ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆಪ ಹೇಳಿ ಕಚೇರಿಗೆ ಗೈರಾದರೆ ಸಸ್ಪೆಂಡ್ ಗ್ಯಾರಂಟಿ: ಬಿ.ಸದಾಶಿವ ಪ್ರಭು ಎಚ್ಚರಿಕೆ

Published 27 ಜನವರಿ 2024, 15:54 IST
Last Updated 27 ಜನವರಿ 2024, 15:54 IST
ಅಕ್ಷರ ಗಾತ್ರ

ಹರಪನಹಳ್ಳಿ: ಸ್ಥಳೀಯ ತಾಲ್ಲೂಕು ಪಂಚಾಯಿತಿ ಆವರಣದ ಸಾಮರ್ಥ್ಯ ಸೌಧದಲ್ಲಿ ನಾಲ್ಕನೇ ಶನಿವಾರ ರಜಾದಿನದಲ್ಲೂ ಪ್ರಗತಿ ಪರಿಶೀಲನೆ ನಡೆಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಸದಾಶಿವ ಪ್ರಭು ಅವರು ಕಚೇರಿಗಳಿಗೆ ಗೈರಾಗುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಸಿಇಒ ಬಿ.ಸದಾಶಿವ ಪ್ರಭು ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾಮಗಾರಿ, ಸ್ಥಳ ಪರಿಶೀಲನೆ ಹೆಸರಿಲ್ಲಿ ಕಚೇರಿಗೆ ಗೈರಾದರೆ ಗ್ಯಾರಂಟಿ ಸಸ್ಪೆಂಡ್ ಮಾಡುವುದಾಗಿ ತಿಳಿಸಿದರು.

ಏಳೆಂಟು ಜನ ಪಿಡಿಒಗಳು ದಾವಣಗೆರೆಯಿಂದ ಹೋಗಿ ಬಂದು ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಸರಿಯಾದ ಸಮಯಕ್ಕೆ ಪಂಚಾಯಿತಿಗಳಿಗೆ ಹಾಜರಾಗದಿದ್ದರೆ ಸರ್ಕಾರಿ ಕೆಲಸಗಳು ಹಾಗೂ ಜನರ ಸೇವೆಗಳಿಗೂ ತೊಂದರೆಯಾಗುತ್ತಿದೆ. ಶೀಘ್ರದಲ್ಲೇ ಗ್ರಾಮ ಪಂಚಾಯಿತಿ ಇರುವ ತಾಲೂಕು ಕೇಂಧ್ರದಲ್ಲಿ ಮನೆ ಮಾಡಿ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಅವರಿಂದ ಹಿಡಿದು ಡಿ-ಗ್ರೂಪ್‌ನ ಜವಾನರ ತನಕ ಎಲ್ಲರೂ ಇ-ಹಾಜರಾತಿ ಕಡ್ಡಾಯವಾಗಿ ಹಾಕಬೇಕು. ಬೆಳಗ್ಗೆ ಶೀಘ್ರವಾಗಿಯೂ ನೀವು ಕೆಲಸದ ಸ್ಥಳಗಳಿಗೆ ಹೋದರೂ ಕಚೇರಿಗೆ ಬಂದು ಇ-ಹಾಜರಾತಿ ಹಾಕಬೇಕು. ಇದರ ಆಧಾರದ ಮೇಲೆ ವೇತನ ನೀಡಲಾಗುವುದು ಎಂದರು.

ಅಣಜಿಗೆರೆ, ಹಿರೇಮೇಗಳಗೆರೆ, ಮಾಡ್ಲಗೆರೆ, ಚಿಗಟೇರಿ, ಹಾರಕನಾಳು, ಕಡತಿ, ಪುಣಭಗಟ್ಟ, ಗುಂಡುಗತ್ತಿ, ದುಗ್ಗಾವತಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇವೆ. ಕಾಮಗಾರಿಗಳು ಸಹ ಮಂದಗತಿಯಲ್ಲಿ ಸಾಗುತ್ತಿವೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮಾಹಿತಿ ನೀಡಿದರು.

ಎಇಇ ಕಿರಣ್ ಮಾತನಾಡಿ, ತಾಂತ್ರಿಕ ಸಮಸ್ಯೆ, ಒಎಚ್‌ಟಿ ನಿರ್ಮಿಸಲು ಸ್ಥಳೀಯರ ತಕರಾರು ಇವೆ. ಹೀಗಾಗಿ ಜೆಜೆಎಂ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಿದೆ.

ಅಣಜಿಗೆರೆ ಗ್ರಾಪಂ ವ್ಯಾಪ್ತಿಯ ಮಾದಿಹಳ್ಳಿಯಲ್ಲಿ ಜೆಜೆಎಂ ಕಾಮಗಾರಿ ನಡೆಯುತ್ತಿದ್ದ ವೇಳೆ ಜೆಸಿಬಿ ಮೂಲಕ ನೆಲ ಅಗೆಯುವಾಗ ಸದ್ಯ ನೀರು ಪೂರೈಸುವ ಪೈಪ್ ಹೊಡೆದಿದೆ. ಈ ಬಗ್ಗೆ ಸೆಕ್ಷನ್ ಅಧಿಕಾರಿಗಳಿಗೆ ಎರಡು ತಿಂಗಳ ಹಿಂದೆ ತಿಳಿಸಿದ್ದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಪಿಡಿಒ ಉಮೇಶ ದೂರಿದರು.

ಇದಕ್ಕೆ ಗರಂ ಆದ ಸಿಇಒ ಸದಾಶಿವ ಪ್ರಭು ಅವರು, ‘ಸೆಕ್ಷನ್ ಅಧಿಕಾರಿಗಳು ನಿಮ್ಮ ಮಾತು ಕೇಳಿದಿದ್ದರೆ ಎಇಇ, ಇಒ ಅವರಿಗೂ ಮಾಹಿತಿ ಕೊಡಿ. ಇಷ್ಟು ದಿನ ಕಾಯುವುದರಲ್ಲಿ ಅರ್ಥವಿಲ್ಲ. ಇನ್ನೂ ಪೈಪ್‌ಗಳು ಹೊಡೆದಾಗ 24 ತಾಸಿನೊಳಗೆ ಸರಿಪಡಿಸಬೇಕು ಎಂದು ಸೂಚಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪಂಚಾಯತ್ ರಾಜ್ ಇಲಾಖೆಯ ನಾನಾ ವಿಷಯಗಳು, ಜಲ ಜೀವನ ಮಿಷನ್, ಸ್ವಚ್ಛ ಭಾರತ ಮಿಷನ್, ಯೋಜನಾ ಶಾಖೆ, ಲೆಕ್ಕ ಶಾಖೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ಇಒ ಕೆ.ಆರ್.ಪ್ರಕಾಶ್, ಸಹಾಯಕ ನಿರ್ದೇಶಕರಾದ ಯು.ಎಚ್.ಸೋಮಶೇಖರ, ವೀರಣ್ಣ ಲಕ್ಕಣ್ಣನವರ್, ಯೋಜನಾಧಿಕಾರಿ ನವೀನ್ ಕುಮಾರ, ಎಇಇ ಕಿರಣ್, ವ್ಯವಸ್ಥಾಪಕ ದಾದಾ ಖಲೀಲ್ ‍ಸಾಬ್ ಇದ್ದರು.

ಹರಪನಹಳ್ಳಿ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಜಯನಗರ ಜಿಪಂನ ಸಿಇಒ ಬಿ.ಸದಾಶಿವ ಪ್ರಭು ಅವರು ಮಾತನಾಡಿದರು.
ಹರಪನಹಳ್ಳಿ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಜಯನಗರ ಜಿಪಂನ ಸಿಇಒ ಬಿ.ಸದಾಶಿವ ಪ್ರಭು ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT