ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾನಾಡಿ ಆವಾಸಕ್ಕೆ ನಡುಗಡ್ಡೆಗಳ ಆಸರೆ’

ಪಕ್ಷಿಧಾಮದಲ್ಲಿ ಭರದಿಂದ ಸಾಗಿದೆ ನಿರ್ಮಾಣ ಕಾರ್ಯ
Published 17 ಮಾರ್ಚ್ 2024, 4:52 IST
Last Updated 17 ಮಾರ್ಚ್ 2024, 4:52 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ‘ರಾಮ್‍ಸರ್’ ಪ್ರದೇಶದ ಹೆಗ್ಗಳಿಕೆ ಹೊಂದಿರುವ ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ದೇಶ ವಿದೇಶಗಳಿಂದ ವಲಸೆ ಬರುವ ಪಕ್ಷಿಗಳ ಬದುಕಿನ ರಕ್ಷಣೆಗೆ ಮತ್ತು ಗೂಡುಗಳನ್ನು ಕಟ್ಟಿಕೊಂಡು ಸಂತಾನೋತ್ಪತ್ತಿಗೆ ಅನುಕೂಲವಾಗುವಂತೆ ಅರಣ್ಯ ಇಲಾಖೆ ಫಲವತ್ತಾದ ಮಣ್ಣಿನಿಂದ ನಡುಗಡ್ಡೆಗಳ(ಐಲ್ಯಾಂಡ್) ನಿರ್ಮಾಣಕ್ಕೆ ಮುಂದಾಗಿದೆ.

244 ಎಕರೆ ಪ್ರದೇಶದಲ್ಲಿ ಕರಿಜಾಲಿ ಗಿಡಗಳಲ್ಲೇ ಇದುವರೆಗೂ ವಾಸ್ತವ್ಯ ಕಂಡುಕೊಂಡಿದ್ದ ಬಾನಾಡಿಗಳಿಗೆ ನಿರಂತರ ನಿಲುಗಡೆಗೊಂಡಿರುವ ನೀರಿನಿಂದಾಗಿ ಜಾಲಿಗಿಡಗಳು ಕೊಳೆತು ಅಲ್ಲಲ್ಲೇ ನೆಲಕ್ಕೆ ಬೀಳುವ ಸ್ಥಿತಿಯಲ್ಲಿವೆ, ಕೆಲವು ನೆಲಕ್ಕೊರಗಿವೆ.

ಇದರಿಂದಾಗಿ ಪಕ್ಷಿಗಳ ಜೀವ ವೈವಿಧ್ಯತೆಗೆ ತೊಂದರೆ ಆಗದಿರಲೆಂದು ಕೆರೆ ಪ್ರದೇಶದಲ್ಲಿ ಸಂಗ್ರಹಗೊಂಡಿದ್ದ ನೀರು ಬತ್ತಿಹೋಗುವ ಸಮಯದಲ್ಲಿಯೇ ನಡುಗಡ್ಡೆ ನಿರ್ಮಿಸಲಾಗುತ್ತಿದೆ. ಈಚೆಗೆ ಪಕ್ಷಿ ತಜ್ಞರು ನಡೆಸಿದ ಗಣತಿ ಕಾರ್ಯದಲ್ಲಿ ಸ್ಥಳೀಯ ಮತ್ತು ದೇಶ-ವಿದೇಶಗಳ 168 ಪ್ರಭೇದಗಳ 48,825 ಪಕ್ಷಿಗಳು ಪತ್ತೆಯಾಗಿದ್ದವು.

ವಾಸ್ತವ್ಯಹೂಡಿರುವ ಪಕ್ಷಿಗಳು ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ಆಹಾರ ಅರಸಿ ಹೋದ ಬಳಿಕ ಯಂತ್ರದಿಂದ ಕಾಮಗಾರಿ ಆರಂಭಿಸಲಾಗುತ್ತಿದೆ, ಬಾನಾಡಿಗಳು ಮತ್ತೆ ತಮ್ಮ ಗಮ್ಯ ಸ್ಥಾನವನ್ನು ತಲುಪುವ ಮುಂಚೆಯೇ ಯಂತ್ರದ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಬಣ್ಣದ ಕೊಕ್ಕರೆ(ಪೇಂಟೆಡ್ ಸ್ಟಾರ್ಕ್) ಸಂತಾನೋತ್ಪತ್ತಿಗೆ, ಅಪಾರ ಸಂಖ್ಯೆಯಲ್ಲಿ ವಾಸ್ತವ್ಯ ಹೂಡಿರುವ ಓಪನ್ ಬಿಲ್ ಸ್ಟಾರ್ಕ್(ಬಾಯ್ಕಳಕ)ಗಳಿಗೆ ಯಾವುದೇ ತೊಂದರೆ ಆಗದಂತೆ ನಡುಗಡ್ಡೆ ನಿರ್ಮಾಣಕ್ಕೆ ಕಾರ್ಮಿಕರು ಮುಂದಾಗಿದ್ದಾರೆ. ನೀರು ಬತ್ತಿ ಹೋಗುತ್ತಿರುವ ಸಮಯವನ್ನು ಬಳಸಿಕೊಂಡಿದ್ದಾರೆ.

‘ಗಡ್ಡೆಯ ಮಧ್ಯದಲ್ಲಿ ಜಾಲಿ ಬೀಜಗಳನ್ನು ನೆಟ್ಟು ನೀರು ಹಾಕಿ ಜತನ ಮಾಡಲಾಗುತ್ತದೆ. ಏಳು ದಿನಗಳಲ್ಲಿ 6 ನಡುಗಡ್ಡೆಗಳನ್ನು 30 ಮೀಟರ್ ಅಂತರದಲ್ಲಿ ನಿರ್ಮಿಸಲಾಗಿದೆ. ಮೂರು ವರ್ಷಗಳ ಹಿಂದೆ 40ಕ್ಕೂ ಹೆಚ್ಚು ನಡೆಗಡ್ಡೆಗಳನ್ನು ನಿರ್ಮಿಸಲಾಗಿತ್ತು, ಮುಂದಿನ ದಿನಗಳಲ್ಲಿ ಇನ್ನೂ 54 ನಿರ್ಮಿಸುವ ಗುರಿ ಇದೆ. ಆಗ ಪಕ್ಷಿಗಳು ಎಲ್ಲೆಂದರಲ್ಲಿ ವಾಸ್ತವ್ಯಕ್ಕೆ, ಸಂತಾನೋತ್ಪತ್ತಿ ಮಾಡಲು ಯಾವುದೇ ತೊಂದರೆ ಆಗುವುದಿಲ್ಲ‘ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಪರಿಸರ ತಜ್ಞರ ಸಲಹೆ ಆಧಾರಿಸಿ ಕಾರ್ಯ

ಮೇಲಧಿಕಾರಿಗಳು ಮತ್ತು ಪರಿಸರ ತಜ್ಞರ ಸಲಹೆ ಪಡೆದು ನಡುಗಡ್ಡೆಗಳನ್ನು ನಿರ್ಮಿಸಲಾಗಿದೆ. 60 ನಡುಗಡ್ಡೆಗಳನ್ನು ನಿರ್ಮಿಸಬೇಕು ಎಂದು ತಿಳಿಸಿದ್ದಾರೆ. ‘ಈಗ 6 ಪೂರ್ಣಗೊಂಡಿವೆ ಇನ್ನೂ 56 ನಿರ್ಮಿಸಲಾಗುವುದು. ನಡುಗಡ್ಡೆಯ ಸುತ್ತಲೂ ಕತ್ತಾಳೆ ಹಾಕಲಾಗುವುದು ಮಣ್ಣು ಸವಕಳಿ ಆಗದಂತೆ ಗಿಡಗಳನ್ನು ನೆಡಲಾಗುವುದು. ಹಸಿರು ಹುಲ್ಲು ಬೆಳೆಸಲಾಗುವುದು ಆಗ ಅದು ಗಟ್ಟಿಯಾಗುತ್ತದೆ’ ಎಂದು ವಲಯ ಅರಣ್ಯ ಅಧಿಕಾರಿ ರೇಣುಕಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT