ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ | ಮಳೆ ಕೊರತೆ: ಮಲ್ಲಿಗೆ ನಾಡಿನಲ್ಲಿ ಬರದ ಛಾಯೆ

Published 27 ಆಗಸ್ಟ್ 2023, 8:37 IST
Last Updated 27 ಆಗಸ್ಟ್ 2023, 8:37 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಮಳೆ ಕೊರತೆ ತೀವ್ರವಾಗಿದೆ. ಸದ್ಯ ಮಳೆ ಸುರಿದರೂ ಬೆಳೆಗಳು ಚೇತರಿಸಿಕೊಳ್ಳದ ಸ್ಥಿತಿ ತಲುಪಿವೆ. ತೇವಾಂಶ ಕೊರತೆಯಿಂದ ಪೈರು ಕಳೆಗುಂದಿದಂತೆ ರೈತರ ಮುಖಗಳೂ ಬಾಡಿವೆ.

ಕಳೆದ ತಿಂಗಳು ಅತೀವೃಷ್ಟಿ, ಈಗ ಅನಾವೃಷ್ಟಿ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಹಿಂದಿನ ತಿಂಗಳು ಮಳೆ ಹೆಚ್ಚಾಗಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿದ್ದವು. ರೈತರು ಹರಸಾಹಸಪಟ್ಟು ಬೆಳೆಗಳನ್ನು ಉಳಿಸಿಕೊಂಡಿದ್ದರು. ಈಗ ಸಂದಿಗ್ದ ಸ್ಥಿತಿಯಲ್ಲಿ ವರುಣನ ಅವಕೃಪೆಯಿಂದ ರೈತರು ಕಂಗಾಲಾಗಿದ್ದಾರೆ. ಮಲ್ಲಿಗೆ ನಾಡಿನಲ್ಲಿ ಬರದ ಛಾಯೆ ದಟ್ಟವಾಗಿದೆ.

ತಾಲ್ಲೂಕಿನಲ್ಲಿ ಮೆಕ್ಕೆಜೋಳ ಪ್ರಧಾನ ಬೆಳೆ. ಬಿತ್ತನೆಯಾದ ಒಟ್ಟು ವಿಸ್ತೀರ್ಣದಲ್ಲಿ ಮುಕ್ಕಾಲು ಭಾಗ ಮೆಕ್ಕೆಜೋಳ ಬೆಳೆ ಇದೆ. ತೆನೆ ಮೂಡುವ, ಕಾಳುಕಟ್ಟುವ ಈ ಹಂತದಲ್ಲಿ ಉತ್ತಮ ಮಳೆಯಾಗಿದ್ದರೆ ಈ ವರ್ಷ ಭರಪೂರ ಫಸಲು ರೈತರ ಕೈ ಸೇರುತಿತ್ತು. ಆದರೆ, ಮಳೆರಾಯನ ಮುನಿಸು ರೈತರ ಎಲ್ಲ ನಿರೀಕ್ಷೆಯನ್ನು ಹುಸಿಯಾಗಿಸಿದೆ.

ತಾಲ್ಲೂಕಿನ 94,853 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣದಲ್ಲಿ 59 ಸಾವಿರ ಹೆಕ್ಟೇರ್ ಸಾಗುವಳಿ ಯೋಗ್ಯ ಭೂಮಿ ಇದೆ. ಪ್ರಸಕ್ತ ವರ್ಷ ಕೃಷಿ ಇಲಾಖೆ 52,994 ಹೆಕ್ಟೇರ್ ಬಿತ್ತನೆ ಗುರಿ ನಿಗದಿಗೊಳಿಸಿದ್ದರೆ 50,036 ಹೆಕ್ಟೇರ್ (ಶೇ 97) ಬಿತ್ತನೆಯಾಗಿದೆ. 34 ಸಾವಿರ ಹೆಕ್ಟೇರ್ ಮೆಕ್ಕೆಜೋಳ, 1,240 ಹೆಕ್ಟೇರ್ ಜೋಳ, 4,300 ಹೆಕ್ಟೇರ್ ಭತ್ತ, 1,600 ಹೆಕ್ಟೇರ್ ತೊಗರಿ, 1080 ಹೆಕ್ಟೇರ್ ಸೂರ್ಯಕಾಂತಿ, 2820 ಹೆಕ್ಟೇರ್ ಕಬ್ಬು, 800 ಹೆಕ್ಟೇರ್ ಶೇಂಗಾ, 600 ಹೆಕ್ಟೇರ್ ರಾಗಿ, 900 ಹೆಕ್ಟೇರ್ ಸಜ್ಜೆ ಬಿತ್ತನೆಯಾಗಿದೆ.

ಪ್ರಸಕ್ತ ಮುಂಗಾರು 19.8 ಸೇಂ.ಮೀ ವಾಡಿಕೆ ಮಳೆ ಸುರಿಯಬೇಕಿದ್ದರೆ 15.0 ಸೇಂ.ಮೀ. ಮಳೆ ಸುರಿದಿದ್ದು, ಶೇ24ರಷ್ಟು ಮಳೆ ಕೊರತೆ ಉಂಟಾಗಿದೆ.

ಸದ್ಯ ಮಳೆ ಸುರಿದರೂ ಚೇತರಿಸಿಕೊಳ್ಳಲಾರದ ಬೆಳೆಯನ್ನು ತಾಲ್ಲೂಕಿನ ರೈತರು ನಾಶಪಡಿಸುತ್ತಿದ್ದಾರೆ. ಉತ್ತಂಗಿ ಗ್ರಾಮದ ಮಹಾಜನದಹಳ್ಳಿ ಮಲ್ಲಿಕಾರ್ಜುನ ಎಂಬ ರೈತ ಐದು ಎಕರೆ ಮೆಕ್ಕೆಜೋಳವನ್ನು ಕಿತ್ತು ಹಾಕಿದ್ದಾರೆ. ಹಲವು ರೈತರು ಒಣಗಿದ ಬೆಳೆಯನ್ನು ರೂಟರ್ ಹೊಡೆದು ಹಿಂಗಾರು ಬೆಳೆಗಳಿಗೆ ಭೂಮಿ ಸಜ್ಜುಗೊಳಿಸುತ್ತಿದ್ದಾರೆ.

‘ಬೀಜ ಗೊಬ್ಬರ ಖರೀದಿಗೆ ಸಾಲ ಮಾಡಿಕೊಂಡಿರುವ ರೈತರ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಸರ್ಕಾರ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ, ಬೆಳೆನಷ್ಟಕ್ಕೀಡಾಗಿರುವ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಕೃಷಿ ಸಾಲಗಳನ್ನು ಸರ್ಕಾರ ಮನ್ನಾ ಮಾಡಬೇಕು’ ಎಂದು ರೈತ ಮುಖಂಡ ಅಂಚಿ ಮಂಜುನಾಥ ಆಗ್ರಹಿಸಿದ್ದಾರೆ.

ಹೂವಿನಹಡಗಲಿ ತಾಲ್ಲೂಕು ಉತ್ತಂಗಿಯಲ್ಲಿ ಒಣಗಿದ ಮೆಕ್ಕೆಜೋಳವನ್ನು ರೈತರು ಕಿತ್ತು ಮೇವಿಗಾಗಿ ಸಾಗಿಸಿದರು
ಹೂವಿನಹಡಗಲಿ ತಾಲ್ಲೂಕು ಉತ್ತಂಗಿಯಲ್ಲಿ ಒಣಗಿದ ಮೆಕ್ಕೆಜೋಳವನ್ನು ರೈತರು ಕಿತ್ತು ಮೇವಿಗಾಗಿ ಸಾಗಿಸಿದರು
ಮಳೆ ಕೊರತೆಯಿಂದ ತಾಲ್ಲೂಕಿನ 15200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ವರದಿ ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುತ್ತೇವೆ.
ಮಹ್ಮದ್ ಆಶ್ರಫ್ ಸಹಾಯಕ ಕೃಷಿ ನಿರ್ದೇಶಕ ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT