ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹1 ಹಿಂದೆ ರೈತ, ಒಕ್ಕೂಟದ ಹಿತ

ಶುಭಂ ಗೋಲ್ಡ್‌ ಹಾಲಿನ ಸಂಗ್ರಹ, ಸಂಸ್ಕರಣೆ ವೆಚ್ಚದಾಯಕ: ರಾಬಕೊವಿ
Published 3 ಜುಲೈ 2024, 5:42 IST
Last Updated 3 ಜುಲೈ 2024, 5:42 IST
ಅಕ್ಷರ ಗಾತ್ರ

ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಉತ್ಪಾದಕರ ಒಕ್ಕೂಟವೂ ಸೇರಿದಂತೆ ಬೆರಳೆಣಿಕೆಯ ಒಕ್ಕೂಟದ ವ್ಯಾಪ್ತಿಯಲ್ಲಿ ಮಾತ್ರ ಸಿಗುತ್ತಿರುವ ಕೇಸರಿ ಬಣ್ಣದ ಪ್ಯಾಕೆಟ್‌ನ ‘ನಂದಿನಿ ಶುಭಂ ಗೋಲ್ಡ್‌’ ಹಾಲಿನ ಬೆಲೆಯ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ನಡೆಯುತ್ತಿದೆ.

ಅರ್ಧ ಲೀಟರ್‌ ಶುಭಂ ಗೋಲ್ಡ್‌ ಹಾಲನ್ನು ₹28ಕ್ಕೆ ಮಾರಾಟ ಮಾಡಬೇಕಿತ್ತು. ಆದರೆ, ಒಕ್ಕೂಟವೇ ₹29 (₹1 ಹೆಚ್ಚುವರಿ) ಮಾರಾಟ ಮಾಡುತ್ತಿದೆ ಎಂದು ಗ್ರಾಹಕ ವಲಯದಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದರೆ, ರಾಬಕೊವಿ ತನ್ನದೇ ಕಾರಣಗಳನ್ನು ಮುಂದಿಟ್ಟು ಬೆಲೆಯನ್ನು ಸಮರ್ಥಿಸಿಕೊಂಡಿದೆ. 

ಶುಭಂ ಗೋಲ್ಡ್‌ ಹಾಲು ಬೇರೆಲ್ಲ ಮಾದರಿಯ ಪೊಟ್ಟಣಗಳ ಹಾಲಿಗಿಂತಲೂ ವಿಭಿನ್ನವಾಗಿದ್ದು,  ಹೆಚ್ಚಿನ ಕೊಬ್ಬು ಮತ್ತು ಎಸ್‌ಎನ್‌ಎಫ್‌ ಅನ್ನು ಹೊಂದಿದೆ. ಇಷ್ಟು ಪ್ರಮಾಣದ ಕೊಬ್ಬಿನಾಂಶವಿರುವ ಹಾಲನ್ನು ಒಕ್ಕೂಟವೂ ರೈತರಿಂದ ಹೆಚ್ಚಿನ ದರಕ್ಕೆ ಖರೀದಿಸುತ್ತಿದೆ. ಪ್ರತ್ಯೇಕವಾಗಿ ಸಂಗ್ರಹ ಮಾಡಿ, ಸಂಸ್ಕರಿಸಿ, ಪ್ಯಾಕೇಜ್‌ ಮಾಡುತ್ತಿರುವುದರಿಂದ ಇದರ ಉತ್ಪಾದನಾ ವೆಚ್ಚವೂ ಅಧಿಕವಾಗಿದೆ. ಜತೆಗೆ, ಸಾರಿಗೆ ವೆಚ್ಚವೂ ಸೇರಿಕೊಳ್ಳುತ್ತಿದೆ. 

ಒಕ್ಕೂಟದ ವ್ಯಾಪ್ತಿಯಲ್ಲಿ ನಿತ್ಯ 55000 ಲೀಟರ್‌ನಷ್ಟು ಶುಭಂ ಗೋಲ್ಡ್‌ ಹಾಲಿಗೆ ಬೇಡಿಕೆ ಇದೆ. ಈ ಹಾಲಿನಲ್ಲಿ ಶೇ. 5ರಷ್ಟು ಕೊಬ್ಬು ಮತ್ತು ಶೇ. 9ರಷ್ಟು ಎಸ್‌ಎನ್‌ಎಫ್‌ (ಜಿಡ್ಡಿನಂಶವಲ್ಲದ ಘನವಸ್ತು) ಇದೆ. ಇಷ್ಟು ಪ್ರಮಾಣದ ಕೊಬ್ಬು ಮತ್ತು ಎಸ್‌ಎನ್‌ಎಫ್‌ ಇರುವ ಹಾಲನ್ನು ರೈತರಿಂದ ಒಕ್ಕೂಟವು ಕೂಡ ₹40–42ಕ್ಕೆ ಖರೀದಿಸಿ ತರುತ್ತದೆ. ರಾಬಕೊವಿ ಒಕ್ಕೂಟವು ನಾಲ್ಕು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು, ಇದರ ಪರಿಮಿತಿಯೂ ವಿಶಾಲವಾಗಿದೆ. ವಿಜಯನಗರ ಕೊನೇ ಹಳ್ಳಿಯಿಂದ ರಾಯಚೂರಿನ ಕೊನೆ ಹಳ್ಳಿ ವರೆಗೆ ಹೆಚ್ಚು ಕಡಿಮೆ 300ರಿಂದ 320 ಕಿ.ಮೀಗಳ ಅಂತರವಿದ್ದು, ಈ ನಾಲ್ಕೂ ಜಿಲ್ಲೆಗಳಲ್ಲಿ ಹಾಲನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ತಂದು ಒಂದೆಡೆ ಸಂಸ್ಕರಿಸುವುದೇ ತ್ರಾಸದಾಯಕ. ಈ ಹಾಲಿನ ಉತ್ಪಾದನೆಯಲ್ಲಿ ರಬಕೊವಿಗೆ ಸಾರಿಗೆ ವೆಚ್ಚವೂ ಅಧಿಕವಾಗಿದೆ.  ಹಾಗಾಗಿ ಅರ್ಧ ಲೀಟರ್‌ಗೆ ₹1 ಹೆಚ್ಚಿಗೆ ಪಡೆಯಲೇ ಬೇಕಾದ ಪರಿಸ್ಥಿತಿ ಇದೆ ಎಂದು ಒಕ್ಕೂಟ ಹೇಳುತ್ತಿದೆ. 

ಈಗಿನ ಬೆಲೆಯಲ್ಲಿ ಶುಭಂ ಗೋಲ್ಡ್‌ ಹಾಲನ್ನು ಮಾರಾಟ ಮಾಡದೇ ಹೋದರೆ ಅದರ ನೇರ ಪರಿಣಾಮ ರೈತರ ಮೇಲೆ ಬೀಳುತ್ತದೆ. ಇಲ್ಲವೇ ಸಂಸ್ಥೆಗೆ ಪ್ರತಿ ತಿಂಗಳೂ ಅಂದಾಜು ₹30 ಲಕ್ಷದಷ್ಟು ನಷ್ಟ ಸಂಭವಿಸುತ್ತದೆ. ಇಡೀ ಉತ್ಪಾದನಾ ವೆಚ್ಚವನ್ನು ಗ್ರಾಹಕರ ಮೇಲೂ ಹೊರಿಸಲು ಸಾಧ್ಯವಿಲ್ಲ.  ಇದೆಲ್ಲದರ ಪರಿಣಾಮಗಳನ್ನು ಪರಿಶೀಲನೆ ಮಾಡಿಯೇ ನ್ಯಾಯಯುತ ಬೆಲೆ ನಿಗದಿ ಮಾಡಲಾಗಿದೆ. ರೈತರ ಮೇಲಾಗಲಿ, ಗ್ರಾಹಕರ ಮೇಲಾಗಲಿ ಹೊರೆ ಹೊರೆಸುವುದು ನಮ್ಮ ಉದ್ದೇಶವಲ್ಲ’ ಎನ್ನುತ್ತಾರೆ ಒಕ್ಕೂಟದ ವ್ಯವಸ್ಥಾಪ ನಿರ್ದೇಶಕ ಪೀರ್ಯ ನಾಯಕ್‌ 

ಹೆಚ್ಚಾದರೂ ಹಾಲು ಖರೀದಿ 

ಒಕ್ಕೂಟದ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಪ್ಯಾಕೆಟ್‌ನ ಒಟ್ಟು ₹1.55 ಲಕ್ಷ ಲೀಟರ್‌ ಹಾಲಿಗೆ ಮತ್ತು 12 ಸಾವಿರ ಲೀಟರ್‌ನಷ್ಟು ಮೊಸರಿಗೆ ಬೇಡಿಕೆ ಇದೆ. ಆದರೆ, ನಿತ್ಯ 2.27 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು, 65 ಸಾವಿರ ಲೀಟರ್‌ ಹಾಲು ಉಳಿಯುತ್ತಿದೆ. ಹೆಚ್ಚುವರಿಯಾದ ಹಾಲನ್ನು ರೈತರಿಂದ ಖರೀದಿಸಲು ನಿರಾಕರಿಸಿದರೆ, ಅವರಿಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಹಾಲನ್ನು ಖರೀದಿ ಮಾಡುತ್ತಿರುವ ಒಕ್ಕೂಟ ಅದನ್ನು ಪರಿವರ್ತಿಸಿ ಪುಡಿ ಮಾಡಿಡುತ್ತಿದೆ. ಹೀಗಾಗಿ ಸಂಸ್ಥೆಗೆ ಹೆಚ್ಚುವರಿ ಹಾಲಿನ ಪರಿವರ್ತನೆ ವೆಚ್ಚದಾಯಕವಾಗಿದ್ದು, ನಷ್ಟವುಂಟಾಗುತ್ತಿದೆ ಎಂದು ಮೂಲಗಳು ಹೇಳಿವೆ. ಸಂಸ್ಥೆ ಕಳೆದ ಮೇ ₹40 ಲಕ್ಷ ನಷ್ಟ ಅನುಭವಿಸಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಶುಭಂ ಗೋಲ್ಡ್‌ ಹಾಲಿನ ಬೆಲೆಗೆ ಸಮರ್ಥನೆ: ಹಾಲಿನಲ್ಲಿ ಫ್ಯಾಟ್‌ ಮತ್ತು ಎಸ್‌ಎನ್ಎಫ್‌ ಉತ್ಕೃಷ್ಟವಾಗಿರುವುದು, ರೈತರಿಗೆ ಹೆಚ್ಚಿನ ದರ ನೀಡಿ ಖರೀದಿಸುತ್ತಿರುವುದು, ಸಂಗ್ರಹ, ಸಂಸ್ಕರಣೆ, ಸಾರಿಗೆ ವೆಚ್ಚ ಅಧಿಕವಾಗಿರುವುದಾಗಿ ಒಕ್ಕೂಟ ಸಮರ್ಥನೆ ನೀಡಿದೆ.

ಪೀರ‍್ಯಾ ನಾಯಕ್‌ 
ಪೀರ‍್ಯಾ ನಾಯಕ್‌ 

ಚುನಾವಣೆ ಮುಂದೂಡಿಕೆ ಬಳ್ಳಾರಿ: ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ಜುಲೈ 12ರಂದು ನಡೆಯಬೇಕಿದ್ದ ಚುನಾವಣೆಗೆ ಧಾರವಾಡದ ಹೈಕೋರ್ಟ್‌ ಪೀಠ ಸೋಮವಾರ ತಡೆ ನೀಡಿದೆ. ಕರೂರು ಹಾಲು ಉತ್ಪಾದಕರ ಸಹಕಾರ ಸಂಘ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಪೀಠ ಚುನಾವಣೆಗೆ ತಡೆ ನೀಡಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT