ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಶೇ 94 ವಾಹನಗಳಿಗಿಲ್ಲ ಎಚ್‌ಎಸ್‌ಆರ್‌ಪಿ ಪ್ಲೇಟ್‌

ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಬಳ್ಳಾರಿ ಜಿಲ್ಲೆಯಲ್ಲಿ ನಿರಾಸಕ್ತಿ
Published : 2 ಅಕ್ಟೋಬರ್ 2024, 4:42 IST
Last Updated : 2 ಅಕ್ಟೋಬರ್ 2024, 4:42 IST
ಫಾಲೋ ಮಾಡಿ
Comments

ಬಳ್ಳಾರಿ: ದೇಶದಾದ್ಯಂತ ಎಲ್ಲಾ ಮೋಟಾರು ವಾಹನಗಳಿಗೆ ‘ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್-ಎಚ್ಎಸ್ಆರ್‌ಪಿ) ಅಳವಡಿಸುವುದನ್ನು  ಕಡ್ಡಾಯಗೊಳಿಸಿ ಒಂದು ವರ್ಷವೇ ಉರುಳಿದರೂ ಜಿಲ್ಲೆಯಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಹೆಚ್ಚು ಕಡಿಮೆ ಶೇ. 94ರಷ್ಟು ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸುವುದು ಬಾಕಿ ಇದೆ ಎಂಬುದು ಪ್ರಾದೇಶಿಕ ಸಾರಿಗೆ ಕಚೇರಿಯ ಮಾಹಿತಿಯಿಂದ ಗೊತ್ತಾಗಿದೆ. 

ವಾಹನಗಳಿಗೆ ಒಂದೇ ರೀತಿಯ ನಂಬರ್ ಪ್ಲೇಟ್ ಅಳವಡಿಸುವಂತೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಕೇಂದ್ರ ಸಾರಿಗೆ ಇಲಾಖೆಯಿಂದ ಸೂಚಿಸಲಾಗಿತ್ತು. ಆಯಾ ರಾಜ್ಯದ ಸಾರಿಗೆ ಇಲಾಖೆಗಳಿಗೆ ಈ ಕುರಿತು ಜವಾಬ್ದಾರಿ ನೀಡಿ ಮೂರು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಒಂದು ವರ್ಷದ ಅವಧಿಯಲ್ಲಿ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿದ್ದರಿಂದ ಮತ್ತು ಜನ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲದ ಕಾರಣ ಜಿಲ್ಲೆಯಲ್ಲಿ ಜನ ಎಚ್‌ಎಸ್‌ಆರ್‌ಪಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಿಲ್ಲ.

ಜಿಲ್ಲೆಯಲ್ಲಿಯಲ್ಲಿರುವ 3,12,118 ವಾಹನಗಳಲ್ಲಿ ಆಗಸ್ಟ್‌ ತಿಂಗಳ ಅಂಕಿ ಅಂಶಗಳ ಪ್ರಕಾರ  17,800 ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲಾಗಿದೆ. 2,94,318 ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸುವುದು ಬಾಕಿ ಇದೆ ಎಂದು ಪ್ರಾದೇಶಿಕ ಸಾರಿಗೆ ಕಚೇರಿ ತಿಳಿಸಿದೆ.  ಹೊಸ ಪ್ಲೇಟ್‌ ಅಳವಡಿಕೆಗೆ ಸೆ. 15 ಕೊನೆಯ ದಿನವಾಗಿದ್ದ ಕಾರಣಕ್ಕೆ ಈ ಸಂಖ್ಯೆ ಇನ್ನು ಸ್ವಲ್ಪ ಹೆಚ್ಚಾಗಿರಬಹುದು. ಆದರೆ, 2.90 ಲಕ್ಷಕ್ಕೂ ಮೇಲ್ಪಟ್ಟ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವುದು ಬಾಕಿ ಇರುವುದಾಗಿ ಇಲಾಖೆ ಹೇಳಿದೆ. 

2019ರ ಬಳಿಕ ಎಲ್ಲ ವಾಹನಗಳಿಗೆ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳನ್ನೇ ಅಳವಡಿಸಲಾಗುತ್ತಿದೆ. ಅದಕ್ಕೂ ಮೊದಲು ಖರೀದಿಯಾದ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಗತ್ಯವಾಗಿದೆ.

‘ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವಂತೆ ಇನ್ನು ಜಾಗೃತಿ ಮೂಡಿಸುವ ಪ್ರಯತ್ನಗಳೇನೂ ನಡೆಯುವುದಿಲ್ಲ. ಪ್ಲೇಟ್‌ ಅಳವಡಿಕೆಗೆ ಈಗಾಗಲೇ ಹಲವು ಬಾರಿ ಅವಧಿ ವಿಸ್ತರಣೆಯಾಗಿದೆ. ನಾಗರಿಕರಿಗೆ ಇದರ ಬಗ್ಗೆ ಅರಿವೂ ಇದೆ. ಎಲ್ಲರೂ ಆದಷ್ಟು ಬೇಗ ಹೊಸ ಪ್ಲೇಟ್‌ ಅಳಡಿಸಿಕೊಳ್ಳುವುದು ಸೂಕ್ತ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸಗಿರಿ ಪ್ರಜಾವಾಣಿಗೆ ತಿಳಿಸಿದರು. 

ನವೆಂಬರ್‌ 20ರ ವರೆಗೆ ಇಲ್ಲ ಕ್ರಮ  

‘ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ನಿರ್ದಿಷ್ಟ ಉತ್ಪಾದಕರು ಮಾತ್ರವೇ ಮಾರುಕಟ್ಟೆಗೆ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್‌ಗಳು ಮಾತ್ರ ಇವುಗಳನ್ನು ವಾಹನಗಳಿಗೆ ಅಳವಡಿಸಬೇಕು’ ಎಂಬ ಸಾರಿಗೆ ಇಲಾಖೆಯ ಆದೇಶಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಹೈಕೋರ್ಟ್‌ ನವೆಂಬರ್‌ 20ಕ್ಕೆ ನಿಗದಿಪಡಿಸಿದೆ. ಹೀಗಾಗಿ ಅಲ್ಲಿಯ ವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್‌ ತಿಳಿಸಿದೆ.  

ಮೊದಲಿಗೆ ₹ 500 ದಂಡ 

ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳಿಗೆ ಕರ್ನಾಟದಲ್ಲಿ ಮೊದಲ ಬಾರಿಗೆ ₹500 ದಂಡ ವಿಧಿಸಲಾಗುತ್ತದೆ. ಆನಂತರ ಪ್ರತಿ ಬಾರಿ ₹1000 ದಂಡ ಕಟ್ಟ ಬೇಕಾಗುತ್ತದೆ. ತ‍ಪಾಸಣೆ ಮಾಡುವಾಗ ಪೊಲೀಸರು ನಂಬರ್‌ ಪ್ಲೇಟ್‌ ಒಂದನ್ನೇ ತಪಾಸಣೆ ಮಾಡುವುದಿಲ್ಲ. ವಾಹನದ ಇನ್ನಿತರೆ ದಾಖಲೆ ಪತ್ರಗಳನ್ನೂ ಪರಿಶೀಲನೆ ಮಾಡುತ್ತಾರೆ. ಆಗ ಇನ್ನಿತರ ದಂಡವೂ ಸೇರಿಕೊಳ್ಳುವ ಸಾಧ್ಯತೆಗಳಿರುತ್ತವೆ.  

ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಕೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ದಂಡ ವಿಧಿಸುತ್ತಿಲ್ಲ. ಆದರೆ ಪ್ಲೇಟ್‌ ಅಳವಡಿಕೆ ಮಾಡಿಕೊಳ್ಳದಿದ್ದಲ್ಲಿ ದಂಡ ನಿಶ್ಚಿತ. ಎಲ್ಲರೂ ಆದಷ್ಟು ಬೇಗ ಪ್ಲೇಟ್‌ ಅಳವಡಿಸುವುದು ಸೂಕ್ತ
ಶ್ರೀನಿವಾಸಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT