ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲೆಗೆ ಮಕ್ಕಳು ನಿತ್ಯ 5 ಕಿ.ಮೀ ನಡಿಗೆ

ಮುದ್ದಟನೂರು ನವಗ್ರಾಮದ ವಿದ್ಯಾರ್ಥಿಗಳಿಗೆ ಬಸ್‌ ತೊಂದರೆ
Published 20 ಜೂನ್ 2024, 7:11 IST
Last Updated 20 ಜೂನ್ 2024, 7:11 IST
ಅಕ್ಷರ ಗಾತ್ರ

ಕುರುಗೋಡು: ಶಾಲೆಗೆ ತೆರಳಲು ನಿತ್ಯ 5 ಕಿ.ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಬೇಕು. ಬೆಳಿಗ್ಗೆ ಶಾಲೆಗೆ ಹೋದ ಮಕ್ಕಳು ಮನೆ ಸೇರುವುದು ರಾತ್ರಿಯಾಗುತ್ತದೆ. ಮಕ್ಕಳು ಶಾಲೆಯಿಂದ ಮನೆಗೆ ಬರುವ ದಾರಿಕಾಯುವ ಕಾಯಕ ಪೋಷಕರದು.

ಮುದ್ದಟನೂರು ನವಗ್ರಾಮದ ವಿದ್ಯಾರ್ಥಿಗಳು ಮತ್ತು ಜನರನ್ನು ಕಾಡುತ್ತಿರುವ ಜೀವನಂತ ಸಮಸ್ಯೆ ಇದು....

ಸ್ಥಳೀಯವಾಗಿ 1 ರಿಂದ 5ನೇ ತರಗತಿಯ ವರೆಗೆ ಕಿರಿಯ ಪ್ರಾಥಮಿಕ ಶಾಲೆ ಇದೆ. 6 ರಿಂದ 10ನೇ ತರಗತಿಯ ವರೆಗೆ ಓದಲು 5 ಕಿ.ಮೀ. ದೂರದ ಮುದ್ದಟನೂರು ಅಥವಾ ಹಾವಿನಹಾಳು ಗ್ರಾಮದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತೆರಳಬೇಕು.

ಗ್ರಾಮದಿಂದ ನಿತ್ಯ 60ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಾರೆ. ಸಾರಿಗೆ ಇಲಾಖೆ ಬಸ್ ಈ ಮಾರ್ಗದಲ್ಲಿ ನಿತ್ಯ ಸಂಚರಿಸದ ಕಾರಣ ವಿದ್ಯಾರ್ಥಿಗಳು 5 ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ.

ಬೆಳಿಗ್ಗೆ 9.45ಕ್ಕೆ ಶಾಲೆ ಪ್ರಾರಂಭವಾದರೆ ವಿದ್ಯಾರ್ಥಿಗಳು 8ಗಂಟೆಗೆ ಮನೆಯಿಂದ ಬಿಡಬೇಕು. ಸಂಜೆ 4.45ಕ್ಕೆ ಶಾಲೆಬಿಟ್ಟರೆ ಮನೆಸೇರಲು ಸಂಜೆ 6.30 ಆಗುತ್ತದೆ.

ನಿತ್ಯ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುವ ಅನಿವಾರ್ಯತೆ ತಲೆದೂರಿದ ಪರಿಣಾಮ ಕೆಲವು ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳಿಗ್ಗೆ ಮತ್ತು ಸಂಜೆ ಸಿರುಗುಪ್ಪ ಬಸ್ ಡಿಪೋ ದಿಂದ ಬಸ್ ಸಂಚರಿಸಲು ಕ್ರಮಕೈಗೊಳ್ಳುವಂತೆ ಅನೇಕಬಾರಿ ಪ್ರತಿಭಟಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮತ್ತೊಮ್ಮೆ ಒತ್ತಾಯಮಾಡಿದರೆ ಒಂದೆರಡು ದಿನ ಬಸ್ ಸಂಚರಿಸುತ್ತದೆ. ನಂತರ ಬರುವುದಿಲ್ಲ ಎಂದು ಗ್ರಾಮದ ರೇಣುಕಾ, ರಾಮಪ್ಪ, ಪ್ರಭಾವತಿ, ರಾಧಿಕ, ಹುಲಿಗೆಮ್ಮ, ಮುತ್ತಮ್ಮ, ಮಾರುತಿ ಮತ್ತು ಬಸವರಾಜ, ಆರೋಪಿಸುತ್ತಾರೆ.

ಬಸ್ ವ್ಯವಸ್ಥೆ ಮಾಡಲು ಅಧಿಕಾರಿಗಳು ಸಮ್ಮತಿಸಿದ್ದಾರೆ. ಸ್ಪಂದಿಸದಿದ್ದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೋರಾಟ ತೀವ್ರಗೊಳಿಸಬೇಕಾಗುತ್ತದೆ.
–ವಕೀಲ ರಾಮಬಾಬು, ಸ್ಥಳೀಯ ನಿವಾಸಿ
ಸಿರುಗುಪ್ಪ ಸಿರಿಗೇರಿ ಮುದ್ದಟನೂರು ಮತ್ತು ಹಾವಿನಹಾಳು ಮಾರ್ಗವಾಗಿ ಬಸ್ ಸಂಚರಿಸಲು ಕ್ರಮಕೈಗೊಳ್ಳಲಾಗುವುದು.
– ತಿರುಮಲೇಶ, ಬಸ್ ಘಟಕದ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT