಎಂಬ ಸಚಿವ ಬಿ. ನಾಗೇಂದ್ರ ಮಾತಿಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು ‘ಎಲ್ಲರ ಮೇಲೂ ಕೇಸುಗಳಿವೆ. ಆದರೆ ಅವರು ಅಪರಾಧಿಯೇ ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಈಗ ಯಾರ ಮೇಲೆ ಪ್ರಕರಣಗಳಿಲ್ಲ? ರಾಹುಲ್ ಗಾಂಧಿ ಸೋನಿಯಾ ಗಾಂಧಿ ಡಿ.ಕೆ ಶಿವಕುಮಾರ್‌ ಸಚಿವ ಬಿ. ನಾಗೇಂದ್ರ ಅವರ ಮೇಲೂ ಕೇಸುಗಳಿವೆ. ನ್ಯಾಯಾಲಯ ಶಿಕ್ಷೆ ಕೊಡುವವರೆಗೆ ಯಾರನ್ನೂ ತಪ್ಪಿತಸ್ಥರು ಎಂದು ಹೇಳಲಾಗದು ಎಂದರು. 
ಅರುಣಾ ಲಕ್ಷ್ಮೀ ಪ್ರಚಾರ ಏ. 4ರಿಂದ 
ಶಾಸಕ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರು ಬಿಜೆಪಿ ಸಮಾರಂಭಕ್ಕೆ ಬಾರದೇ ಇರುವ ಬಗ್ಗೆ ಕೇಳಲಾದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಶ್ರೀರಾಮುಲು  ‘ಅರುಣಾ ಲಕ್ಷ್ಮೀ ಅವರು ಅನಿವಾರ್ಯ ಕಾರಣದಿಂದ ಹೊರಗಡೆ ಹೋಗಿದ್ದಾರೆ. ಏ. 4 ರಿಂದ ಬಳ್ಳಾರಿಯಲ್ಲಿ ನಮ್ಮ ಜೊತೆಗೆ ಪ್ರಚಾರಕ್ಕೆ ಬರುತ್ತಾರೆ. ಕೆಆರ್‌ಪಿಪಿ ಕಾರ್ಯಕರ್ತರೂ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT