ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪ: ಹೆಚ್ಚು ಖರ್ಚಿಲ್ಲದ ಎಳ್ಳು ಬೇಸಾಯ, ಭತ್ತದ ನಾಡಿನಲ್ಲಿ ಪರ್ಯಾಯ ಬೆಳೆ

ಡಿ.ಮಾರೆಪ್ಪ ನಾಯಕ
Published 29 ಮಾರ್ಚ್ 2024, 5:24 IST
Last Updated 29 ಮಾರ್ಚ್ 2024, 5:24 IST
ಅಕ್ಷರ ಗಾತ್ರ

ಸಿರುಗುಪ್ಪ: ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಮಳೆ ಸರಿಯಾಗಿ ಬಾರದ ಪರಿಣಾಮ ನದಿಯಲ್ಲಿ ನೀರಿಲ್ಲದೆ ಬರಗಾರ ಆವರಿಸಿದೆ. ಭತ್ತದ ನಾಡು ತಾಲ್ಲೂಕಿನ ದೇಶನೂರು ಗ್ರಾಮದಲ್ಲಿ ಪ್ರತಿವರ್ಷ ಎರಡು ಬಾರಿ ಭತ್ತದ ಫಸಲು ತೆಗೆಯುತ್ತಿದ್ದ ರೈತ ಮಂಜುನಾಥ ಈ ಬಾರಿ ‌ತಮ್ಮ 4 ಎಕರೆಯಲ್ಲಿ‌ ಬೆಳೆದ ಎಳ್ಳು ಬೆಳೆಯ ಸುವಾಸನೆ ಬೀರಿದೆ.

ಮುಂಗಾರು ಮಳೆ ಕೊರತೆಯಿಂದ ಭತ್ತದ ಬೆಳೆ ಅಷ್ಟಕಷ್ಟೇ ಇತ್ತು. ಹಿಂಗಾರು ಎರಡನೇ ಬೆಳೆಗೆ ನೀರಿಲ್ಲದೆ, ಅಲ್ಪ ತೇವಾಂಶ ಬಳಸಿಕೊಂಡು ಎಳ್ಳು ಬಿತ್ತನೆ ಮಾಡಿ ಬಂಪರ್ ಇಳುವರಿ ನಿರೀಕ್ಷಿಸಲಾಗಿದೆ. ಬೀದರ ಕೃಷಿ ವಿಶ್ವವಿದ್ಯಾಲಯದ ಡಾ.ಜಾದವ್ ಅವರು ಸುಧಾರಿತ ಶ್ವೇತ ತಳಿ ಶಿಫಾರಸ್ಸು ಮೇರೆಗೆ ಮಂಜುನಾಥ 4 ಕೆ.ಜಿ ನಾಟಿ ಮಾಡಿದ್ದಾರೆ. 

ಪ್ರಸ್ತುತ ದಿನಮಾನಗಳಲ್ಲಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ, ಶೇಂಗಾ ಖಾದ್ಯ ತೈಲ ಬೆಲೆ ಹೆಚ್ಚಿದ್ದು, ಅದೇ ರೀತಿ ಎಳ್ಳು ಉತ್ಪನ್ನದ ಬೆಲೆ ಯಾವತ್ತಿಗೂ ಕಡಿಮೆ ಆಗಿಲ್ಲ. ಈ ಬಾರಿ ಮಳೆಯ ಕೋರತೆಯಿಂದಾಗಿ ಬೆಳೆ ಪರಿವರ್ತನೆಗಾಗಿ ಕಡಿಮೆ ನೀರಿನಲ್ಲಿ ಎಳ್ಳು ಬೆಳೆ ಬೆಳೆಯಲಾಗಿದೆ, ಈ ಹಿನ್ನೆಲೆಯಲ್ಲಿ ಸಮೃದ್ಧ ಬೆಳೆ ನಿರೀಕ್ಷಿಸಲಾಗಿದೆ.

ಈ ಜಮೀನಿನಲ್ಲಿ ಇದೇ ಬೆಳೆ ಮೊದಲಾಗಿದ್ದು, ಬಿತ್ತನೆಯು ಸಹ ಅಚ್ಚುಕಟ್ಟಾಗಿ ಸಾಲಿನಿಂದ ಸಾಲಿಗೆ 2 ಅಡಿ ಇದ್ದು, ಸಾಕಷ್ಟು ಗಾಳಿ ಬೆಳಕಿನ ಅವಕಾಶ ಇರುವ ಹಿನ್ನೆಲೆಯಲ್ಲಿ ರೋಗ ಬಾಧಿಸಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಬಿಳಿ ಎಳ್ಳು ಧಾರಣೆ ₹14 ಸಾವಿರದಿಂದ ₹15 ಸಾವಿರದಷ್ಟಿದೆ.

‘ಎಕರೆಗೆ ಒಂದು ಕೆ.ಜಿ ಬಿಳಿಎಳ್ಳಿನ ಬೀಜಗಳನ್ನು ಬಿತ್ತನೆ ಮಾಡಿದ್ದು, ಯಾವುದೇ ರಾಸಾಯನಿಕ ಗೊಬ್ಬರ ಇಲ್ಲದೆ ಬೆಳೆಸಿದೆ. 2 ಬಾರಿ ಮಾತ್ರ ಕುಂಟೆ ಹೊಡೆದಿರುವುದು ಬಿಟ್ಟರೆ, ಕೀಟನಾಶಕಗಳೂ ಸಿಂಪರಣೆ ಮಾಡಿಲ್ಲ. ತೇವಾಂಶದಲ್ಲಿ ಪೈರು ಸಮೃದ್ಧಿಯಾಗಿ ಬೆಳೆದಿದೆ. ಎರಡೂವರೆಯಿಂದ ಮೂರು ತಿಂಗಳಲ್ಲಿ ಕೊಯ್ಲಿಗೆ ಬಂದಿದೆ. ಕೊಯ್ದ ಎಳ್ಳು ಪೈರುಗಳನ್ನು ಏಳು ದಿನ ಮುಗ್ಗು ಹಾಕಿ. ನಂತರ ಮೂರು ದಿನ ಬಿಸಿಲಿಗೆ ಹಾಕಿ ಬಡಿದರೆ ಎಳ್ಳು ಮಾರಾಟಕ್ಕೆ ರೆಡಿ. ಬೆಳೆ ಚೆನ್ನಾಗಿ ಬಂದರೆ ಎಕರೆಗೆ ಐದು ಕ್ವಿಂಟಲ್ ಇಳುವರಿ ಪಡೆಯಬಹುದು. ಕಳೆದ ವರ್ಷ ಕೆ.ಜಿ ಎಳ್ಳಿಗೆ ₹195 ಬೆಲೆ ಇತ್ತು. ಎಳ್ಳಿಗೆ ಬೇಡಿಕೆ ಇದ್ದೇ ಇರುತ್ತದೆ. ಎಳ್ಳು ಹೆಚ್ಚು ಖರ್ಚಿಲ್ಲದ ಬೆಳೆ’ ಅನ್ನುತ್ತಾರೆ ಮಂಜುನಾಥ ಅವರ ಪತ್ನಿ  ಪಕ್ಕಿರಮ್ಮ.

ಬರಪೀಡಿತ ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಪರ್ಯಾಯವಾಗಿ ಬಿಳಿ ಎಳ್ಳು ಬೆಳೆಯನ್ನು ಬೆಳೆದ ಪ್ರಗತಿಪರ ರೈತ ಮಂಜುನಾಥ ಅವರಿಗೆ ಒಳ್ಳೆಯ ಲಾಭದ ನಿರೀಕ್ಷೆ ಇದೆ.
–ಎಂ.ಬಿ.ಪಾಟೀಲ್, ಎ.ಡಿ.ಕೃಷಿ ಇಲಾಖೆ ಸಿರುಗುಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT