ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ | ದಕ್ಕಿದ್ದರಲ್ಲೇ ದಾನ ಮಾಡುವ ರೈತರು

Published 17 ಡಿಸೆಂಬರ್ 2023, 4:55 IST
Last Updated 17 ಡಿಸೆಂಬರ್ 2023, 4:55 IST
ಅಕ್ಷರ ಗಾತ್ರ

ಕಂಪ್ಲಿ: ಪ್ರಸಕ್ತ ಬರಗಾಲದಲ್ಲಿಯೂ ಈ ಭಾಗದ ಅನ್ನದಾತರು ತಾವು ಬೆಳೆದ ದವಸ ಧಾನ್ಯವನ್ನು ಬಡ ಕುಟುಂಬಗಳಿಗೆ ನಿಸ್ವಾರ್ಥದಿಂದ ಸ್ವಲ್ಪ ದಾನ ಮಾಡುವ ಮೂಲಕ ಅಕ್ಷರಶಃ ಕಲಿಯುಗದ ದಾನಶೂರ ಕರ್ಣರೆನಿಸಿಕೊಂಡಿದ್ದಾರೆ.

ತಾಲ್ಲೂಕು ವ್ಯಾಪ್ತಿಯ ತುಂಗಭದ್ರಾ ನದಿ, ತುಂಗಭದ್ರಾ ಬಲದಂಡೆ ಮೇಲ್ಮಟ್ಟ, ಕೆಳಮಟ್ಟ, ವಿಜಯನಗರ ಕಾಲುವೆ, ಗೌರಮ್ಮ, ವಿಠ್ಠಲಾಪುರ ಕೆರೆ, ಬೋರ್ ವೆಲ್ ವ್ಯಾಪ್ತಿಯ ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತ ಬೆಳೆಯಲಾಗಿದೆ.

ತಾಲ್ಲೂಕಿನ ರಾಮಸಾಗರ, ದೇವಸಮುದ್ರ, ಸಣಾಪುರ, ಮೆಟ್ರಿ, ಜವುಕು, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ಎಮ್ಮಿಗನೂರು, ಚಿಕ್ಕಜಾಯಿಗನೂರು, ನಂ.10 ಮುದ್ದಾಪುರ ವ್ಯಾಪ್ತಿಯಲ್ಲಿ ಭತ್ತ ಕಟಾವು ನಂತರ ರೈತರು ಹೊಲದಲ್ಲಿಯೇ ರಾಶಿ ಹಾಕಿ ಪೂಜಿಸಿ ಮಾರಾಟ ಮಾಡುವುದು ಸಾಮಾನ್ಯ.

ಆದರೆ, ಇದಕ್ಕು ಮುನ್ನ ರೈತರು ತಮ್ಮ ಹಳ್ಳಿಗಳಲ್ಲಿರುವ ವಿವಿಧ ದೇವಸ್ಥಾನಗಳ ಅರ್ಚಕರು, ಲಿಂಗತ್ವ ಅಲ್ಪಸಂಖ್ಯಾತರು, ಗ್ರಾಮದಲ್ಲಿರುವ ತಳವಾರ ವೃತ್ತಿಯವರು, ವಿಶೇಷವಾಗಿ ಪೀರಲು ದೇವರು ಗುಡಿ ಪೂಜಾರಿ, ಜೊತೆಗೆ ಆರ್ಥಿಕವಾಗಿ ಹಿಂದುಳಿದ ಸಮುದಾಯದವರು 15 ರಿಂದ 20ಜನರಿದ್ದು, ಅವರಿಗೆಲ್ಲ ಭತ್ತ ದಾನ ಮಾಡುತ್ತಾರೆ.

ನಾನು 5 ಎಕರೆಯಲ್ಲಿ ಭತ್ತ ಬೆಳೆದಿದ್ದು 200 ಮೂಟೆ ಇಳುವರಿ ಲಭಿಸಿತ್ತು. ಅದರಲ್ಲಿ ಎರಡು ಮೂಟೆ ಭತ್ತ ಬಡವರಿಗೆ ವಿವಿಧ ದೇವಸ್ಥಾನಗಳ ಅರ್ಚಕರಿಗೆ ದಾನ ಮಾಡಿರುವೆ.
ಊಳೂರು ರಾಜಪ್ಪ, ರೈತ

ಪ್ರತಿ ರೈತ ಕನಿಷ್ಠ ಒಬ್ಬರಿಗೆ 5ರಿಂದ 10 ಸೇರು ದಾನ ಮಾಡುತ್ತಾರೆ. ಅದರಂತೆ ಈ ಋತುಮಾನದಲ್ಲಿ ಇಂಥ ಕುಟುಂಬಗಳು 8ರಿಂದ 10 ಮೂಟೆ ಭತ್ತ ಸಂಗ್ರಹಿಸಿ ಬಳಿಕ ಗಿರಣಿಗಳಲ್ಲಿ ಅಕ್ಕಿ ಮಾಡಿಕೊಂಡು ವರ್ಷ ಪೂರ್ತಿ ಬಳಕೆ ಮಾಡಿಕೊಳ್ಳುತ್ತಾರೆ.

ಕೆಲ ರೈತ ಕುಟುಂಬಗಳು ಮೊದಲಿನಿಂದಲೂ ಮಿತ ಪ್ರಮಾಣದಲ್ಲಿ ಭತ್ತ ದಾನ ಮಾಡುವುದು ವಾಡಿಕೆಯಲ್ಲಿದೆ. ಆದರೆ, ಈ ಬಾರಿ ಸಕಾಲಕ್ಕೆ ಮಳೆ ಕೈಕೊಟ್ಟಿದ್ದು, ಕಾಲುವೆಗಳಿಗೆ ನೀರು ಬಾರದೆ ತೀವ್ರ ಸಂಕಷ್ಟ ಸ್ಥಿತಿ ಇತ್ತು. ಕೆಲವೆಡೆ ವಿಳಂಬವಾದರೂ ಭತ್ತದ ಬೆಳೆಗೆ ನೀರು ದೊರೆಯಿತು. ಇದೀಗ ಭತ್ತ ಒಕ್ಕಲು ನಂತರ ಇಳುವರಿ ಸ್ವಲ್ಪ ಉತ್ತಮವಾಗಿ ಬಂದಿದ್ದು, ಅದರಿಂದ ಸಂತಸಗೊಂಡಿರುವ ರೈತರು ಬೆಳೆದ ಫಲದಲ್ಲಿಯೇ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಿ ಉದಾರತೆ ಮೆರೆಯುತ್ತಿದ್ದಾರೆ. ಮಳೆ, ಗಾಳಿ, ಚಳಿ, ಬಿಸಿಲು ಎನ್ನದೇ ಹೊಲ ಗದ್ದೆಗಳಲ್ಲಿ ಮಣ್ಣು ಕೆಸರು ಮೆತ್ತಿಕೊಂಡು ದುಡಿಯುವ ಶ್ರಮಜೀವಿ ನೇಗಿಲಯೋಗಿಗಳ ಈ ಕೈಂಕರ್ಯ ತಾಲ್ಲೂಕಿನೆಲ್ಲೆಡೆ ಮನೆಮಾತಾಗಿದೆ. ಶ್ರೀ

‘ಪರೋಪಕಾರ ಮಾಡಿದರೆ ಅದರ ಪ್ರತಿಫಲ ಮುಂದೊಂದು ದಿನ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ನಾವು ನಂಬಿದ್ದೇವೆ. ಹಾಗಾಗಿ ಬರಗಾಲವಿದ್ದರೂ ನಮ್ಮ ಕೈಲಾದಷ್ಟು ದವಸ ಧಾನ್ಯ ದಾನ ಮಾಡುತ್ತಿದ್ದೇವೆ’ ಎಂದು ಮೆಟ್ರಿ ಗ್ರಾಮದ ರೈತ ಡಂಕನಕಲ್ಲು ಸಿದ್ಧಪ್ಪ ಸಂತೋಷದಿಂದ ತಿಳಿಸಿದರು.

ರೈತರು ಬರಗಾಲದಲ್ಲಿಯೂ ನಿಸ್ವಾರ್ಥದಿಂದ ದವಸ ಧಾನ್ಯ ದಾನ ಮಾಡುತ್ತಿದ್ದು, ನಮ್ಮ ಕುಟುಂಬಕ್ಕೆ ತುಂಬಾ ಅನುಕೂಲವಾಗಿದೆ ಎಂದು ಈಶ್ವರ ದೇವಸ್ಥಾನ ಅರ್ಚಕ ಎನ್.ಎಂ. ಉಮೇಶಸ್ವಾಮಿ ಮತ್ತು ಪೀರಲು ದೇವರ ಗುಡಿ ಪೂಜಾರಿ ಖಾದರ್ ಭಾಷ ಹರ್ಷ ವ್ಯಕ್ತಪಡಿಸಿದರು.

‘ಪರೋಪಕಾರರ್ಥಂ ಇದಂ ಶರೀರಂ’ ಎನ್ನುವ ಮಾತಿನಂತೆ ನಮ್ಮ ಆದಾಯದಲ್ಲಿ ಸ್ವಲ್ಪವಾದರೂ ಪರರಿಗೆ ನೀಡುವ ಮಹಾಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ನಾವು ಈ ಜಗತ್ತಿಗೆ ಏನು ನೀಡುತ್ತೇವೆಯೋ ಅದನ್ನೇ ಮತ್ತೆ ಪಡೆಯುತ್ತೇವೆ ಎನ್ನುವುದು ಮುದ್ದಾಪುರ ಗ್ರಾಮದ ಚಿಟಿಗಿಮಠದ ಎಂ.ಎಸ್. ವಿರೂಪಾಕ್ಷಯ್ಯಸ್ವಾಮಿ ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT