ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ವಾಪಸ್‌ಗೆ ರೈತರ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಮುಂದೆ ಭೂ ಸಂತ್ರಸ್ತರ ಪ್ರತಿಭಟನೆ
Published 1 ಜುಲೈ 2023, 7:42 IST
Last Updated 1 ಜುಲೈ 2023, 7:42 IST
ಅಕ್ಷರ ಗಾತ್ರ

ಬಳ್ಳಾರಿ: ಬ್ರಹ್ಮಿಣಿ ಸ್ಟೀಲ್ಸ್ (ಉತ್ತಮ್ ಗಾಲ್ವಾ) ಕೈಗಾರಿಕೆ ಸ್ಥಾಪಿಸಲು ಸ್ವಾಧೀನ ಮಾಡಿಕೊಂಡಿರುವ ಜಮೀನಿನನ್ನು 13 ವರ್ಷಗಳಾದರೂ ಬೀಳು ಬಿಟ್ಟಿರುವ ಕಾರಣ ರೈತರಿಗೆ ವಾಪಸ್ ಕೊಡಬೇಕು, ಇಲ್ಲವೇ ಸದ್ಯದ ಮಾರುಕಟ್ಟೆ ದರದಲ್ಲಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಭೂ ಸಂತ್ರಸ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

‘ಕೈಗಾರಿಕೆ ಸ್ಥಾಪನೆ ಮಾಡಿ ಭೂಮಿ ಕಳೆದುಕೊಂಡ ರೈತರ ಪ್ರತಿ ಕುಟುಂಬಕ್ಕೆ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, 13 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿ, ಕೆಐಎಡಿಬಿಗೆ ಅಲೆದಲೆದು ಸಾಕಾಗಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ಈಚೆಗೆ ಎಡಿಸಿ, ಜಿಲ್ಲಾ ಮಾಲಿನ್ಯ ನಿಯಂತ್ರಣ ಅಧಿಕಾರಿ ಹಾಗೂ ಉತ್ತಮ್ ಗಾಲ್ವಾ ಕಂಪನಿ ಪ್ರತಿನಿಧಿ ಸಮ್ಮುಖದಲ್ಲಿ ಅಭಿಪ್ರಾಯ ಕೇಳಲು ಕರೆದಿದ್ದ ಸಭೆಯಲ್ಲಿ ಬೇಡಿಕೆ ಮಂಡಿಸಿ ರೈತರು ಹೊರ ನಡೆದಿದ್ದರು.

ಶುಕ್ರವಾರ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಡೂರು ಶಾಸಕರ ಸಮ್ಮುಖದಲ್ಲಿ ಸಭೆ ನಡೆಸುವುದಾಗಿ ಪ್ರಕಟಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಕಚೇರಿಗೆ ಸುಮಾರು 200 ರೈತರು ಬಂದಾಗ ಸಭೆ ಮುಂದೂಡಿದ್ದಾಗಿ ಹೇಳಲಾಯಿತು.

ಜಿಲ್ಲಾಡಳಿತದ ವರ್ತನೆ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದರು. ‘ಸಭೆ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಆನಂತರ ತಿಳಿಸುವುದಾಗಿ ಅಭಿಪ್ರಾಯ ಸಂಗ್ರಹ ಮಾಡಲು ಕರೆದಿದ್ದ ಸಭೆಯಲ್ಲೇ ತಿಳಿಸಲಾಗಿತ್ತು. ಆದರೂ ರೈತರು ಬಂದಿದ್ದರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್‌ ಜುಬೇರ ಪ್ರಜಾವಾಣಿಗೆ ತಿಳಿಸಿದರು.

ಬಳ್ಳಾರಿ ತಾಲೂಕಿಗೆ ಸೇರಿದ ಕುಡತಿನಿ, ವೇಣಿ ವೀರಾಪುರ, ಹರಗಿನಡೋಣಿ, ಕೊಳಗಲ್ಲು, ಯರ್ರಂಗಳಿ ಗ್ರಾಮಗಳಿಗೆ ಸೇರಿದ ಬಹುತೇಕ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ದೇವದಾಸಿ ಮಹಿಳೆಯರ ಸುಮಾರು 4,750 ಕ್ಕೂ ಅಧಿಕ ಎಕರೆ ಜಮೀನುಗಳನ್ನು ರೈತರ ಒಪ್ಪಿಗೆ ಇಲ್ಲದೆ ಕಳೆದ 2010-11ನೇ ಸಾಲಿನಲ್ಲಿಯೇ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದುವರೆಗೆ ಕೈಗಾರಿಕೆ ನಿರ್ಮಿಸಲಿಲ್ಲ. ಕಂಪನಿ ಮಾಲೀಕರುಗಳ ಜೊತೆ ಶಾಮೀಲಾಗಿ ಅಗ್ಗದ ದರ ನಿಗದಿಪಡಿಸಿ ರೈತರಿಗೆ ವಂಚಿಸಲಾಗಿದೆ ಎಂದು ಪ್ರತಿಭಟನಕಾರರು ದೂರಿದರು.

ಮುಖಂಡರಾದ ಯು.ಬಸವರಾಜ್, ವಿ.ಎಸ್.ಶಿವಶಂಕರ್, ಜೆ.ಎಂ.ಚನ್ನಬಸಯ್ಯ, ಗಾಳಿ ಬಸವರಾಜ್, ಸತ್ಯಬಾಬು, ಎಂ.ತಿಪ್ಪೇಸ್ವಾಮಿ, ಕನಕಪ್ಪ, ಗೋಪಾಲ್, ನಾಗದೇವ, ಶಿವಕುಮಾರ್ ಹಾಗೂ ಭೂ ಸಂತ್ರಸ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT