ಮರಿಯಮ್ಮನಹಳ್ಳಿ: ರಂಗಭೂಮಿ ಪರಂಪರೆಗೆ ತನ್ನದೇ ಆದ ಆಳವಾದ ಬೇರುಗಳಿದ್ದು, ಹೊಸ ಹೊಸ ಪ್ರಯೋಗಗಳ ಮೂಲಕ ಆ ಬೇರುಗಳನ್ನು ಗಟ್ಟಿಗಳಿಸುತ್ತಾ ಹೋಗಬೇಕಿದೆ ಎಂದು ಸಾಹಿತಿ ಪಿ.ಪೀರ್ ಬಾಷ ಹೇಳಿದರು.
ಸ್ಥಳೀಯ ದುರ್ಗಾದಾಸ್ ರಂಗಮಂದಿರದಲ್ಲಿ ಶುಕ್ರವಾರ ರಾತ್ರಿ ರಂಗಚೌಕಿ ಕಲಾ ಟ್ರಸ್ಟ್‌ನ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನೋಡುಗರಿಗೆ ತಿಳುವಳಿಕೆ ನೀಡುವ ಹಾಗೂ ಜಾಗೃತಿ ಮೂಡಿಸುವಂತಹ ಕೆಲಸವನ್ನು ನಾಟಕ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾಟಕ ನೋಡುತ್ತಾ ವಾಸ್ತವಕ್ಕೆ, ವರ್ತಮಾನಕ್ಕೆ ಬರಬೇಕು ಎನ್ನುವ ರೀತಿಯಲ್ಲಿ ಹೊಸ ಅಲೆಯ ನಾಟಕಗಳು ಬರುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕ ಬಿ.ಎಂ.ಎಸ್.ಪ್ರಭು, ಹಿರಿಯ ಕಲಾವಿದ ಕೆ.ಹನುಮಂತಪ್ಪ, ಪೌರಕಾರ್ಮಿಕ ಮಹಿಳೆ ಎಚ್.ಪದ್ಮಾವತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೆಪಿಸಿಪಿ ಸದಸ್ಯ ಕೆ.ಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಜಾನಪದ ಕಲಾವಿದೆ ಪದ್ಮಶ್ರೀ ಮಂಜಮ್ಮ ಜೋಗತಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ, ಸದಸ್ಯ ಕೆ.ಮಂಜುನಾಥ, ಪೂಜಾರ್ ಬಸವರಾಜ, ಟ್ರಸ್ಟ್‍ನ ಅಧ್ಯಕ್ಷ ಸರದಾರ್, ಕಾರ್ಯದರ್ಶಿ ಪಿ.ಪುಷ್ಪ ಇದ್ದರು.
ನಂತರ ಬೆಂಗಳೂರಿನ ಜಂಗಮ ಕಲೆಕ್ಟಿವ್ ಸಂಘಟನೆಯ ಕಲಾವಿದರು ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ನಾಟಕ ಪ್ರದರ್ಶಿಸಿದರು.