ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಒನ್‌ನಲ್ಲಿ ‘ಆಭಾ’ ಕಾರ್ಡ್‌ ನೋಂದಣಿ ಕಡ್ಡಾಯ

ಬಿಪಿಎಲ್‌ ಕಾರ್ಡುದಾರರಿಗೆ ₹5 ಲಕ್ಷದ ವರೆಗೆ ಉಚಿತ ಚಿಕಿತ್ಸಾ ಸೌಲಭ್ಯ
Last Updated 18 ಅಕ್ಟೋಬರ್ 2022, 3:54 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಜಿಲ್ಲೆಯಲ್ಲಿ 108 ಗ್ರಾಮ ಒನ್ ಪ್ರಾಂಚೈಸಿಗಳಿದ್ದು, ಪ್ರತಿಯೊಂದರಲ್ಲೂ ದಿನಕ್ಕೆ ಸಾವಿರ ‘ಆಭಾ’ (ಆಯುಷ್ಮಾನ್‌ ಭಾರತ್‌) ಕಾರ್ಡ್ ನೋಂದಣಿ ಕಡ್ಡಾಯವಾಗಿ ಮಾಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವಿ. ಪ್ರಕಾಶ್‌ ತಿಳಿಸಿದರು.

‘ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ’ ಆರೋಗ್ಯ ಸೇವೆ ಕಾರ್ಡ್‍ಗಳಿಗೆ ಸಂಬಂಧಿಸಿದಂತೆ ಸೋಮವಾರ ನಗರದ ವಿಡಿಯೊ ಕಾನ್ಪರೆನ್ಸ್‌ನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 14 ಲಕ್ಷ ಜನಸಂಖ್ಯೆ ಇದೆ. ಎಲ್ಲ ಪ್ರಾಂಚೈಸಿಗಳಲ್ಲಿ ನೋಂದಣಿ ಮಾಡಿದರೆ ಎರಡು ವಾರದೊಳಗೆ ಮುಗಿಯಬಹುದು ಎಂದರು.

‘ಆಯುಷ್ಮಾನ್ ಭಾರತ್’ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಬಡವರಿಗೆ ಈ ಕಾರ್ಡ್‌ ಸಿಕ್ಕರೆ ₹5 ಲಕ್ಷದ ವರೆಗೆ ಚಿಕಿತ್ಸೆ ಉಚಿತ ಪಡೆಯಬಹುದು. ಪ್ರತಿಯೊಬ್ಬ ನಾಗರಿಕರಿಗೆ ಆರೋಗ್ಯ ಕಾರ್ಡ್‌ ವಿತರಿಸಲು ಗ್ರಾಮ್‌ ಒನ್‌ ಪ್ರಾಂಚೈಸಿದಾರರು ನ್ಯಾಯಬೆಲೆ ಅಂಗಡಿಯವರ ಸಹಕಾರದೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಆರೋಗ್ಯ ಕಾರ್ಡ್‌ ಪಡೆದ ಬಿಪಿಎಲ್ ಕುಟುಂಬಕ್ಕೆ 1 ವರ್ಷಕ್ಕೆ ಗರಿಷ್ಠ ₹5 ಲಕ್ಷದ ವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಸಿಗಲಿದೆ. ಎಪಿಎಲ್ ಕುಟುಂಬಕ್ಕೆ ಪಾವತಿ ಆಧಾರದ ಮೇಲೆ ಚಿಕಿತ್ಸಾ ವೆಚ್ಚದ ಶೇ 30ರಷ್ಟು ರಿಯಾಯಿತಿ, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ಗರಿಷ್ಠ ₹1.50 ಲಕ್ಷದ ವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಸಿಗಲಿದೆ ಎಂದರು.

ವಸತಿ ಶಾಲೆಗಳಾದ ಮೊರಾರ್ಜಿ ದೇಸಾಯಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ನೋಂದಣಿ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳ ಸ್ಥಳ, ಗ್ರಾಮ ಪಂಚಾಯತಿ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಿಗೆ ಗ್ರಾಮ ಒನ್‍ ಪ್ರಾಂಚೈಸಿದಾರರು, ನ್ಯಾಯಬೆಲೆ ಅಂಗಡಿಯವರು ತೆರಳಿ ಆರೋಗ್ಯ ಕಾರ್ಡ್‍ನ್ನು ವಿತರಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಗುರುಬಸವರಾಜ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ವಿರುಪಾಕ್ಷಪ್ಪ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ರಮೇಶ್, ಆಹಾರ ಶಿರಸ್ತೇದಾರ್ ಎಚ್.ನಾಗರಾಜ, ಗ್ರಾಮ ಒನ್‌ ಜಿಲ್ಲಾ ಸಹಾಯಕರು, ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT