ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಹೆದ್ದಾರಿ ‘ತಡೆ’ಯುವ ಬಿಡಾಡಿ ದನಗಳು, ವಾಹನ ಸವಾರರಿಗೆ ತೊಂದರೆ

Published 18 ಜುಲೈ 2023, 5:22 IST
Last Updated 18 ಜುಲೈ 2023, 5:22 IST
ಅಕ್ಷರ ಗಾತ್ರ

ಹರಪನಹಳ್ಳಿ: ಹಸುಗಳ ಹಾಲು ಹಿಂಡಿಕೊಂಡು ಮಾಲೀಕರು ಬೀದಿಗೆ ಅಟ್ಟುತ್ತಿರುವುದರಿಂದ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಮಲಗುವ ಬಿಡಾಡಿ ದನಗಳು ಹೆಚ್ಚಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿ ಎಕ್ಕುಂಬಿ-ಮೊಳಕಾಲ್ಮೂರು -2, ಹೊಸಪೇಟೆ- ಶಿವಮೊಗ್ಗ -25 ಮತ್ತು ಮಂಡ್ಯ– ಹಡಗಲಿ 47, ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಇಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣವಾಗಿರುವ ಪರಿಣಾಮ ಹೆದ್ದಾರಿಗಳು ಕಿರಿದಾಗಿವೆ. ಪ್ರಮುಖ ವೃತ್ತ, ರಸ್ತೆಯ ಮಧ್ಯಭಾಗದಲ್ಲಿ ಬಿಡಾಡಿ ದನಗಳು ಅಡ್ಡಲಾಗಿ ಮಲಗುತ್ತಿದ್ದು, ವಾಹನ ಸಂಚಾರಕ್ಕೆ ಕಷ್ಟವಾಗಿದೆ. ಅಲ್ಲಲ್ಲಿ ನಿಲ್ಲಿಸುವ ಬೈಕ್‌ನ ಚೀಲಗಳಲ್ಲಿ ಇಟ್ಟಿರುವ ಕಾಗದ ಪತ್ರಗಳನ್ನು ದನಗಳು ತಿನ್ನುವುದರಿಂದ ಸವಾರರು ರೋಸಿ ಹೋಗಿದ್ದಾರೆ.

ʼ150ಕ್ಕೂ ಅಧಿಕವಿರುವ ಬಿಡಾಡಿ ದನಗಳು ಕೆಲವು ದೇವಸ್ಥಾನಗಳಿಗೆ ಸೇರಿವೆ. ಇನ್ನೂ ಕೆಲವು ಖಾಸಗಿಯವರಿಗೆ ಸಂಬಂಧಪಟ್ಟಿವೆ. ಅವುಗಳನ್ನು ರಸ್ತೆಗಳಿಗೆ ಬಿಡದಂತೆ ಎಚ್ಚರಿಕೆ ನೀಡಲಾಗಿದೆʼ ಎಂದು ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ ತಿಳಿಸಿದರು. ಹೊಸಪೇಟೆ-ಶಿವಮೊಗ್ಗ ರಾಜ್ಯಹೆದ್ದಾರಿ 4.5 ಕಿ.ಮೀ, ಮಂಡ್ಯ– ಹಡಗಲಿ ರಾಜ್ಯಹೆದ್ದಾರಿ 3 ಕಿ.ಮೀ. ಹಾದು ಹೋಗಿದೆ. ಇವುಗಳ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಗಾಗಿ 8 ತಿಂಗಳಲ್ಲಿ 14ಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಇವುಗಳ ಪೈಕಿ 4 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಇಲಾಖೆ ಮೂಲಗಳು ಖಚಿತಪಡಿಸಿವೆ.

ಪಾದಚಾರಿ ಮಾರ್ಗ ಅತಿಕ್ರಮಣ; ತೆರವಿಗೆ ಒತ್ತಾಯ: ಪಾದಚಾರಿ ಮಾರ್ಗ ಅತಿಕ್ರಮಿಸಿರುವ ವ್ಯಾಪಾರಿಗಳ ಸಂಖ್ಯೆ ಅಧಿಕವಾಗಿ ಜನರು ರಸ್ತೆಯಲ್ಲಿ ಓಡಾಡುತ್ತಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ನಡೆಸುತ್ತಿದ್ದರೆ ಜನರು ಅನಿವಾರ್ಯವಾಗಿ ರಸ್ತೆಗಿಳಿದು ಓಡಾಡುತ್ತಿದ್ದಾರೆ.

ಪುರಸಭೆಯ ಸುತ್ತಲೂ ಹಣ್ಣಿನ ಅಂಗಡಿ, ಬಟ್ಟೆ ಅಂಗಡಿ, ಚಿಲ್ಲರೆ ವ್ಯಾಪಾರಿ ಶೆಡ್‌ ಇಟ್ಟುಕೊಂಡಿರುವ ಪರಿಣಾಮ ಪಾದಚಾರಿ ಮಾರ್ಗ ಮಾಯವಾಗಿದೆ. ವಿವಿಧ ಕೆಲಸಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನ ನಿಲ್ಲಿಸಲು ಕಿರಿಕಿರಿ ಅನುಭವಿಸುತ್ತಿದ್ದಾರೆ. ಪುಟ್ ಪಾತ್ ಅತಿಕ್ರಮಣ ತೆರವುಗೊಳಿಸಿ ಜನರ ಓಡಾಟ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಮುಕ್ತಿ ಕೊಡುವಂತೆ ಪಟ್ಟಣದ ಜನತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಹರಪನಹಳ್ಳಿ ಪಟ್ಟಣದ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಮಲಗಿರುವ ಬಿಡಾಡಿ ದನಗಳು
ಹರಪನಹಳ್ಳಿ ಪಟ್ಟಣದ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಮಲಗಿರುವ ಬಿಡಾಡಿ ದನಗಳು
ಬಿಡಾಡಿ ದನಗಳ ಮಾಲೀಕರಿಗೆ ಅಂತಿಮ ಬಹಿರಂಗ ನೊಟೀಸ್‌ ಹೊರಡಿಸುತ್ತೇವೆ. ಆಗಲೂ ಮಾಲೀಕರು ರಸ್ತೆಗೆ ಬಿಟ್ಟರೆ ದನಗಳನ್ನು ಸೆರೆಹಿಡಿದು ಗೋಶಾಲೆಗಳಿಗೆ ಕಳಿಸಲಾಗುವುದು
–ಶಿವಕುಮಾರ, ಎರಗುಡಿ ಮುಖ್ಯಾಧಿಕಾರಿ ಹರಪನಹಳ್ಳಿ
ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಗಳು ಹದಗೆಟ್ಟು ಗುಂಡಿಗಳಾದರೆ ದುರಸ್ತಿ ಮಾಡಿಸುವುದಷ್ಟೇ ನಮ್ಮ ಇಲಾಖೆ ಜವಾಬ್ದಾರಿ
–ಸತೀಶ್ ಪಾಟೀಲ್, ಎಇಇ ಲೋಕೋಪಯೋಗಿ ಇಲಾಖೆ ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT