ಬಳ್ಳಾರಿ: ತೋರಣಗಲ್‌ನ ‘ಜಿಂದಾಲ್ ಸ್ಟೀಲ್ ಲಿಮಿಟೆಡ್’ನಲ್ಲಿ (JSW) ಗುರುವಾರ ನೀರಿನ ಟ್ಯಾಂಕ್‌ಗೆ ಬಿದ್ದು ಮೂವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಎಚ್‌ಎಸ್‌ಎಂ-03 ಘಟಕದ ಉಸ್ತುವಾರಿ ಉಪಾಧ್ಯಕ್ಷ ಸೇರಿದಂತೆ 6 ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗಿದೆ.
ದುರಂತದಲ್ಲಿ ಸಾವಿಗೀಡಾಗಿದ್ದ ಹೊಸಪೇಟೆಯ ಭುವನಹಳ್ಳಿಯ ಗಂಟೆ ಜಡಿಯಪ್ಪ ಅವರ ತಮ್ಮ ಮಹೇಂದ್ರ ಅವರು ಘಟನೆಗೆ ಸಂಬಂಧಿಸಿದಂತೆ ತೋರಣಗಲ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಆಧರಿಸಿ, ಎಚ್‌ಎಸ್‌ಎಂ–3 ಘಟಕದ ಉಸ್ತುವಾರಿ ಉಪಾಧ್ಯಕ್ಷ, ಸುರಕ್ಷತೆ ವಿಭಾಗದ ಎವಿಪಿ, ಸುರಕ್ಷತೆ ವಿಭಾಗದ ವ್ಯವಸ್ಥಾಪಕ, ಸಿವಿಲ್ ವಿಭಾಗದ ಅಧಿಕಾರಿ, ಸುರಕ್ಷತೆ ವಿಭಾಗದ ಸೂಪರ್‌ವೈಸರ್, ಮೆಕಾನಿಕಲ್ ವಿಭಾಗದ ಉಸ್ತುವಾರಿ ಅಧಿಕಾರಿ ಸೇರಿದಂತೆ ಆರು ಅಧಿಕಾರಿಗಳ ವಿರುದ್ಧ ಐಪಿಸಿಯ ಸೆಕ್ಷನ್ 304(ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಪ್ರಕರಣ ದಾಖಲಿಸಲಾಗಿದೆ. ಆದರೆ, ಎಫ್‌ಐಆರ್‌ನಲ್ಲಿ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿಲ್ಲ.
ಗರ್ಭಿಣಿ ಪತ್ನಿಯನ್ನು ಅಗಲಿದ ಜಡಿಯಪ್ಪ
ಮೃತ ಜಡಿಯಪ್ಪಗೆ ಒಂದು ವರ್ಷದ ಹಿಂದೆ ಕಂಪ್ಲಿ ವಾಸಿ ರಮೇಶಪ್ಪ ಎಂಬುವವರ ಪುತ್ರಿ ಸಂಧ್ಯಾ ಅವರೊಂದಿಗೆ ಮದುವೆ ಮಾಡಲಾಗಿತ್ತು. ಸಂಧ್ಯಾ ಗರ್ಭಿಣಿ ಎಂಬ ಅಂಶವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಜಡಿಯಪ್ಪನು 5 ವರ್ಷಗಳಿಂದ ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.