ಕಂಪ್ಲಿ: ‘ಸಂಪೂರ್ಣ ಐದು ವರ್ಷಗಳ ಅವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರಲಿದ್ದಾರೆ’ ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.
ತಾಲ್ಲೂಕಿನ ಬಳ್ಳಾಪುರ ಗ್ರಾಮದಲ್ಲಿ ₹35ಲಕ್ಷ ವೆಚ್ಚದ ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದ ಬಿಜೆಪಿ ಮುಖಂಡರು ಅಸಮಾಧಾನದ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‍ನ ಎಲ್ಲ ಶಾಸಕರು, ಮಠಾಧೀಶರ ಜೊತೆಗೆ ಬಿಜೆಪಿಯ ಕೆಲ ಶಾಸಕರ ಬೆಂಬಲವೂ ಇದೆ’ ಎಂದು ಹೇಳಿದರು.
ಗ್ರಾಮದ ರಸ್ತೆಗಳ ಅಭಿವೃದ್ಧಿ ಮತ್ತು ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಒದಗಿಸುವ ಕುರಿತಂತೆ ರೈತರೊಂದಿಗೆ ಸಮಾಲೋಚಿಸಿದರು.
ಇದಕ್ಕೂ ಮುನ್ನ ಶ್ರೀರಾಮರಂಗಾಪುರದಲ್ಲೂ ₹21.49ಲಕ್ಷ ವೆಚ್ಚದ ಸಿ.ಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರೆವೇರಿಸಿದರು. ಮುಖಂಡರಾದ ಬಿ. ಲಿಂಗಪ್ಪ, ಮೌನೇಶ್, ಜಡೆಪ್ಪ, ಎಸ್.ಆರ್. ಪುರದ, ಬಿ. ವೆಂಕಟಪತಿ, ವಿ. ರಾಮಾಂಜನೇಯಲು, ಬಿ. ಮಂಜುನಾಥ, ಶ್ರೀನಿವಾಸ, ನಾಗಭೂಷಣ ಇದ್ದರು.