ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜಿಲ್ಲೆಯ ಜನ ಸಂವೇದನೆಯನ್ನೇ ಕಳೆದುಕೊಂಡರೆ?

ಎಸ್ಪಿಗೆ ಹೆದರಿ ಊರು ಬಿಟ್ಟರು
Last Updated 6 ನವೆಂಬರ್ 2022, 4:51 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯ ಜನ ಸಂವೇದನೆಯನ್ನೇ ಕಳೆದುಕೊಂಡರೆ?

ಒಂದು ವರ್ಷದ ಕಿರು ಅವಧಿಯಲ್ಲಿ ಜಿಲ್ಲೆಯ ಆಡಳಿತ, ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದಿದ್ದ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಸಿಂಹಸ್ವಪ್ನರಾಗಿದ್ದ ಎಸ್ಪಿ ಡಾ. ಅರುಣ್‌ ಕೆ. ಅವರನ್ನು ರಾಜ್ಯ ಸರ್ಕಾರ ಏಕಾಏಕಿ ಬೇರೆಡೆ ಸ್ಥಳ ತೋರಿಸದೇ ವರ್ಗಾವಣೆಗೊಳಿಸಿ ಕೆಟ್ಟದಾಗಿ ನಡೆಸಿಕೊಂಡಿತು. ಆದರೆ, ಜಿಲ್ಲೆಯ ಜನ ಅದಕ್ಕೆ ಪ್ರತಿಕ್ರಿಯಿಸಿದ ರೀತಿ ನೋಡಿದರೆ ಅವರು ಸಂವೇದನೆ ಕಳೆದುಕೊಂಡರೆ ಎಂಬ ಅನುಮಾನ ಮೂಡುವುದು ಸಹಜ.

ಶುಕ್ರವಾರ ಸಂಜೆ ಇಬ್ಬರೂ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದರು. ಶನಿವಾರ ಇದರ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ, ಅದು ಬೆರಳೆಣಿಕೆಯ ಜನರಿಗಷ್ಟೇ ಸೀಮಿತವಾಗಿತ್ತು. ಜನರ ಹೋರಾಟಗಳೆದುರು ಸರ್ಕಾರ ಮಂಡಿಯೂರಿದ ಅನೇಕ ನಿದರ್ಶನಗಳು ನಮ್ಮ ನಡುವೆ ಇವೆ. ಆದರೆ, ವಿಜಯನಗರದ ಜನ ಅದನ್ನು ಮರೆತಂತಿದೆ.

ಅನಿರುದ್ಧ್‌, ಅರುಣ್‌ ಅವರಂತೆಯೇ ಜನಪರ ಕೆಲಸ ಮಾಡುವುದರ ಮೂಲಕ ಜನಾನುರಾಗಿಯಾಗಿದ್ದ ಹರ್ಷ ಗುಪ್ತಾ ಅವರು 2008ರಲ್ಲಿ ಬೀದರ್‌ ಜಿಲ್ಲಾಧಿಕಾರಿಯಾಗಿದ್ದರು. ರಾಜಕೀಯ ದುರುದ್ದೇಶದಿಂದ ಅವರನ್ನು ವರ್ಗಾವಣೆಗೊಳಿಸಲಾಗಿತ್ತು. ಆದರೆ, ಇಡೀ ಜಿಲ್ಲೆಯ ಜನ ಅವರ ಬೆಂಬಲಕ್ಕೆ ನಿಂತಿದ್ದರು. ಬೀದರ್‌ ಬಂದ್‌ ಮಾಡಿದ್ದರು. ಇಂಥದ್ದೇ ಘಟನೆ ರಾಯಚೂರಿನಲ್ಲಿ ನಡೆದಿತ್ತು. ಶಶಿಕಾಂತ ಸೆಂಥಿಲ್‌ ಅವರನ್ನು ನಾಲ್ಕು ಸಲ ವರ್ಗಾವಣೆ ಮಾಡಲಾಗಿತ್ತು. ನಾಲ್ಕೂ ಸಲ ಜಿಲ್ಲೆಯ ಜನ ಹೋರಾಟ ನಡೆಸಿ ಅವರನ್ನು ಜಿಲ್ಲೆಯಲ್ಲೇ ಉಳಿಸಿಕೊಂಡಿದ್ದರು. ಅಂಥ ಸಣ್ಣ ಪ್ರಯತ್ನದ ದನಿಯೂ ವಿಜಯನಗರದಲ್ಲಿ ಬರಲಿಲ್ಲ. ಜನರಿಗಾಗಿ ಕೆಲಸ ಮಾಡುತ್ತಿರುವವರಿಗೆ ನೈತಿಕ ಬೆಂಬಲ ನೀಡುವುದು ಜನರ ಕರ್ತವ್ಯವಲ್ಲವೇ?

ಅನಿರುದ್ಧ್‌, ಅರುಣ್‌ ಮಾಡಿದ್ದೇನು?: ಅನಿರುದ್ಧ್‌ ಅವರು ಜಿಲ್ಲಾಧಿಕಾರಿಯಾಗಿ ಬಂದ ನಂತರ ಜಿಲ್ಲೆಯಲ್ಲಿ ಆಡಳಿತ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗೆ ಮುಂದಾದರು. ಸಾರ್ವಜನಿಕರ ಕಡತಗಳ ವಿಲೇವಾರಿ ತ್ವರಿತಗೊಳಿಸಿದರು. ಅದರಿಂದ ಒಂದೇ ವರ್ಷದಲ್ಲಿ ವಿಜಯನಗರ ಜಿಲ್ಲೆ ಸಕಾಲದಲ್ಲಿ ರಾಜ್ಯದಲ್ಲೇ 3ನೇ ಸ್ಥಾನಕ್ಕೇರಿತ್ತು. ಇನ್ನು, ಎಲ್ಲ ವರ್ಗದವರ ಮಕ್ಕಳಿಗೆ ಐಎಎಸ್‌, ಐಪಿಎಸ್‌, ಕೆಎಎಸ್‌ ಸೇರಿದಂತೆ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಸ್ಫೂರ್ತಿ’ ಯೋಜನೆಯಡಿ ಉಚಿತವಾಗಿ ತರಬೇತಿ ಆರಂಭಿಸಿದರು. ಈಗಲೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಡೆಯುತ್ತಿದೆ. ಅನೇಕ ಗ್ರಾಮೀಣ ಬಡ ವಿದ್ಯಾರ್ಥಿಗಳು ಅದರ ಲಾಭ ಪಡೆಯುತ್ತಿದ್ದಾರೆ.

ಇನ್ನು, ಜಿಲ್ಲೆಯಲ್ಲಿ ಟೆಂಡರ್‌ ಇಲ್ಲದೆ ಕಾಮಗಾರಿ ಕೈಗೆತ್ತಿಕೊಳ್ಳುವುದು ಸಾಮಾನ್ಯವಾಗಿತ್ತು. ಅದಕ್ಕೆ ತಡೆಯೊಡ್ಡಿದರು. ಯಾರು, ಎಷ್ಟೇ ಒತ್ತಡ ಹಾಕಿದರೂ ಕಾನೂನುಬಾಹಿರ ಕೆಲಸಗಳನ್ನು ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದರು. ಅಷ್ಟೇ ಅಲ್ಲ, ಅವರಿಗೆ ಬೆಂಬಲವಾಗಿಯೂ ನಿಂತಿದ್ದರು. ಇದೇ ಅವರಿಗೆ ಮುಳುವಾಯಿತು.

ಅರುಣ್‌ ಅವರು ಅಧಿಕಾರ ಸ್ವೀಕರಿಸಿದ ದಿನದಿಂದಲೇ ಕಟ್ಟುನಿಟ್ಟಿನ ಕಾನೂನು ಅನುಷ್ಠಾನಕ್ಕೆ ಮುಂದಾದರು. ಜೂಜು, ಮಟ್ಕಾ, ವೇಶ್ಯಾವಾಟಿಕೆ, ಅಕ್ರಮ ಪಡಿತರ ಅಕ್ಕಿ ಮಾರಾಟ ಸೇರಿದಂತೆ ಎಲ್ಲ ರೀತಿಯ ಅಕ್ರಮಗಳಿಗೆ ತಡೆ ಒಡ್ಡಿದರು. ಇವರ ಭಯಕ್ಕೆ ಕೆಲ ಬೆಟ್ಟಿಂಗ್‌, ಮಟ್ಕಾಕೋರರು ಊರು ಬಿಟ್ಟರು.

ರಾತ್ರಿ ಹತ್ತು ಗಂಟೆಯ ನಂತರ ಡಿ.ಜೆ ಬಳಕೆ ಮೇಲೆ ಸುಪ್ರೀಂಕೋರ್ಟ್‌ ಹೇರಿರುವ ನಿಷೇಧವನ್ನು ಗಣೇಶ ಉತ್ಸವದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದರು. ಅವರ ಕೆಲಸಕ್ಕೆ ಹೃದಯ ಸಂಬಂಧಿ ಕಾಯಿಲೆ ಇದ್ದವರು, ಹಿರಿಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈದ್‌–ಮಿಲಾದ್‌, ಬಕ್ರೀದ್‌, ದಸರಾ ವೇಳೆ ಬೇಕಾಬಿಟ್ಟಿ ಮಾಡುತ್ತಿದ್ದ ಮೆರವಣಿಗೆಗಳಿಗೆಲ್ಲ ಕಡಿವಾಣ ಹಾಕಿದ್ದರು. ದೀಪಾವಳಿಯಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆಸಿ 450ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ, ನಗದು ವಶಪಡಿಸಿಕೊಂಡು ಅನೇಕರನ್ನು ಬಂಧಿಸಿದ್ದರು.

ಸಚಿವ ಆನಂದ್‌ ಸಿಂಗ್‌ ವಿರುದ್ಧ ಪರಿಶಿಷ್ಟ ಜಾತಿಯ ಡಿ.ಪೋಲಪ್ಪ ಎಂಬುವರು ಜಾತಿ ನಿಂದನೆ, ಕೊಲೆ ಬೆದರಿಕೆ ಬಗ್ಗೆ ಆರೋಪ ಮಾಡಿದಾಗ ಸಂಪುಟ ದರ್ಜೆಯ ಸಚಿವರೆಂಬುದನ್ನು ನೋಡದೇ ಪ್ರಕರಣ ದಾಖಲಿಸಿದ್ದರು. ಆಗ ಅವರ ಬಗ್ಗೆ ಜನರಲ್ಲಿ ಇನ್ನಷ್ಟು ಗೌರವ ಹೆಚ್ಚಾಗಿತ್ತು. ಯಾರ ಮುಲಾಜಿಗೂ ಒಳಗಾಗದೇ ಕೆಲಸ ಮಾಡುತ್ತಿದ್ದದ್ದೇ ಅವರ ಎತ್ತಂಗಡಿಗೆ ಮುಖ್ಯ ಕಾರಣವಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT